ಹೇಮಾವತಮ್ಮ ಮತ್ತು ಕಾವೇರಮ್ಮ ಇಬ್ಬರು ಬಾಲ್ಯದ ಗೆಳತಿಯರು. ಕಾವೇರಮ್ಮನ ಊರು ಕೆ.ಆರ್.ನಗರ. ಹೇಮಾವತಮ್ಮನ ಊರು ಗೊರೂರು. ಹೇಮಾವತಮ್ಮ ಒಂದು ವಾರದ ಬಟ್ಟೆ ಒಗೆಯಲು ಭಾನುವಾರ ಪುರಸೊತ್ತು ಮಾಡಿಕೊಂಡು ಕುಕ್ಕೆಯಲ್ಲಿ ಬಟ್ಟೆ ತುಂಬಿಕೊಂಡು ಹೇಮಾವತಿ ನದಿ ಬಳಿ ಬಂದರು. ಕಾವೇರಮ್ಮನು ಕೆ.ಆರ್.ನಗರದಿಂದ ಒಂದು ಸಿಮೆಂಟ್ ಚೀಲದಲ್ಲಿ ಬಟ್ಟೆ ತುಂಬಿಕೊಂಡು ಇತ್ತಲೇ ಬಂದರು. “ಇದೇನು ಕಾವೇರಿ, ಅಲ್ಲಿಂದ ಇಷ್ಟೊಂದು ಬಟ್ಟೆ ತುಂಬಿಕೊಂಡು ಇಷ್ಟು ದೂರ ಬಂದಿದ್ದೀಯ.. ಕೆ.ಆರ್.ಎಸ್. ನೀರೆಲ್ಲಾ ಬೇಸಿಗೆ ಬಿಸಿಲಿಗೆ ಬತ್ತಿ ಹೋಗಿದೆಯೇ ಹೇಗೆ..?
“ಅಲ್ಲಿ ನೀರು ಬಹಳ ತಳಮಟ್ಟಕ್ಕೆ ಹೋಗಿದೆ ಮಾರಾಯ್ತಿ. ಬಟ್ಟೆ ಒಗೆಯೋಕೆ ನಿಮ್ಮೂರ ಮಟ್ಟೆಕಲ್ಲು ಮಡು ಚೆನ್ನಾಗಿದೆ. ಬಟ್ಟೆ ಒಗೆದು ಮಡಿ ಮಾಡಿಕೊಳ್ಳೋಣ ಅಂತ ಬಂದೆ. ಹೇಗೂ ನಿನ್ನ ನೋಡಿ ಬಹಳ ದಿನ ಆಯ್ತು. ಬಸ್ಸಿಗೇನು ಕಾಸು ಕೊಡಬೇಕ..? ನಮ್ಮ ಯಜಮಾನ್ರಿಗೆ ಅಲ್ಲೇ ಬಟ್ಟೆ ಒಗೆದುಕೊಂಡು ಬರ್ತಿನಿ ಅಂತ ಒಂದು ಸುಳ್ಳು ಒಗೆದು ಬಂದಿದ್ದೀನಿ. ಮದ್ಯಾಹ್ನ ಊಟದ ಹೊತ್ತಿಗೆ ವಾಪಸ್ಸು ಹೋಗ್ತಿನಿ. ಬೆಳಗಿನ ತಿಂಡಿ ನಿನ್ನ ಮನೆಯಲ್ಲೇ..
“ಆಯ್ತು ಬಾ.. ಬಿಸಿಬೇಳೆಬಾತ್ ಮಾಡಿಟ್ಟು ಬಂದಿದ್ದೀನಿ. ಇಬ್ರೂ ಹೋಗಿ ತಿನ್ನೋ ಹೊತ್ತಿಗೆ ತಣ್ಣಗೆ ಆಗಿರುತ್ತೆ..
“ತಮಿಳುನಾಡಿನಲ್ಲಿ ಹೊಸ ಸರ್ಕಾರ ಬಂತಲ್ಲ.. ಮೇ ತಿಂಗಳು ಬಾಕಿ ೨ ಟಿ.ಎಂ.ಸಿ.ನೀರು ಕೊಡಬೇಕೆನೋ ನಾವು. ನಿಮ್ಮೂರ ಡ್ಯಾಂನಲ್ಲಿ ಡೆಡ್ ಸ್ಟೋರೆಜ್ ಸೇರಿ ಬರೇ ೩ ಟಿಎಂಸಿ ನೀರಷ್ಟೇ ಇರೋದಂತೆ..! ಅದನ್ನು ನೋಡೋಣ ಅಂತ ಬಂದೆ..
