ಹೈದರಾಬಾದ್: ಸಾರ್ವಜನಿಕರು ತಮ್ಮ ಮಾತೃಭಾಷೆಯಲ್ಲೇ ಸುಲಭವಾಗಿ ಪೊಲೀಸ್ ದೂರು ದಾಖಲಿಸಲು ನೆರವಾಗುವ ‘ಎಐ-ಕಾಪ್ರೈಟರ್’ ಎಂಬ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮೊಬೈಲ್ ಆ್ಯಪ್ ಅನ್ನು ಹೈದರಾಬಾದ್ ನಗರ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.
ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಆ್ಯಪ್ ಅನಾವರಣಗೊಳಿಸಿ ಮಾತನಾಡಿ, ನಾಗರಿಕರು ಮತ್ತು ಕಾನೂನಿನ ನಡುವೆ ಭಾಷೆ ಅಡೆತಡೆಯಾಗಬಾರದು ಎಂಬ ಉದ್ದೇಶದಿಂದ ಈ ತಂತ್ರಜ್ಞಾನ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ದೇಶದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಎಐ ಆಧಾರಿತ ಪೊಲೀಸ್ ಸಹಾಯಕ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳಿಗೆ ಭಾರತದ ಪ್ರಮುಖ 10 ಭಾಷೆಗಳಲ್ಲಿ ದೂರು ದಾಖಲಿಸಲು, ಲಿಪ್ಯಂತರ ಮಾಡಲು ಹಾಗೂ ಅನುವಾದಿಸಲು ಇದು ನೆರವಾಗಲಿದೆ ಎಂದರು.
ಯಾವುದೇ ದೂರುದಾರ ತನ್ನ ಮಾತೃಭಾಷೆಯಲ್ಲೇ ಮಾತನಾಡಿದರೆ, ಆ್ಯಪ್ ಕೆಲವೇ ಕ್ಷಣಗಳಲ್ಲಿ ಅದನ್ನು ಸಂಪೂರ್ಣ ಹಾಗೂ ನಿಖರ ಎಫ್ಐಆರ್ ರೂಪಕ್ಕೆ ಪರಿವರ್ತಿಸುತ್ತದೆ. ಜೊತೆಗೆ ಬೇರೆ ಭಾಷೆಗಳಿಗೂ ಅನುವಾದ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು.
ಈ ತಂತ್ರಜ್ಞಾನದಿಂದ ಭಾಷಾ ಅಡೆತಡೆ ಕಡಿಮೆಯಾಗಲಿದ್ದು, ವಲಸಿಗರು ಹಾಗೂ ತೆಲುಗು ಹೊರತಾದ ಭಾಷಿಕರಿಗೂ ಪೊಲೀಸ್ ಸೇವೆಗಳು ಸುಲಭವಾಗಿ ದೊರೆಯಲಿವೆ ಎಂದು ಹೇಳಿದರು.
ಹೈದರಾಬಾದ್ ನಗರ ಪೊಲೀಸ್ ಐಟಿ ಸೆಲ್ ಮತ್ತು BlueCloud Softtech Solutions ಸಂಸ್ಥೆ ಸಹಯೋಗದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ನಗರದ 80ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
