ತುಮಕೂರು : ಮಹಿಳೆಯರಿಗೆ ಲೋಕಸಭೆ, ಶಾಸನಸಭೆಯಲ್ಲಿ ಶೇಕಡ 33ರಷ್ಟು ಮೀಸಲಾತಿ ನೀಡುವ ಆಶಯದ ಮಹಿಳಾ ಮೀಸಲಾತಿ ಮಸೂದೆಯನ್ನು ತಿರಸ್ಕರಿಸಿ, ಮಹಿಳೆಯರ ರಾಜಕೀಯ ಅಧಿಕಾರದ ಅವಕಾಶ ಕಸಿದ ಕಾಂಗ್ರೆಸ್ ಪಕ್ಷಕ್ಕೆ ಇಡೀ ದೇಶದ ಮಹಿಳೆಯರ ಶಾಪ ತಟ್ಟುತ್ತದೆ. ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ನಾಯಕರು ದೇಶದ ಶೇಕಡ 50ರಷ್ಟಿರುವ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಅಲ್ಲದೆ, ಮಹಿಳೆಯರ ಶಕ್ತಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ನಿಜವಾದ ಮಹಿಳಾ ಸಬಲೀಕರಣ ಎಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಮಂಡನೆ ಮಾಡಿದ್ದ ನಾರಿಶಕ್ತಿ ವಂದನ್ ಮಿಸಲಾತಿ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ತಿರಸ್ಕಾರ ಮಾಡಿ ಜಾರಿಯಾಗದಂತೆ ಮಾಡಿದ್ದು ದೇಶದ ಮಹಿಳೆಯರಿಗೆ ಮಾಡಿದ ದ್ರೋಹ ಎಂದರು.
ಮಹಿಳಾ ಮೀಸಲಾತಿಯಿಂದ ಬಿಜೆಪಿ ಮಾತ್ರವಲ್ಲ, ಎಲ್ಲಾ ಪಕ್ಷಗಳ ಮಹಿಳೆಯರಿಗೂ ರಾಜಕೀಯ ಅಧಿಕಾರ ದೊರೆಯುತ್ತದೆ. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರು ಇಲ್ಲದ ಸಬೂಬು ಹೇಳಿಕೊಂಡು ಮಹಿಳೆಯರಿಗೆ ಅಧಿಕಾರ ಕೊಡಲೇಬಾರದು ಕೇವಲ ವೋಟ್ ಬ್ಯಾಂಕ್ ಆಗಿ ಉಳಿಸಿಕೊಳ್ಳಬೇಕು ಎಂಬ ಧೋರಣೆಯನ್ನು ದೇಶ ಮಹಿಳೆಯರು ಖಂಡಿಸುತ್ತಾರೆ. ಬಿಜೆಪಿಯ ಕಾರ್ಯಗಳನ್ನು ವಿರೋಧಿಸುವುದನ್ನೇ ಕಾಂಗ್ರೆಸ್ನವರ ಚಾಳಿಯಾಗಿದೆ. ಬ್ರಿಟೀಷರ ಕಾಲದ ಸಂಸತ್ ಭವನ ದಾಸ್ಯದ ಸಂಕೇತವೆಂದು ಹೊಸ ಸಂಸತ್ ಭವನ ಕಟ್ಟಿದಾಗಲೂ ಕಾಂಗ್ರೆಸ್ನವರು ವಿರೋಧ ಮಾಡಿದರು. ಆರ್ಟಿಕಲ್ 370 ರದ್ದು ಮಾಡಿದಾಗ ವಿರೋಧಿಸಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದಾಗಲೂ ವಿರೋಧ ಮಾಡಿದ್ದರು. ಸಿಎಎ ಅನುಷ್ಠಾನ, ತ್ರಿವಳಿ ತಲಾಖ್, ಜಿಎಸ್ಟಿ ಜಾರಿಯನ್ನೂ ವಿರೋಧಿಸಿದ್ದರು. ಅಮಾಯಕ ಹಿಂದೂಗಳು ಭಯೋತ್ಪಾದಕರಿಗೆ ಬಲಿಯಾದ ನಂತರದ ನಡೆಸಿದ ಆಪರೇಷನ್ ಸಿಂಧೂರ, ಸರ್ಜಿಕಲ್ ಸ್ಟೆçöÊಕ್ಗೂ ಆಕ್ಷೇಪ ಮಾಡಿದರು. ಕಾಂಗ್ರೆಸ್ನವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸಲೂ ಹಿಂಜರಿಯುವುದಿಲ್ಲ ಎಂದು ಜಿ.ಬಿ.ಜ್ಯೋತಿಗಣೇಶ್ ಟೀಕಿಸಿದರು.
ಮಹಿಳಾ ಸಶಕ್ತೀಕರಣಕ್ಕಾಗಿ ಪ್ರಧಾನಿ ಮೋದಿ ಸರ್ಕಾರ ಜಲಜೀವನ್ ಮಿಷನ್ ಕಾರ್ಯಕ್ರಮದಡಿ 15 ಕೋಟಿ ಮನೆಗಳಿಗೆ ನಲ್ಲಿ ಮೂಲಕ ನೀರು, 10 ಕೋಟಿ ಮನೆಗಳಿಗೆ ಉಜ್ವಲ್ ಯೋಜನೆಯಡಿ ಸಿಲಿಂಡರ್ ನೀಡಿಕೆ, 12 ಕೋಟಿ ಶೌಚಾಲಯ ನಿರ್ಮಾಣ, 4 ಕೋಟಿಗೂ ಹೆಚ್ಚು ಮಹಿಳೆಯರ ಹೆಸರಿನಲ್ಲಿ ಮನೆ ನಿರ್ಮಿಸಿಕೊಡಲಾಗಿದೆ ಎಂದು ಹೇಳಿದರು.
ಬಿಜೆಪಿ ನಗರ ಅಧ್ಯಕ್ಷೆ ವಸಂತಸುದರ್ಶನ್ ಮಾತನಾಡಿ, ಮಹಿಳೆಯರ ರಾಜಕೀಯ ಅಧಿಕಾರ ಪಡೆಯಲು ಅವಕಾಶವಿದ್ದ ಮಹಿಳಾ ಮೀಸಲಾತಿ ಮಸೂದೆ ತಿರಸ್ಕರಿಸಿದ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಗಳಲ್ಲಿ ಮಹಿಳೆಯರು ತಿರಸ್ಕಾರ ಮಾಡಲು ಸಂಕಲ್ಪ ಮಾಡಬೇಕು. ತಮ್ಮ ರಾಜಕೀಯ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಜಿಲ್ಲಾ ಕಾರ್ಯದರ್ಶಿ ಜ್ಯೋತಿತಿಪ್ಪೇಸ್ವಾಮಿ, ನಗರ ಅಧ್ಯಕ್ಷ ಟಿ.ಕೆ.ಧನುಷ್, ಮುಖಂಡರಾದ ಜಿಲ್ಲಾ ಮಾಧ್ಯಮ ಸಂಯೋಜಕರಾದ ಜೆ.ಜಗದೀಶ್, ಲತಾಬಾಬು, ಮರಿತಿಮ್ಮಯ್ಯ ಹಾಜರಿದ್ದರು.
