ಬೇಲೂರು: ತಾಲೂಕು ಕಚೇರಿಯಲ್ಲಿ ಅತ್ಯಂತ ಗೌರವದಿಂದ ಆಚರಿಸಬೇಕಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮವು ಈ ಬಾರಿ ಗಂಭೀರ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ನೆರಳಿನಲ್ಲಿ ಸಾಗಿದ್ದು, ವೀರಶೈವ ಮುಖಂಡರ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಘಟನೆ ನಡೆದಿದೆ.
ಇಂದು ನಡೆಯಬೇಕಿದ್ದ ತಾಲೂಕು ಕಚೇರಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಯಾರು ಯಾವ ಇಲಾಖೆ ಪ್ರತಿನಿಧಿಗಳು ಹಾಜರಾಗಿದ್ದಾರೆ ಎಂಬುದೇ ಸ್ಪಷ್ಟವಾಗದ ಸ್ಥಿತಿ ಉಂಟಾಯಿತು. “ಯಾವ ಇಲಾಖೆ ಅಧಿಕಾರಿಗಳು ಇದ್ದಾರೆ? ಯಾರು ಬಂದಿದ್ದಾರೆ ಕೇಳಿ, ಎಂಟ್ರಿ ಮಾಡಿಸಿಕೊಳ್ಳಿ” ಎಂಬ ಮಾತುಗಳು ಕೇಳಿಬಂದವು. ಈ ನಡುವೆ ಕೆಲವರು “ಕಾರ್ಯಕ್ರಮ ಮುಂದುವರಿಸೋಣ” ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅಸಮಾಧಾನಗೊಂಡ ಮುಖಂಡರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಆಡುಗೂರು ಬಸವರಾಜ್ ಹಾಗೂ ರಾಜ್ಯ ಯುವ ಘಟಕದ ಕಾರ್ಯದರ್ಶಿ ವಿಕ್ರಂ ಕೌರಿ ಮಾತನಾಡಿ ಪ್ರತಿ ವರ್ಷವೂ ಇದೇ ರೀತಿ ನಿರ್ಲಕ್ಷ್ಯ, ನಾವು ಬರುವುದೇಕೆ? ಇಲ್ಲಿ ಇರುವವರಲ್ಲಿ ತೊಂಬತ್ತು ಶೇಕಡಾ ನಮ್ಮ ಸಮಾಜದವರೇ. ಇದು ಸರ್ಕಾರಿ ಕಾರ್ಯಕ್ರಮನಾ ಅಥವಾ ಕೇವಲ ಕೆಲವರ ಪ್ರದರ್ಶನನಾ?” ಎಂದು ಪ್ರಶ್ನಿಸಿದರು. ಕೇವಲ ಎರಡು-ಮೂರು ಇಲಾಖೆ ಅಧಿಕಾರಿಗಳು ಮಾತ್ರ ಹಾಜರಾಗಿದ್ದ ವಿಚಾರವೂ ಆಕ್ರೋಶಕ್ಕೆ ಕಾರಣವಾಯಿತು.
ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ವಾಗ್ವಾದ ತೀವ್ರಗೊಂಡಿದ್ದು, “ಈಗ ಬಂದಿಲ್ಲದ ಎಲ್ಲ ಅಧಿಕಾರಿಗಳಿಗೆ ನೋಟಿಸ್ ಕೊಡಬೇಕು” ಎಂಬ ಆಗ್ರಹ ಜೋರಾಯಿತು. ಈ ವೇಳೆ ಮಹಿಳಾ ಅಧಿಕಾರಿ “ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತೇವೆ, ನಾಳೆ ಖಂಡಿತ ನೋಟಿಸ್ ನೀಡುತ್ತೇವೆ” ಎಂದು ಸಮಾಧಾನಪಡಿಸಲು ಯತ್ನಿಸಿದರೂ, ಅದು ಫಲಕಾರಿಯಾಗಲಿಲ್ಲ.