ತುಮಕೂರು: ಮಹಿಳಾ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧ ಜೆಡಿಎಸ್ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ನ ಮಹಿಳಾ ವಿರೋಧಿ ನೀತಿ ಖಂಡಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಅವರ ನೇತೃತ್ವದಲ್ಲಿ ಮುಖಂಡರು ಕಾರ್ಯಕರ್ತರು ಕಾಂಗ್ರೆಸ್ನ ಮಹಿಳಾ ವಿರೋಧಿ ಧೋರಣೆ ಖಂಡಿಸುವ ಫಲಕಗಳನ್ನು ಹಿಡಿದು ಜೆಡಿಎಸ್ ಕಚೇರಿಯಿಂದ ಬಿಜಿಎಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ನಿಂಗಪ್ಪ, ಪ್ರಧಾನ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಮಂಡಿಸಿದ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಮಸೂದೆ ತಿರಸ್ಕರಿಸಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಮಹಿಳಾ ವಿರೋಧಿ ನಿಲುವು ಬಹಿರಂಗವಾಗಿದೆ. ಮಹಿಳೆಯರು ರಾಜಕೀಯ ಅಧಿಕಾರ ಪಡೆಯುವುದು ಕಾಂಗ್ರೆಸ್ನವರಿಗೆ ಬೇಕಾಗಿಲ್ಲ, ಅವರನ್ನು ಕೇವಲ ಮತ ನೀಡುವುದಕ್ಕಷ್ಟೇ ಸೀಮಿತ ಮಾಡಿಕೊಂಡಿವೆ ಎಂದು ಟೀಕಿಸಿದರು.
ತಿಪಟೂರಿನ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯಂತೆ 2047ಕ್ಕೆ ಭಾರತ ಆರ್ಥಿಕವಾಗಿ ಶಕ್ತಿಯುತವಾಗಿ ಹೊರಹೊಮ್ಮುತ್ತದೆ. ಅದರ ಭಾಗವಾಗಿ ಮಹಿಳಾ ಸಬಲೀಕರಣ ಆಗಬೇಕು ಎಂದು ನಾರಿಶಕ್ತಿ ವಂದನ್ ಮಸೂದೆ ಜಾರಿ ಮಾಡಲು ಹೊರಟರೆ ಕಾಂಗ್ರೆಸ್ನವರು ತಡೆದಿದ್ದಾರೆ. ಮಹಿಳಾ ಸಬಲೀಕರಣವನ್ನು ವಿಫಲಗೊಳಿಸುವ ಪ್ರಯತ್ನವನ್ನು ಕಾಂಗ್ರೆಸ್ನವರು ಮುಂದುವರೆಸಿದ್ದಾರೆ ಎಂದರು.
ಮುಖಂಡರಾದ ಶಾಸಕ ಎಂ.ಟಿ.ಕೃಷ್ಣಪ್ಪ,ಗುಬ್ಬಿನಾಗರಾಜು, ಕಾಮರಾಜು, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್. ನಾಗರಾಜು, ಟಿ.ಹೆಚ್.ಜಯರಾಮ್, ಶ್ರೀನಿವಾಸ್ಪ್ರಸಾದ್, ಟಿ.ಜಿ.ನರಸಿಂಹರಾಜು, ಮೋಹನ್ಕುಮಾರ್, ಟಿ.ಎ.ಬಾಲಕೃಷ್ಣ, ಧರಣೇಂದ್ರಕುಮಾರ್, ಟಿ.ಹೆಚ್.ಬಾಲಕೃಷ್ಣ, ಕುಸುಮಾಜಗನ್ನಾಥ್, ಸೋಲಾರ್ ಕೃಷ್ಣಮೂರ್ತಿ, ರೇಖಾ ರಾಜ್, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ್, ಸೇರಿದಂತೆ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