“ಆಮೇಲೆ ನೋಡಿವೆಯಂತೆ..! ನಿನ್ನ ಮಗಳನ್ನು ತಮಿಳುನಾಡಿನ ಸೇಲಂ ಗಂಡಿಗೆ ಕೊಟ್ಟು ಮದುವೆ ಮಾಡಿದ್ದಿಯೆಲ್ಲಾ.. ಗಂಡ ಹೆಂಡತಿ ಚೆನ್ನಾಗಿದ್ದಾರೇನೇ..?
“ಏನ್ ಚೆಂದವೋ ಏನೋ..? ಈಗ ಅವಳು ಇಷ್ಟಪಟ್ಟಿರೋ ಪಾರ್ಟಿನೇ ರೂಲಿಗೆ ಬಂದಿದೆ. ನಾವೆಲ್ಲಾ ಅಣ್ಣ ಎಂ.ಕೆ. ಕಾಲದವರು. ಈಗ ಅವು ಒಡೆದು ಎರಡು ಹೋಳಾಗಿವೆ.. ಬೇಸಿಗೆಗೆ ಎಲೆ ಉದುರಿಹೋಗುವುದು ಸಹಜ ತಾನೆ..?
“ಹೋಗ್ಲಿ ಬಿಡು. ನೀನು ಆ ಕಡೆ ಸಣ್ಣ ಕಲ್ಲಿನಲ್ಲಿ ಬಟ್ಟೆ ಒಗೆದುಕೋ. ನಾನು ಈ ಕಡೆ ದೊಡ್ಡ ಕಲ್ಲಿನಲ್ಲಿ ಒಕ್ಕೋತ್ತಿನಿ..ಎಂದು ಬಟ್ಟೆ ಕುಕ್ಕುತ್ತಾ ಹೇಮಾವತಿ ಹೇಳಿದಳು.
“ಅಲ್ಲಾ ಆ ಟ್ರಂಕ್ ಸುಮ್ಮನೇ ಇರಲಾರದೇ ಅದೇನೋ ಕೊಲ್ಲಿ ಯುದ್ಧ ಮಾಡಿ ಗೆದ್ದೆ ಅಂತ ಜೇನುಗೂಡಿಗೆ ಕಲ್ಲು ಎಸೆದು ಈಗ ಅವು ಎದ್ದು ಮನುಷ್ಯರನ್ನೆ ಕಡಿತಾವಲ್ಲಾ..! ಈಗ ನೋಡು ಪೆಟ್ರೋಲ್ ರೇಟ್ ಮೂರು ರೂಪಾಯಿ ಆಯ್ತು. ನನ್ನ ಗಂಡ ಮುಂದಿನ ತಿಂಗಳು ಮಲೇಷಿಯಾಗೆ ಕರ್ಕೊಂಡು ಹೋಗ್ತಿನಿ ಅಂತ ಏರೋಪ್ಲೇನ್ ಹತ್ಸಿದ್ದ.. ಈಗ ಅದು ಇಲ್ದಂಗೆ ಆಯ್ತಲ್ಲ..
“ನಿನ್ನ ಕತೆ ಇರಲಿ, ನನ್ನ ಕತೆ ಕೇಳು. ನನ್ನ ಗಂಡ ರಾತ್ರಿ ಮಲಗುವಾಗ ಚಿನ್ನ, ಜೂನ್ ತಿಂಗಳಿಗೆ ಒಂದು ಹದ ಮಳೆ ಬೀಳಲಿ. ಗದ್ದೆಯಲ್ಲಿ ಭತ್ತ ನಾಟಿ ಮಾಡಿ ನಿನಗೆ ಒಂದು ತೊಲ ಸವರನ್ ಚಿನ್ನ ಮಾಡಿಸಿಕೊಡ್ತಿನಿ ಅಂತ ಪ್ರಾಮಿಸ್ ಮಾಡಿದ್ದ..
ಮುಂದೇನೋ ಮಾಡ್ತನೋ ಅದೇನು ಕಥೆ ಹೇಳ್ತನೋ..
“ ಅದ್ಸರಿ, ನಿನ್ನ ಗಂಡ ತುಂಬಾ ಚೆನ್ನಾಗಿ ಕಥೆ ಬರೀತಾರಂತಲ್ಲ. ಕಥೆ ಬರೆದು ಏನಾದ್ರು ಒಂದಿಷ್ಟು ದುಡ್ಡು ಕೂಡಿಟ್ಟಿದ್ದಾರೋ ಹೇಗೆ..?