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮುಖಂಡರು, “ನಾವು ಈ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ. ಇದು ಯಾವುದೇ ತಾರತಮ್ಯ ಅಲ್ಲ, ಆದರೆ ಈ ರೀತಿಯ ಅವಮಾನವನ್ನು ನಾವು ಸಹಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಣ್ಣನವರ ಜಯಂತಿಗೆ ತಕ್ಕ ಗೌರವ ಸಿಕ್ಕಿಲ್ಲ ಎಂಬುದು ಪ್ರಮುಖ ಆರೋಪವಾಗಿದ್ದು, “ಸರ್ಕಾರಿ ಕಾರ್ಯಕ್ರಮಗಳಿಗೆ ಯಾರೂ ಜವಾಬ್ದಾರಿಯಿಂದ ಬರುತ್ತಿಲ್ಲ. ಶಾಸಕರು ಬನ್ನಿ ಎಂದು ಹೇಳಿದರೂ, ಇಲ್ಲಿ ಇಂತಹ ಅವ್ಯವಸ್ಥೆ ಇದ್ದರೆ ಹೇಗೆ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರ ಜೊತೆಗೆ, ಅಂಬೇಡ್ಕರ್ ಜಯಂತಿಯಲ್ಲಿಯೂ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಕೇಳಿಬಂದಿತು. “ಅಂಬೇಡ್ಕರ್ ಜಯಂತಿಗೂ ಸರಿಯಾದ ಗೌರವ ಕೊಡಲಿಲ್ಲ. ಚೆಂಡು ಹೂವು, ಪ್ಲಾಸ್ಟಿಕ್ ಹೂವು ಹಾಕಿ ಕಾರ್ಯಕ್ರಮ ಮುಗಿಸಿದ್ದಾರೆ. ಇದು ಗೌರವವೇ?” ಎಂದು ಮತ್ತೊಬ್ಬ ವೀರಶೈವ ಮುಖಂಡರು ಪ್ರಶ್ನಿಸಿದರು.
“ತಾಲೂಕು ಆಡಳಿತದ ಮೇಲೆ ಯಾವುದೇ ನಿಯಂತ್ರಣವೇ ಇಲ್ಲ. ಕೇಳೋರು ಇಲ್ಲ, ಹೇಳೋರು ಇಲ್ಲ. ಯಾವ ಸಮಾಜಕ್ಕೂ ನ್ಯಾಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂಬ ಕಟು ಟೀಕೆಗಳು ಕೂಡ ಕೇಳಿಬಂದವು.
ಈ ವೇಳೆ ಶಾಸಕ ಹೆಚ್ ಕೆ ಸುರೇಶ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಾತನಾಡುತ್ತಾ, ಬಸವ ಜಯಂತಿ ಆಚರಣೆಯಲ್ಲಿ ನಡೆದ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಟುವಾಗಿ ಖಂಡಿಸಿದರು.
“ಇಂದು ಜಗಜ್ಯೋತಿ ಬಸವಣ್ಣ ಅವರ 893ನೇ ಜಯಂತಿಯ ಅಂಗವಾಗಿ ಸಮಾಜದ ಎಲ್ಲಾ ಮುಖಂಡರುಗಳು ಗೌರವದಿಂದ ಮಾಲಾರ್ಪಣೆ ಮಾಡಿ ತಾಲೂಕು ಕಚೇರಿಯಲ್ಲಿ ಕಾರ್ಯಕ್ರಮ ನಡೆಸೋಣ ಅಂತ ಬಂದಿದ್ದೇವೆ. ಆದರೆ ಇಲ್ಲಿ ಕಂಡ ಪರಿಸ್ಥಿತಿ ಸಂಪೂರ್ಣ ನಿರಾಸಾಜನಕ. ಇದನ್ನು ನೋಡಿ ಸಮಾಜದ ಮುಖಂಡರು ದಿಗ್ಭ್ರಮೆಗೆ ಒಳಗಾಗಿದ್ದಾರೆ,” ಎಂದು ಹೇಳಿದರು.
ಪೂರ್ವಭಾವಿ ಸಭೆಯನ್ನೇ ಕರೆಯದಿರುವುದನ್ನು ತೀವ್ರವಾಗಿ ಪ್ರಶ್ನಿಸಿದ ಅವರು, “ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳಿಗಿಂತಲೂ ಮುಂಚೆ ಸಭೆ ಕರೆಯುವುದು ಪದ್ಧತಿ. ಸಮಾಜದ ಅಧ್ಯಕ್ಷರು, ಮಹಿಳಾ ಹಾಗೂ ಯುವ ಮುಖಂಡರನ್ನು ಆಹ್ವಾನಿಸುವುದು ರೂಢಿ. ಆದರೆ ಇಲ್ಲಿ ಯಾವುದೂ ನಡೆದಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ,” ಎಂದು ಆರೋಪಿಸಿದರು.
