‘ಹಲೋ ಅನಂತರಾಜು, ಎಲ್ಲಿದ್ದೀರಾ..?’ ಎಂದು ಚಿತ್ರನಟ ಮೈಸೂರು ರಮಾನಂದ್ ಕೇಳಿದರು.
‘ಸಾರ್, ಬೆಂಗಳೂರು ನಾಗರಬಾವಿಯಲ್ಲಿ ಮಗನ ಮನೆಯಲ್ಲಿದ್ದೇನೆ’ ಎಂದೆ.
‘ಹಾಗಾದರೆ ಒಳ್ಳೆಯದೇ ಆಯ್ತು. ಅಲ್ಲೇ ದೀಪ ಕಾಂಪ್ಲೆಕ್ಸ್ ಹತ್ತಿರ ಬನ್ನಿ. ನಮ್ಮ “ಮಗ್ಗಿಪುಸ್ತಕ” ಸಿನಿಮಾದ ಫ್ರೀ ಶೋ ಇದೆ. ನಾಲ್ಕು ಗಂಟೆಗೆ ಅತ್ತ ಬನ್ನಿ, ನಾನೂ ಬರುತ್ತೇನೆ’ ಎಂದರು.
ನಾನು ಸರಿಯಾದ ಹೊತ್ತಿಗೆ ಅಲ್ಲಿಗೆ ತಲುಪಿದೆ. ಚಿತ್ರದ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರನ್ನು ರಮಾನಂದ್ ಪರಿಚಯಿಸಿದರು. ಒಟ್ಟಾಗಿ ಫೋಟೋ ತೆಗೆಸಿಕೊಂಡು ಮಿನಿ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸಿದೆವು.
“ಹರಿವಾರಸನಂ” ಕಾವ್ಯನಾಮದ ನಿರ್ದೇಶಕರು ತಮ್ಮದೇ “ಅವನಿ” ಕಾದಂಬರಿಯನ್ನು ಆಧರಿಸಿ ಸೊಗಸಾದ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದ ಚಿತ್ರವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಆನ್ಲೈನ್ ಶಿಕ್ಷಣ ಎದುರಿಸಿದ ಸವಾಲುಗಳು ಮತ್ತು ಬಡ ಕುಟುಂಬದ ಸಂಕಷ್ಟವನ್ನು ಈ ಚಿತ್ರ ಭಾವನಾತ್ಮಕವಾಗಿ ಚಿತ್ರಿಸುತ್ತದೆ.
ಐದು-ಆರು ವರ್ಷಗಳ ಹಿಂದೆ ಜಗತ್ತನ್ನು ಕಾಡಿದ ಕೊರೊನಾ, ಶಿಕ್ಷಣದ ದಿಕ್ಕನ್ನೇ ಬದಲಿಸಿತು. ಮನೆಯಲ್ಲೇ ಕುಳಿತು ಆನ್ಲೈನ್ ಪಾಠ ಕೇಳಲು ಮೊಬೈಲ್ ಅಗತ್ಯವಾಯಿತು. ಆದರೆ ಬಡ ಕುಟುಂಬಗಳಿಗೆ ಇದು ತುಂಬಾ ಕಷ್ಟಕರವಾಗಿತ್ತು. ಚಿತ್ರವು ಈ ಹಿನ್ನೆಲೆಯ ಸುತ್ತಲೇ ಸಾಗುತ್ತದೆ.
ಕೊರೊನಾ ಸಂಕಷ್ಟದಲ್ಲಿ ಬೀದಿ ವ್ಯಾಪಾರಿಗಳು ಸಂಕಷ್ಟಕ್ಕೀಡಾದರು. ಅಂತಹ ಬಡ ಕುಟುಂಬವೊಂದರ ಕಥೆಯೇ “ಮಗ್ಗಿಪುಸ್ತಕ”. ಗರ್ಭಿಣಿಯೊಬ್ಬಳು ಬೀದಿಗೆ ಬೀಳುತ್ತಾಳೆ; ಆಕೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವೇ ದುರಂತ ಕಥಾನಾಯಕಿ ‘ಭಾಗ್ಯ’.
ಚಿತ್ರವು ಕೋವಿಡ್ ಕಾಲಘಟ್ಟ ಮತ್ತು ಮೊಬೈಲ್ ಸಮಸ್ಯೆಗಳ ಸುತ್ತ ಹಲವು ರೋಚಕ ತಿರುವುಗಳು ಹಾಗೂ ಕರುಣಾಜನಕ ಘಟನೆಗಳನ್ನು ಒಳಗೊಂಡಿದೆ. ವಿಶೇಷವಾಗಿ ಹಾಡುಗಳು ಗಮನ ಸೆಳೆಯುತ್ತವೆ. ಮೊಬೈಲ್ಗಾಗಿ ಭಾಗ್ಯಳ ಕುಟುಂಬ ಅನುಭವಿಸುವ ನೋವು, ಸಂಕಟಗಳು ಒಂದೆಡೆಯಾದರೆ, ಆನ್ಲೈನ್ ತರಗತಿಗಳ ಅವಘಡಗಳು ಕಾಮಿಡಿ ಮೂಲಕ ರಂಜಿಸುತ್ತವೆ.

ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ಕಳ್ಳತನದ ಪ್ರಕರಣವಾಗಿ ತಿರುಗಿ, ಪೊಲೀಸ್ ಠಾಣೆಯ ಮೆಟ್ಟಿಲೇರಿಸುವ ಪರಿಸ್ಥಿತಿಯನ್ನೂ ತರುತ್ತದೆ. ಮೊಬೈಲ್ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಎಂಬುದನ್ನು ಚಿತ್ರ ಸ್ಪಷ್ಟಪಡಿಸುತ್ತದೆ.
ಚಿತ್ರ ವೀಕ್ಷಿಸಿದ ನಂತರ ನಿರ್ಮಾಪಕರು “ಅವನಿ” ಕಾದಂಬರಿಯನ್ನು ನನಗೆ ನೀಡಿದರು. ಬೆಂಗಳೂರಿನಿಂದ ಹಾಸನಕ್ಕೆ ಬಸ್ಸಿನಲ್ಲಿ ಬರುತ್ತಾ ಅದನ್ನು ಓದಿದೆ. ನಿರ್ದೇಶಕರು ತಮ್ಮ ಕಥೆಯನ್ನು ಚಿತ್ರರೂಪಕ್ಕೆ ತರುವಲ್ಲಿ ಸಾಕಷ್ಟು ಶ್ರಮಪಟ್ಟಿರುವುದು ಸ್ಪಷ್ಟವಾಗುತ್ತದೆ.
ನಮ್ಮ ಬಾಲ್ಯದ ಪ್ರಾಥಮಿಕ ಶಾಲೆಯಲ್ಲಿ ‘ಮಗ್ಗಿಪುಸ್ತಕ’ ಬಹುಮುಖ್ಯವಾಗಿತ್ತು. ಕನ್ನಡದ ಅಕ್ಷರಮಾಲೆ, ಸಂಖ್ಯೆಗಳು, ಗುಣಾಕಾರ, ಕಾಗುಣಿತ—ಎಲ್ಲವೂ ಅದರಲ್ಲಿ ಇರುತ್ತಿತ್ತು. ‘ಮಗ್ಗಿಪುಸ್ತಕ’ ಎಂದರೆ ಮಕ್ಕಳ ಸಿನಿಮಾ ಎಂದುಕೊಂಡು ಹೋದ ನನಗೆ, ಇದರಲ್ಲಿ ಭಿನ್ನವಾದ ತರ್ಕ ಇರುವುದನ್ನು ಅರಿವಾಯಿತು.
ಚಿತ್ರದಲ್ಲಿ ಮೊಬೈಲ್ ಕರೆಗಳ ಸಂಖ್ಯೆಯನ್ನು ‘ಮಗ್ಗಿಪುಸ್ತಕ’ದ ತತ್ವದೊಂದಿಗೆ ಜೋಡಿಸಿ ಶೀರ್ಷಿಕೆಗೆ ಅರ್ಥ ನೀಡಲು ಪ್ರಯತ್ನಿಸಿರುವುದು ಗಮನಾರ್ಹ. “ಜೀವನವೇ ಒಂದು ಮಗ್ಗಿಪುಸ್ತಕ; ಒಳ್ಳೆಯದನ್ನು ಸೇರಿಸಿ, ಕೆಟ್ಟದ್ದನ್ನು ತೆಗೆದು, ಜ್ಞಾನವನ್ನು ಗುಣಿಸಿ, ಅಜ್ಞಾನವನ್ನು ಭಾಗಿಸಬೇಕು” ಎಂಬ ಸಂದೇಶವನ್ನು ನಿರ್ದೇಶಕರು ನೀಡುತ್ತಾರೆ. ಇದು ನಾಲ್ಕು ಆಯಾಮಗಳ ಚಿತ್ರ ಎಂದು ಅವರು ಹೇಳುತ್ತಾರೆ. ಅದರ ಅರ್ಥ ಮತ್ತು ಗೂಢಾರ್ಥ ಅರಿಯಲು ಚಿತ್ರವನ್ನು ಒಂದೆರಡು ಬಾರಿ ವೀಕ್ಷಿಸಬೇಕೆಂದು ಸೂಚಿಸುತ್ತಾರೆ.
ಭಾಗ್ಯ ಪಾತ್ರದಲ್ಲಿ ರಕ್ಷಗೌಡ ಹಾಗೂ ತಾಯಿಯಾಗಿ ಮೇಘಶ್ರೀ ಉತ್ತಮ ಅಭಿನಯ ನೀಡಿದ್ದಾರೆ. ಸಮಾಜಸೇವಕ ತಾತನಾಗಿ ಮೈಸೂರು ರಮಾನಂದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. “ನನಗೆ ಈ ಚಿತ್ರದಲ್ಲಿ ಉತ್ತಮ ಅವಕಾಶವಿದೆ, ನೀವು ತಪ್ಪದೇ ನೋಡಿ” ಎಂದು ಅವರು ಶೂಟಿಂಗ್ ಸಮಯದಿಂದಲೇ ಹೇಳುತ್ತಿದ್ದರು.
ಚಿತ್ರದ ಹಾಡುಗಳು ಹೈಲೈಟ್ ಆಗಿದ್ದು, ಯಶಸ್ ನಾಚಪ್ಪ ಅವರ ಸಂಗೀತ ಮೆಚ್ಚುಗೆಗೆ ಪಾತ್ರವಾಗಿದೆ. ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕರು: ಸಿ. ಯತಿರಾಜ್.
—
ಗೊರೂರು ಅನಂತರಾಜು, ಹಾಸನ
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್,
ಹಾಸನ – 573201.
