ಕೊರಟಗೆರೆ:- ಹಲವು ವರ್ಷಗಳಿಂದ ಸಾರ್ವಜನಿಕರ ಬಹು ನಿರೀಕ್ಷೆಯಾಗಿದ್ದ ಕೊರಟಗೆರೆ ಪಟ್ಟಣ ಪಂಚಾಯತಿ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಹಿನ್ನಲೆಯಲ್ಲಿ ಪುರಸಭೆ ಕಚೇರಿಯಲ್ಲಿ ನೂತನ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ಈ ಮೂಲಕ ಪಟ್ಟಣದ ಅಭಿವೃದ್ಧಿಗೆ ಹೊಸ ದಿಕ್ಕು ಸಿಕ್ಕಂತಾಗಿದೆ.
ಕೊರಟಗೆರೆ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಕನಸನ್ನ ಪಟ್ಟಣದ ಜನತೆ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಹಲವು ವರ್ಷಗಳಿಂದ ಪುರಸಭೆ ಸ್ಥಾನಮಾನಕ್ಕಾಗಿ ಒತ್ತಾಯ ಮಾಡುತ್ತಿದ್ದು, ಇದೀಗ ಆ ಕನಸು ನನಸಾಗಿದೆ. ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿಶೇಷ ಒತ್ತಾಸೆ ಮತ್ತು ಪ್ರಯತ್ನದಿಂದ ಕೊರಟಗೆರೆ ಪುರಸಭೆಯಾಗಿ ಮೇಲ್ದರ್ಜೆಗೇರಿದೆ.
ಪುರಸಭೆ ಸ್ಥಾನಮಾನದಿಂದ ಪಟ್ಟಣದ ರಸ್ತೆ, ಕುಡಿಯುವ ನೀರು, ಒಳಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಹರಿದು ಬರಲಿದ್ದು, ಕೊರಟಗೆರೆ ಸಮಗ್ರ ಅಭಿವೃದ್ಧಿಯತ್ತ ಹೆಜ್ಜೆ ಇಡುವ ಅವಕಾಶ ಒದಗಿ ಬಂದಿದೆ.
ಈ ಸಂದರ್ಭದಲ್ಲಿ ₹8 ಲಕ್ಷ ವೆಚ್ಚದಲ್ಲಿ ಕಚೇರಿ ಬಳಕೆಗಾಗಿ ಅಳವಡಿಸಲಾದ ಸೋಲಾರ್ ಪ್ಲಾಂಟ್ನ್ನು ಉದ್ಘಾಟಿಸಲಾಯಿತು. ಪುರಸಭೆ ಕಚೇರಿಯ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಈ ಸೋಲಾರ್ ಘಟಕದಿಂದ ಕಚೇರಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆ ಸಾಧ್ಯವಾಗಲಿದ್ದು, ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದ್ದು, ಇದೇ ವೇಳೆ ಈ ಯೋಜನೆಯಿಂದ ವಾರ್ಷಿಕವಾಗಿ ಸುಮಾರು ₹1.5 ಲಕ್ಷದಷ್ಟು ಉಳಿತಾಯವಾಗಲಿದ್ದು, ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ಆದಾಯವೂ ಲಭಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಲಾಯಿತು. ಪರಿಸರ ಸ್ನೇಹಿ ಯೋಜನೆಗಳ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರಲು ಪುರಸಭೆ ಮುಂದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶೇಷಾಧಿಕಾರಿ ಡಾ. ಕೆ. ನಾಗಣ್ಣ ಮಾತನಾಡಿ, ಪುರಸಭೆ ಸ್ಥಾನಮಾನದಿಂದ ಕೊರಟಗೆರೆ ಪಟ್ಟಣಕ್ಕೆ ಅಭಿವೃದ್ಧಿಯ ಮಹಾಪೂರ ಹರಿದು ಬರಲಿದ್ದು, ಜನರ ಕನಸು ಸಾಕಾರಗೊಂಡಿದೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಬಹು ವರ್ಷಗಳಿಂದ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಯತ್ನದಲ್ಲಿದ್ದು ಈಗ ಸಕಾಲ ಒದಗಿಬಂದಿದೆ ಡಾ.ಜಿ ಪರಮೇಶ್ವರ್ ಒತ್ತಾಸೆಯಂತೆ ಕೊರಟಗೆರೆ ಪಟ್ಟಣ ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಕೆ.ಆರ್. ಓಬಳರಾಜ್ ಮಾತನಾಡಿ, ಪಟ್ಟಣದ ಜನರ ಹಲವು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕೊರಟಗೆರೆ ಮಾದರಿ ಪಟ್ಟಣವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಎಸ್. ಉಮೇಶ್ ಮಾತನಾಡಿ, ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಜನರ ಸಹಕಾರದೊಂದಿಗೆ ಸುಂದರ, ಸ್ವಚ್ಛ ಹಾಗೂ ಅಭಿವೃದ್ಧಿಶೀಲ ಕೊರಟಗೆರೆಯನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಲ್ತ್ ಆಫೀಸರ್ ಮಹಮ್ಮದ್ ಹುಸೇನ್, ಇಂಜಿನಿಯರ್ ವಿಶಾಲಾಕ್ಷಿ ಸೇರಿದಂತೆ ಸಿಬ್ಬಂದಿ, ಸಾರ್ವಜನಿಕರು ಹಾಗೂ ಮುಖಂಡರು ಹಾಜರಿದ್ದರು. ಪುರಸಭೆ ಸ್ಥಾನಮಾನದಿಂದ ಕೊರಟಗೆರೆ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂಬ ಸಂತಸ ಎಲ್ಲೆಡೆ ವ್ಯಕ್ತವಾಯಿತು.
– ಶ್ರೀನಿವಾಸ್ ಕೊರಟಗೆರೆ