“ಅದೇನು ಕತೆ ಕೇಳ್ತಿ ಬಿಡು ಮಾರಾಯ್ತಿ. ಬರೇ ಮನೆ ತುಂಬಾ ಪುಸ್ತಕ ತುಂಬ್ಕೊಂಡು ಅದನ್ನೇ ಇಪ್ಪತ್ನಾಲ್ಕು ಗಂಟೆ ನೋಡ್ಕೊಂಡು ಮತ್ತೇ ಮತ್ತೇ ಹಳೇ ಕತೆನೇ ಬರೀತಾ ಇರ್ತಾರೆ. ಅವರು ಬರೆದ ಒಂದು ಕಥೆನಾದ್ರು ಸಿನಿಮಾ ಆಗಿದ್ರೇ ಒಂದಿಷ್ಟು ದುಡ್ಡಾದ್ರು ಸಿಗ್ತಾ ಇತ್ತೇನೋ.. ಈಗ ಯಾರು ಪ್ರಕಾಶಕರು ಹಿಂದ್ಲಂಗೆ ರಾಯಲ್ಟಿ ಕೊಡಲ್ಲ. ಸರ್ಕಾರ ಸಗಟು ಖರೀದಿ ಮಾಡ್ತಿಲ್ಲಾ.. ನಾವು ತುಂಬಾ ಕಷ್ಟದಲ್ಲಿದ್ದೀವಿ ಅಂತ ಪ್ರಕಾಶಕರು ನೋವು ತೋಡಕೋಬೇಕಾದ್ರೇ ನಮ್ಮ ಮನೆಯವರು ತಾನೇ ಏನು ಮಾಡಿಯಾರು.. ಅವರ್ಗೂ ಬೇರೆ ಉದ್ಯೋಗ ಗೊತ್ತಿಲ್ಲ. ಬರೀ ಬರಿಯೋದು ತಿನ್ನೋದು ಮಲಗೋದು.. ಬೇಸರದಿಂದ ಪ್ಯಾಂಟ್ ಬಟ್ಟೆ ಎತ್ತಿ ಜೋರಾಗಿ ಒಗೆದು ಸಿಟ್ಟು ಕಾರಿದಳು.
“ನಿಂದೇನು ಗೆಳತಿ, ನನ್ನ ಗಂಡನದೂ ಅದೇ ಕತೆ. ಬೇಸಿಗೆ ಬೆಳೆಗೆ ರೇಷ್ಮೆ ಬಿತ್ತನೆ ಮಾಡ್ತಿನಿ. ಮಳೆಗಾಲದಲ್ಲಿ ಭತ್ತ ನಾಟಿ ಮಾಡ್ತಿನಿ. ರೇಷ್ಮೆ ಕಮರ್ಷಿಯಲ್ ಬೆಳೆ. ಭತ್ತ ನಮ್ಮ ಹೊಟ್ಟೆಗೆ ಅಂತಿರ್ತಾರೆ. ಪಾಪ ಅವರು ಕಷ್ಟಪಟ್ಟು ದುಡಿಮೆ ಮಾಡ್ತಿರೋದ್ರಿಂದ ಹೊಟ್ಟೆಬಟ್ಟೆಗೆ ನೆಟ್ಟಗಿದ್ದೀವಿ ಅಷ್ಟೇ. ಆದರೆ ಒಂದು ಬಂಗಾರದಂತಹ ಮನೆ ಕಟ್ಟಲಿಲ್ಲ. ಗೃಹಪ್ರವೇಶ ಮಾಡಿ ನಾಲ್ಕು ಜನಕ್ಕೆ ಊಟ ಹಾಕ್ಲಿಲ್ಲ. ಕಾವೇರಿ ತೀರದ ಭತ್ತದ ನಾಡು ಅಂತ ನಮ್ಮ ತಾತ ಹೇಳ್ತಿದ್ರು.. ಈಗ ನೋಡು ಅಕ್ಕಿ ರೇಟು ಗಗನಕ್ಕೆ ಏರಿ ಹೋಗ್ತಿದೆ.
“ಸರಿ, ಬೇಗ ಬೇಗ ಒಟ್ಟೆ ಒಗೆದು ಹಿಂಡಿ ಆ ಕರಿಕಲ್ಲಿನ ಮೇಲೆ ಒಣ ಹಾಕು. ಬಿಸಿಲು ಏರ್ತಾ ಇದೆ. ಮನೆಗೆ ಬಾ. ಹಾಗೇ ವಸಿ ಬಿಸಿಬೇಳೆ ಬಾತ್ ತಿಂದು ಹಾಗೆಯೇ ಬಸ್ ಹತ್ತಿ ನಿಮ್ಮೂರಿಗೆ ವಾಪಸ್ಸು ಹೋಗಿವೆಯಂತೆ..!
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.
