ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಅಭಿಜ್ಞಾ ಟ್ರಸ್ಟ್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಭರತನಾಟ್ಯ ಯುವಪ್ರತಿಭೆ ಕು. ಸ್ಮೃತಿಶ್ರೀ ಡಿ. ನಾವಡ ಅವರ ರಂಗಪ್ರವೇಶವು ಭಾನುವಾರ ಯಶಸ್ವಿಯಾಗಿ ನೆರವೇರಿತು.
ರಂಗಪ್ರವೇಶವು ಪುಷ್ಪಾಂಜಲಿಯೊಂದಿಗೆ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ಜತಿಸ್ವರದಲ್ಲಿ ಲಯಬದ್ಧ ಪಾದವಿನ್ಯಾಸ ಹಾಗೂ ವರ್ಣಂನಲ್ಲಿ ಅಭಿನಯ ಮನಮೋಹಕವಾಗಿತ್ತು. ತುಳಸಿದಾಸರ ಭಜನೆಗೆ ತೋರಿದ ಶ್ರೀರಾಮನ ವೈವಿಧ್ಯಮಯ ರೂಪಗಳು ಭಕ್ತಿಭಾವವನ್ನು ಮೂಡಿಸಿದವು.
ಸಂಗೀತ ಸಾಂಗತ್ಯದಲ್ಲಿ ನಟುವಾಂಗ ವಿದುಷಿ ಸಮೀಕ್ಷಾ, ಗಾಯನ ವಿದ್ವಾನ್ ದೀಪು ಕರುಣಾಕರನ್, ಮೃದಂಗ ವಿದ್ವಾನ್ ಶಿವಪ್ರಸಾದ್ ಹಾಗೂ ಕೊಳಲು ವಿದ್ವಾನ್ ಎ.ಪಿ. ಕೃಷ್ಣಪ್ರಸಾದ್ ಅವರು ನೃತ್ಯಕ್ಕೆ ವಿಶೇಷ ಕಳೆ ತಂದರು.
ಕು. ಸ್ಮೃತಿಶ್ರೀ ಡಿ. ನಾವಡ ಅವರು ಮೂಲತಃ ಹಾಸನ ಜಿಲ್ಲೆಯವರು. ಶ್ರೀ ಕೆ.ವಿ. ದಿನೇಶ್ ಭಟ್ ಮತ್ತು ಶ್ರೀಮತಿ ಎ.ವಿ. ಸುಬ್ಬಲಕ್ಷ್ಮಿ ಅವರ ಪುತ್ರಿ. ಬಹುಮುಖ ಸಾಂಸ್ಕೃತಿಕ ಪ್ರತಿಭೆಯಾಗಿರುವ ಅವರು ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ವೀಣಾವಾದನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಎಂಟನೇ ವಯಸ್ಸಿನಲ್ಲಿ ಕಲೆಯ ಮೇಲಿನ ಆಸಕ್ತಿ ಬೆಳೆಸಿ, ಪೋಷಕರ ಪ್ರೋತ್ಸಾಹದಿಂದ ಭರತನಾಟ್ಯ ಕಲಿಕೆಯನ್ನು ವಿದ್ವಾನ್ ಉನ್ನತ್ ಜೈನ್ ಅವರಲ್ಲಿ ಆರಂಭಿಸಿದರು. ನಂತರ ವಿದುಷಿ ಸಮೀಕ್ಷಾ ಕೆ.ಎಂ. ಅವರ ಶಿಷ್ಯತ್ವದಲ್ಲಿ ಮುಂದುವರಿಸಿದರು. ಗುರುಗಳ ಕಟ್ಟುನಿಟ್ಟಿನ ಮಾರ್ಗದರ್ಶನದಿಂದ ಅಂಗಶುದ್ಧಿ ಮತ್ತು ಅಭಿನಯದಲ್ಲಿ ಹೆಚ್ಚಿನ ಪಾಕ್ವತೆ ಸಾಧಿಸಿದ್ದಾರೆ.

ತಮ್ಮ ಕಲೆಯನ್ನು ಮತ್ತಷ್ಟು ಪರಿಪೂರ್ಣಗೊಳಿಸುವ ದಿಶೆಯಲ್ಲಿ ಓದಿನೊಂದಿಗೆ ನೃತ್ಯವನ್ನು ಆರಾಧಿಸುತ್ತಾ ಸಾಗುತ್ತಿದ್ದಾರೆ. ರಂಗಪ್ರವೇಶವು ಅವರ ಕಲಾಜೀವನದ ಮಹತ್ವದ ಹಂತವಾಗಿದ್ದು, ಭರತನಾಟ್ಯದ ವೇದಿಕೆಯಲ್ಲಿ ಭದ್ರ ಹೆಜ್ಜೆಯಾಗಿದೆ.
ನೃತ್ಯದ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣಾವಾದನವನ್ನು ವಿದುಷಿ ರಮಾ ರಾಜಗೋಪಾಲ್ ಅವರಲ್ಲಿ ಕಲಿದು, ಮುಂದುವರೆದು ವಿದ್ವಾನ್ ಎ.ಪಿ. ಕೃಷ್ಣಪ್ರಸಾದ್ ಅವರಲ್ಲಿ ವೀಣಾವಾದನ ಅಭ್ಯಾಸ ಮಾಡುತ್ತಿದ್ದಾರೆ.
ಸದ್ಯ ಸ್ಮೃತಿಶ್ರೀ ಹಾಸನದ ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇವರ ನೃತ್ಯ ಪ್ರದರ್ಶನಗಳು ರಾಜ್ಯದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶಿತವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
✍️ ಗೊರೂರು ಅನಂತರಾಜು, ಹಾಸನ
📞 9449462879
📍 ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
3ನೇ ಕ್ರಾಸ್, ಹಾಸನ – 573201
