ಬೇಲೂರು: ಪ್ರಸಿದ್ಧ Chennakeshava Temple ದೇಗುಲದ ಸುತ್ತಮುತ್ತಲಿನ ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಂದು ಮುಂಜಾನೆ ದೇವಸ್ಥಾನದ ಎಡಭಾಗದ ಮುಖ್ಯರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರ ಕಾಲು ಸಂಪೂರ್ಣವಾಗಿ ಮುರಿದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಅತಿವೇಗದ ಕಾರಿನ ಡಿಕ್ಕಿ
ಚನ್ನಕೇಶವ ನಗರದ ನಿವಾಸಿ ಸುರೇಶ್ ಅವರು ಬೆಳಿಗ್ಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಜೆಪಿ ನಗರದ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಸ್ಥಳದಲ್ಲಿದ್ದ ಪತ್ರಕರ್ತ ರಾಘವೇಂದ್ರ ಹೊಳ್ಳ ಅವರು ತಕ್ಷಣ ಪೊಲೀಸ್ ಇನ್ಸ್ಪೆಕ್ಟರ್ ರೇವಣ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
‘ಹಿಟ್ ಅಂಡ್ ರನ್’ ಆರೋಪ
ಅಪಘಾತದ ಬಳಿಕ ಕಾರು ಚಾಲಕ ಯಾವುದೇ ಸಹಾಯ ಮಾಡದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲದೆ, ದೇವಸ್ಥಾನ ಆಡಳಿತದವರು ಕಾರು ಚಾಲಕನಿಗೆ “ನಿನಗೆ ಏನೂ ತಪ್ಪಿಲ್ಲ, ಹೋಗು” ಎಂದು ಹೇಳಿ ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಪಾರ್ಕಿಂಗ್ ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ
ಸ್ಥಳೀಯ ನಿವಾಸಿ ಗಾಂಧಿ ಮಾತನಾಡಿ, ದೇವಸ್ಥಾನದ ಸುತ್ತಮುತ್ತಲಿನ ಪಾರ್ಕಿಂಗ್ ಅವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
“ಮುಖ್ಯರಸ್ತೆಯಲ್ಲೇ ವಾಹನ ನಿಲುಗಡೆಗೆ ಅವಕಾಶ ನೀಡಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಬಡ ಕುಟುಂಬದ ವ್ಯಕ್ತಿಯೊಬ್ಬರ ಕಾಲು ಮುರಿಯುವ ಮಟ್ಟಿಗೆ ಅಪಘಾತ ಸಂಭವಿಸಿದೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪಾರ್ಕಿಂಗ್ ಲಾಭಕ್ಕೇ ಆದ್ಯತೆ’
“ದೇವಸ್ಥಾನದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಪಾರ್ಕಿಂಗ್ ಶುಲ್ಕದ ಲಾಭಕ್ಕಾಗಿ ಮುಖ್ಯರಸ್ತೆಯಲ್ಲೇ ವಾಹನ ನಿಲ್ಲಿಸಲು ಅವಕಾಶ ನೀಡಲಾಗುತ್ತಿದೆ,” ಎಂದು ದೂರಿದರು.
“ಸ್ಥಳೀಯ ನಿವಾಸಿಗಳಿಗೆ ಸಂಚಾರವೇ ಕಷ್ಟವಾಗಿದೆ. ಈ ಅವ್ಯವಸ್ಥೆಯನ್ನು ಪ್ರಶ್ನಿಸಿದರೆ ಸಾರ್ವಜನಿಕರೇ ತಪ್ಪಾಗಿ ಅರ್ಥಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಹೇಳಿದರು.
ಶಾಶ್ವತ ಪರಿಹಾರಕ್ಕೆ ಒತ್ತಾಯ
ದೇವಸ್ಥಾನ ಸುತ್ತಮುತ್ತ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
