ರಾಮನಾಥಪುರ : ಭರತನಾಟ್ಯ ಹಾಗೂ ಸಂಗೀತವು ಇಂದು ವಿಶ್ವದ ಮೂಲೆ-ಮೂಲೆಗೂ ತನ್ನದೇ ಆದ ಹೆಸರನ್ನು ಪಡೆದಿದ್ದು, ನಮ್ಮ ಬದುಕಿನ ಮಹೋನ್ನತ ಸಾಧನೆಗೆ ಭಕ್ತಿ, ಸಂಗೀತ ಮತ್ತು ಭರತನಾಟ್ಯವೇ ನಿಜವಾದ ಮಾರ್ಗವಾಗಿದೆ ಎಂದು ಗಾನಕಲಾಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅಭಿಪ್ರಾಯಪಟ್ಟರು.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮವೆಂದೇ ಪ್ರಸಿದ್ಧಿ ಪಡೆದಿರುವ ರುದ್ರಪಟ್ಟಣದ ಶ್ರೀರಾಮಮಂದಿರದಲ್ಲಿ “ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್” ವತಿಯಿಂದ ಆಯೋಜಿಸಿದ್ದ 23ನೇ ವಾರ್ಷಿಕ ಸಂಗೀತೋತ್ಸವದ ಪ್ರಥಮ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳಿಂದ ಭರತನಾಟ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ನೂರಾರು ಪ್ರತಿಭೆಗಳನ್ನು ನೀಡಿರುವ ಕರ್ಮಭೂಮಿ ರುದ್ರಪಟ್ಟಣವಾಗಿದ್ದು, ಇಲ್ಲಿನ ಸಂಗೀತ ಪರಂಪರೆಯನ್ನು ಮುಂದುವರಿಸುವ ಜೊತೆಗೆ ಗ್ರಾಮೀಣ ಜನರಿಗೆ ಸಂಗೀತದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಐದು ದಿನಗಳ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ಹೇಳಿದರು. ಗ್ರಾಮ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರುದ್ರಪಟ್ಟಣ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಆರ್. ಷಮ್ಮುಖ, ನಮ್ಮ ಸನಾತನ ಧರ್ಮದಲ್ಲಿ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಮಹತ್ವವಿದ್ದು, ಹಿರಿಯರು ನೀಡಿರುವ ಈ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಸಂಗೀತೋತ್ಸವದ ಅಂಗವಾಗಿ ಶ್ರೀಮತಿ ರಶ್ಮಿ ಹರಿಪ್ರಸಾದ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಬಳಿಕ ವಿ. ಧನ್ಯತಾ ವಿ. ಸೂರ್ತೂರ್ ಅವರಿಂದ ಗಾಯನ ಕಾರ್ಯಕ್ರಮ, ಮಾ. ಅರ್ಣವ್ ಹಾಗೂ ಹರೀಶ್ ಕೌಶಿಕ್ ಅವರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ವಿದ್ವಾನ್ ಭಾಕ್ಷರ್ ಅವದಾನಿ, ಆರ್.ಎಸ್. ಮಾರ್ಕಂಡೇಯ, ವಿ. ರಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
