ತುಮಕೂರು:ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು ನಾಡಿನ ಪ್ರತಿಷ್ಠಿತ ಮಹಿಳಾ ಕಾಲೇಜಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿನಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಅವರು ತಾವು ಕಲಿತ ಈ ಕಾಲೇಜನ್ನು ನೆನಪಿಸಿಕೊಂಡಾಗ ಅಥವಾ ಈ ಕಾಲೇಜಿನೊಳಗೆ ಪ್ರವೇಶಿಸಿದಾಗ ನಮಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗುತ್ತದೆ ಎಂದು ಬೆಂಗಳೂರಿನ ನೃಪತುಂಗಾ ವಿಶ್ವವಿದ್ಯಾನಿಲಯದ ಸಂಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ವಿದ್ಯಾರ್ಥಿನಿ ಡಾ. ಎಂ.ಎಸ್ ಸುಶೀಲಾಂಬಳ್ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘ ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಮತ್ತು ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶ್ರೀ ಸಿದ್ಧಗಂಗಾ ಮಠ ಒಂದು ಮೌಲ್ಯ ಸಂಸ್ಕಾರಗಳನ್ನು ಪ್ರತಿಪಾದಿಸುವ ಜ್ಞಾನದೇಗುಲ ಜಾತಿ ರಹಿತ ಸಮಾಜದ ನಿರ್ಮಾಣ ಮಾಡಲು ಪೂಜ್ಯರು ತಮ್ಮ ಮಠದಲ್ಲಿ ಜಾತ್ಯಾತೀತವಾಗಿ ಎಲ್ಲಾ ಮಕ್ಕಳಿಗೂ ಪ್ರವೇಶ ನೀಡಿ ಅವರಲ್ಲಿ ಸಮಾನತೆಯ ಬೀಜವನ್ನು ಬಿತ್ತುತ್ತಿದ್ದಾರೆ. ಅಂತಹ ಸಂಸ್ಥೆಯೊಂದರಲ್ಲಿ ನಾವು ಕಲಿತಿರುವುದೇ ನಮ್ಮ ಪುಣ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳ ಸಂಯೊಜನಾಧಿಕಾರಿಗಳಾದ ಡಾ. ಡಿ.ಎನ್ ಯೋಗೀಶ್ವರಪ್ಪನವರು ಮಾತನಾಡಿ ಮಹಿಳಾ ಸಬಲೀಕರಣದ ಅಂಗವಾಗಿ 1982 ರಲ್ಲಿ ಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರಸ್ವಾಮೀಜಿಯವರಿಂದ ತುಮಕೂರು ನಗರದಲ್ಲಿ ಸ್ಥಾಪಿಸಲ್ಪಟ್ಟ ಈ ಕಾಲೇಜು ನಾಡಿಗೆ ಐ.ಎ.ಎಸ್, ಕೆ.ಎ.ಎಸ್ ಅಧಿಕಾರಿಗಳನ್ನು ಸೃಷ್ಠಿಸಿರುವುದೇ ಅಲ್ಲದೆ ಸಹಸ್ರಾರು ಜನ ಶಿಕ್ಷಕ ವೃತ್ತಿಯಲ್ಲಿದ್ದು ತಮ್ಮದೇ ಆದ ರೀತಿಯಲ್ಲಿ ಸಮಾಜದ ಅಬಿವೃದ್ದಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಎಂ ದಕ್ಷಿಣಾಮೂರ್ತಿಯವರು ಮಾತನಾಡಿ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘ ಕಾಲೇಜಿನ ಅಭಿವೃದ್ಧಿಗೆ ವಿಶೇಷವಾದ ಕೊಡುಗೆ ನೀಡಿದೆ. ಕಾಲೇಜಿನಲ್ಲಿನ ಒಂದು ಕೋಣೆಯನ್ನು ಸ್ಮಾರ್ಟ್ ಕ್ಲಾಸ್ ರೂಂ ಆಗಿ ಮಾಡಿ ಇಂದಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು ತಾವೆಲ್ಲ ಸಂಘದ ಆಜೀವ ಸದಸ್ಯರು ಕಾಲೇಜಿನ ಉನ್ನತಿಗೆ ತಮ್ಮ ಸಲಹೆ ಸಹಕಾರ ಅಗತ್ಯ ಅದನ್ನು ನೀವು ನೀಡುತ್ತಿರೆಂದು ಭಾವಿಸಿದ್ದೇನೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾದ್ಯಕ್ಷರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮುಕ್ತಾಬಸವರಾಜು, ಸಂಘದ ಹಿರಿಯ ವಿದ್ಯಾರ್ಥಿನಿ ಸಹನಾ ದೊಡ್ಡಮನೆ ಮಾತನಾಡಿದರು. ಸಂಘದಿಂದ ರ್ಯಾಂಕ್ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ದಿವ್ಯಶೀ ಹೆಚ್.ಯು. ರವರು ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ ಪಾವನ ಬಿ.ಎಸ್ ವರದಿ ವಾಚಿಸಿದರು, ಉಪಾಧ್ಯಕ್ಷರಾದ ಡಾ.ಸೌಮ್ಯಶ್ರೀ ಪ್ರಾಸ್ತವಿಕವಾಗಿ ಮಾತನಾಡಿದರು ಪುನೀತ ಸ್ವಾಗತಿಸಿದರು ಜಂಟಿ ಕಾರ್ಯದರ್ಶಿಗಳಾದ ಸಿ.ಎಸ್ ಶ್ವೇತರವರು ನಿರೂಪಿಸಿದರು ಡಾ.ಜಗದೀಶ್.ಎಂ ವಂದಿಸಿದರು.
– ಚಂದ್ರಚೂಡ ಕೆ.ಬಿ