, “ಏಪ್ರಿಲ್ 14ರಂದು ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗೂ ಸಹ 36 ಇಲಾಖೆಯ ಅಧಿಕಾರಿಗಳು ಹಾಜರಾಗಿಲ್ಲ. ಬಸವಣ್ಣನವರ ಜಯಂತಿಗೂ ಬರುವುದಿಲ್ಲ ಅಂದ್ರೆ, ಇನ್ಯಾವ ಹಬ್ಬಗಳಿಗೆ ಬರ್ತಾರೆ?” ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತದ ವಿರುದ್ಧ ಗಂಭೀರ ಆರೋಪ ಮಾಡುತ್ತಾ, “ವಿರೋಧ ಪಕ್ಷದ ಶಾಸಕ ಇದ್ದಾನೆ ಅನ್ನೋ ಕಾರಣಕ್ಕೆ ಈ ರೀತಿಯ ಮಲತಾಯಿ ಧೋರಣೆ ತೋರಲಾಗ್ತಿದೆಯೇ? ಇದನ್ನು ನಾನು ಪ್ರಶ್ನಿಸಬೇಕಾಗಿದೆ. ಇಂತಹ ಅವಮಾನವನ್ನು ನಾವು ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.
ಬಸವಣ್ಣ ಅವರ ತತ್ವಗಳ ಮಹತ್ವವನ್ನು ಒತ್ತಿಹೇಳಿದ ಅವರು, “ಅನುಭವ ಮಂಟಪದ ಮೂಲಕ ಸಂಸತ್ತಿನ ಆದರ್ಶವನ್ನೇ ದೇಶಕ್ಕೆ ಕೊಟ್ಟ ಮಹಾನ್ ನಾಯಕನ ಜಯಂತಿಯನ್ನು ಈ ರೀತಿ ನಿರ್ಲಕ್ಷ್ಯದಿಂದ ಆಚರಿಸುವುದು ಅತ್ಯಂತ ದುಃಖದ ಸಂಗತಿ,” ಎಂದು ವಿಷಾದ ವ್ಯಕ್ತಪಡಿಸಿದರು.
ಕೊನೆಯಲ್ಲಿ ಎಚ್ಚರಿಕೆ ನೀಡಿದ ಅವರು, “ಈ ರೀತಿಯ ಅವಮಾನಗಳು ಮುಂದುವರಿದರೆ ಉಗ್ರ ಹೋರಾಟಗಳು ನಡೆಯುವ ಸಾಧ್ಯತೆ ಇದೆ. ಈ ವಿಷಯವನ್ನು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು,” ಎಂದು ಕಿಡಿಕಾರಿದರು.ಅವರು ಸಮಾಜದ ಮುಖಂಡರ ಬೆಂಬಲದೊಂದಿಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕೊನೆಗೆ, “ಕಾರ್ಯಕ್ರಮ ಬಾಯ್ಕಾಟ್ ಮಾಡೋಣ, ಹೊರಗೆ ಹೋಗೋಣ” ಎಂಬ ಕೂಗುಗಳ ಮಧ್ಯೆ ವೀರಶೈವ ಮುಖಂಡರು ಮತ್ತು ಭಾಗವಹಿಸಿದ್ದವರು ಸಮೂಹವಾಗಿ ಸಭೆಯಿಂದ ಹೊರನಡೆದರು.
ಈ ಘಟನೆ ತಾಲೂಕು ಆಡಳಿತದ ನಿರ್ಲಕ್ಷ್ಯ, ಜವಾಬ್ದಾರಿತನದ ಕೊರತೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೇಲಿನ ಉದಾಸೀನತೆಯನ್ನು ಬಹಿರಂಗಪಡಿಸಿದ್ದು, ಸ್ಥಳೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾದ ಚಂದ್ರಕಲಾ, ಉಪಾಧ್ಯಕ್ಷರಾದ ಯೋಗೇಶ್ ,ಅರುಣ್,ಪ್ರಧಾನ ಕಾರ್ಯದರ್ಶಿ ಬಳ್ಳೂರು ಮದನ್, ಯುವ ಘಟಕದ ಅಧ್ಯಕ್ಷ ಚೇತನ್ ಮಹಿಳಾ ಅಧ್ಯಕ್ಷೆ ವಿಂಪು ಸಂತೋಷ್, ನಿರ್ದೇಶಕರಾದ ಲಕ್ಷ್ಮೀನಾಗರಾಜು, ಉಮಾ, ಹರೀಶ್, ಶಿವಣ್ಣ, ಮುಖಂಡರಾದ ರವಿಕುಮಾರ್, ವಿರೂಪಾಕ್ಷ್, ಇತರರು ಹಾಜರಿದ್ದರು.
