ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತುಮಕೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ವಿ. ಅಶ್ವಿಜಾ ಅವರು ದಿಢೀರ್ ಭೇಟಿ ನೀಡಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗೆ ಮಂಜೂರಾದ ಜಾಗಗಳನ್ನು ಪರಿಶೀಲಿಸಿದರು. ಸ್ಥಳ ಪರಿಶೀಲನೆಯ ವೇಳೆ ಅಧಿಕಾರಿಗಳಿಗೆ ಅಗತ್ಯ ಮಾರ್ಗಸೂಚಿ ಹಾಗೂ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಗ್ರಾಮೀಣ ಭಾಗದ ಬಡ ಹಾಗೂ ನಿವೇಶನವಿಲ್ಲದ ಕುಟುಂಬಗಳಿಗೆ ಸರ್ಕಾರದ ಆಶ್ರಯ ಯೋಜನೆಯ ಸೌಲಭ್ಯಗಳು ಶೀಘ್ರ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಸಿಇಒ ಅಶ್ವಿಜಾ, ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ತಾಂತ್ರಿಕ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಪರಿಶೀಲನೆ ವೇಳೆ ಸ್ಥಳೀಯ ಗ್ರಾಮಸ್ಥರಿಂದ ಮಾಹಿತಿ ಪಡೆದ ಅವರು, ನಿವೇಶನ ಹಂಚಿಕೆ ಸಂಬಂಧ ಸಾರ್ವಜನಿಕರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಚರ್ಚಿಸಿದರು. ಯೋಜನೆ ಜಾರಿಯಲ್ಲಿ ಪಾರದರ್ಶಕತೆ ಕಾಪಾಡಿ ಅರ್ಹ ಫಲಾನುಭವಿಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಪೂರ್ವ ಸಿ ಅನಂತರಾಮು, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾ.ಉ.) ಎಂ.ಬಿ. ಗುರುಮೂರ್ತಿ, ತಾಲ್ಲೂಕು ಪಂಚಾಯಿತಿ ವಸತಿ ಶಾಖೆಯ ತಾಲ್ಲೂಕು ನೋಡಲ್ ಅಧಿಕಾರಿಗಳಾದ ವೈ.ಆರ್. ಶಿವಪ್ರಸನ್ನ, ಕೊರಟಗೆರೆ ಗ್ರಾಮಾಂತರ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಧರಣೇಶ್, ಉಪ ತಹಶೀಲ್ದಾರ್ ಮಧುಚಂದ್ರ, ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎನ್. ಮಂಜುಳ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
