ಶ್ಲೋಕ – 45
ಅದೃಷ್ಟಪೂರ್ವಂ ಹೃಷಿತೋSಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ ॥೪೫॥
ಅದೃಷ್ಟ ಪೂರ್ವಮ್ ಹೃಷಿತಃ ಅಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯದಿ ತಮ್ ಮನಃ ಮೇ ।
ತತ್ ಏವ ಮೇ ದರ್ಶಯ ದೇವ ರೂಪಮ್ ಪ್ರಸೀದ ದೇವೇಶ ಜಗನ್ನಿವಾಸ –ಹಿಂದೆಂದೂ ಕಂಡರಿಯದ ರೂಪವನ್ನು ಕಂಡು ಸಡಗರಪಟ್ಟಿದ್ದೇನೆ; ಕಂಡು ಗಾಬರಿಗೊಂಡು ಬಗೆಗೆಟ್ಟಿದ್ದೇನೆ ಕೂಡ. ಓ ಸಗ್ಗಿಗರ ದೊರೆಯೆ, ಓ ಜಗದ ಆಸರೆಯೆ, ದಯೆದೋರು. ಓ ದೇವ, ನನಗೆ ಅದೇ ರೂಪವನ್ನು ತೋರು.
ಎಂದೂ ಕಾಣದ ಈ ನಿನ್ನ ಅದ್ಭುತ ರೂಪವನ್ನು ಕಂಡು ಖುಷಿ ಪಟ್ಟಿದ್ದೇನೆ. ಆದರೆ ಇಡೀ ಜಗತ್ತನ್ನು ಸಂಹಾರ ಮಾಡುವ ನಿನ್ನ ಉಗ್ರ ರೂಪವನ್ನು ಕಂಡ ಭಯವಾಗುತ್ತಿದೆ. ಒಂದು ಕಡೆ ಆನಂದ ಮತ್ತು ಇನ್ನೊಂದು ಕಡೆ ದಿಗಿಲು. ಇದರಿಂದ ನಾನು ಕಂಗಾಲಾಗಿದ್ದೇನೆ. ಅದಕ್ಕಾಗಿ ಆ ನಿನ್ನ ‘ಕೃಷ್ಣ’ ರೂಪವನ್ನು ತೋರು.
