ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸುಕ್ಷೇತ್ರ ರಾಮನಾಥಪುರದ ಕಾವೇರಿ ನದಿ ತಟದಲ್ಲಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬುಧವಾರ ಭಕ್ತಿಭಾವದಿಂದ ಸರ್ವ ಸೇವೆ ಉತ್ಸವ ನಡೆಯಿತು.

ಪುರಾಣ ಪ್ರಸಿದ್ಧ ದೇವಾಲಯಗಳ ತಾಣವಾಗಿರುವ ಈ ಕ್ಷೇತ್ರದಲ್ಲಿ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಅಡ್ಡೆಯಲ್ಲಿ ಕುಳ್ಳಿರಿಸಿ ದೇವಾಲಯದ ಸುತ್ತ ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು.
ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಮಂಗಳ ವಾದ್ಯಗಳೊಂದಿಗೆ ಹರ್ಷೋದ್ಗಾರದಿಂದ ಸ್ವಾಮಿಯ ಸರ್ವ ಸೇವೆಯಲ್ಲಿ ಪಾಲ್ಗೊಂಡು ಭಕ್ತಿ ಪರವಶರಾದರು.
ಈ ಸಂದರ್ಭದಲ್ಲಿ ದೇವಾಲಯದ ಪಾರುಪತ್ತೇಗಾರ್ ರಮೇಶ್ ಭಟ್, ಸರ್ವ ಸೇವೆ ನೆರವೇರಿಸಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
