ಪಾಟ್ನಾ: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ಕ್ರಾಕೋಚ್ ಜನತಾ ಪಾರ್ಟಿ’ (ಸಿಜೆಪಿ)ಗೆ ವ್ಯಕ್ತವಾಗುತ್ತಿರುವ ಅಪಾರ ಬೆಂಬಲವು ದೇಶದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಪ್ರತಿಬಿಂಬವಾಗಿದೆ ಎಂದು Prashant Kishor ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
“ಅತ್ಯಲ್ಪ ಅವಧಿಯಲ್ಲೇ ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದೆ. ಸುಮಾರು 2 ಕೋಟಿ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷಕ್ಕೆ ಇನ್ನೂ ಸ್ಪಷ್ಟ ಸಂಘಟನೆ ಅಥವಾ ನಾಯಕತ್ವದ ರಚನೆ ಇಲ್ಲ” ಎಂದು ಹೇಳಿದರು.
ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ, ಅಡುಗೆ ಅನಿಲ ಮತ್ತು ರಸಗೊಬ್ಬರಗಳ ಕೊರತೆ ಮುಂತಾದ ಸಮಸ್ಯೆಗಳು ಜನರನ್ನು ಈ ರೀತಿಯ ಅಭಿಯಾನಗಳತ್ತ ಸೆಳೆಯುತ್ತಿವೆ ಎಂದು ಅವರು ವಿಶ್ಲೇಷಿಸಿದರು.
2029ರ ಲೋಕಸಭಾ ಚುನಾವಣೆಯ ಮೇಲೆ ಈ ಅಭಿಯಾನ ಪ್ರಭಾವ ಬೀರುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ, “ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಜನರ ಪ್ರತಿಕ್ರಿಯೆ ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತಿರುವ ಸಂಕೇತವಾಗಿದೆ” ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ Surya Kant ಅವರ ‘ಜಿರಳೆ’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ಅಭಿಯಾನ ಆರಂಭಗೊಂಡಿತ್ತು. ಅಭಿಜಿತ್ ದಿಪ್ಕೆ ಎಂಬುವವರು ‘ಕ್ರಾಕೋಚ್ ಜನತಾ ಪಾರ್ಟಿ’ ಹೆಸರಿನಲ್ಲಿ ಸಾಮಾಜಿಕ ಅಭಿಯಾನ ಆರಂಭಿಸಿ ಯುವಜನರಿಗೆ ದೇಶದ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದರು.
ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ಅದರ ಎಕ್ಸ್ ಖಾತೆ ಗುರುವಾರ ತಡೆಹಿಡಿಯಲಾಗಿತ್ತು. ಬಳಿಕ ಶನಿವಾರ ಇನ್ಸ್ಟಾಗ್ರಾಂ ಖಾತೆ ಹಾಗೂ ವೆಬ್ಸೈಟ್ ಕೂಡ ನಿರ್ಬಂಧಿಸಲಾಗಿದೆ ಎಂದು ಅಭಿಜಿತ್ ದಿಪ್ಕೆ ತಿಳಿಸಿದ್ದಾರೆ.
