ಹಾಸನ : ಕನ್ನಡ ಸಾಹಿತ್ಯ ಬಹಳ ವಿಶಿಷ್ಟವಾಗಿದ್ದು ಅದು ನಿತ್ಯ ನಿರಂತರ ಬೆಳೆಯುತ್ತಿರಲಿ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿ ಸಾಹಿತಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹಾಸನ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಉದಯರವಿ ಹೇಳಿದರು.
ನಗರದ ಕೃಷ್ಣ ಹೋಟೆಲ್ ನಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ, ಹಾಸನ ಜಿಲ್ಲಾ ಘಟಕದಿಂದ ಜಿಲ್ಲೆಯ ಹಿರಿಯ ಸಾಹಿತಿಗಳು ಗೊರೂರು ಅನಂತರಾಜು ಅವರ ಇತ್ತೀಚಿನ ಸಾಹಿತ್ಯ ಕೃತಿಗಳ ವಿಮರ್ಶಾ ಗ್ರಂಥ ಸಾಗುತಾ ಇದೆ ದೋಣಿ ನದಿಯ ನೀರನು ಸೀಳುತಾ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳನ್ನು ಗುರುತಿಸುವ ಮೂಲಕ ಮಾಡಬೇಕು. ಆ ಮೂಲಕ ಸಾಹಿತ್ಯ ವಲಯದ ಉಳಿವಿಗೆ ಕಾರ್ಯ ಪ್ರವೃತ್ತವಾಗಬೇಕು ಎಂದು ಹೇಳಿದರು. ಇದೇ ವೇಳೆಯಲ್ಲಿ ಸುರ್ವೆ ಪತ್ರಿಕೆ ಸಂಪಾದಕರು ರಮೇಶ್ ಸುರ್ವೆ ಅವರ ಸಾಹಿತ್ಯ ಸಾಂಸ್ಕೃತಿಕ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.

ಸನ್ಮಾನಿತರಾದ ರಮೇಶ್ ಸುರ್ವೆರವರು ಮಾತನಾಡಿ, ಹಾಸನ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆಯನ್ನು ನೀಡಿದೆ ಎಂಬುದನ್ನು ಸ್ಮರಿಸಿದರು. ಸಾಹಿತಿ ಗೊರೂರು ಅನಂತರಾಜು ರವರು ಮಾತನಾಡಿ ಲೋಕಾರ್ಪಣೆಗೊಂಡ ಕೃತಿಗೆ ರಮೇಶ್ ಸುರ್ವೆ ರವರು ಬೆನ್ನುಡಿ ಬರೆದಿದ್ದು, ಉದಯರವಿ ರವರಿಂದ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು. ಕದಂಬ ಸೈನ್ಯ ಹಾಸನ ಜಿಲ್ಲಾ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಅಂಕಪುರ ರವರು ಮಾತನಾಡಿ ಸಾಹಿತ್ಯ ವಲಯದ ಬೆಳವಣಿಗೆಗೆ ಪೂರಕವಾಗಿ ಅಳಿಲು ಸೇವೆ ಮಾಡಲು ಸದಾ ಸಿದ್ಧರಿರಬೇಕು ಎಂದರು.

ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾಧ್ಯಕ್ಷರು ಮತ್ತು ಸಿರಿ ಕನ್ನಡ ದಿನಪತ್ರಿಕೆ ಸಂಪಾದಕರಾದ ಆನಂದ ಪಟೇಲ್ ನೆಲ್ಲಿಗೆರೆ ರವರು ಮಾತನಾಡಿ ಪುಸ್ತಕಗಳನ್ನು ತೆರೆಯುವ ಮೂಲಕ ಸಾಹಿತ್ಯ ಭಂಡಾರ ತೆರೆದುಕೊಳ್ಳುತ್ತದೆ ಮತ್ತು ಆ ಮೂಲಕ ಜ್ಞಾನ ಭಂಡಾರದ ಅರಿವು ನಮಗಾಗುತ್ತದೆ. ಪರಮಾತ್ಮನು ಶ್ರೇಷ್ಠನಿರಲು ನಾವೆಲ್ಲರೂ ಶೂನ್ಯರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಸನ ತಾ. ಅಧ್ಯಕ್ಷರಾದ ಕುಮಾರ್, ಸಕಲೇಶಪುರ ತಾಲ್ಲೂಕು ಅಧ್ಯಕ್ಷರು ಹಾಗೂ ಲೇಖಕರಾದ ವಿಶ್ವಾಸ್ ಡಿ ಗೌಡ, ಹಾಗೂ ಸಾಹಿತಿ ಗೊರೂರು ಅನಂತರಾಜು,ಲೇಖಕರು ಹಾಗೂ ಶಿಕ್ಷಕರಾದ ಚಿದಾನಂದ ಕೆ.ಎನ್. ಲೇಖಕಿ ಶ್ರೀವಿಜಯಹಾಸನ್, ಶ್ರೀ ಶಾರದ ಕಲಾ ಸಂಘದ ಅಧ್ಯಕ್ಷರು ಹಾಗೂ ಕಲಾವಿದರು ಹೆಚ್. ಜಿ. ಗಂಗಾಧರ್, ಗೋಡೆ ಬರಹಗಾರ ಯಾಕೂಬ್, ಗಾಯಕ ಜೆ.ಆರ್.ಶ್ರೀಕಾಂತ್ ಉಪಸ್ಥಿತರಿದ್ದರು.
