ತುಮಕೂರು- ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನಕ್ಕೆ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಡಿವೈಎಸ್ಪಿ ಚಂದ್ರಶೇಖರ್, ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ, ನಯಾಜ್ ಅಹಮದ್, ಇರ್ಫಾನ್, ಸೈಯದ್ ಫಯಾಜ್. ಗುರುಪ್ರಸಾದ್, ಸಿಕಂದರ್ ಅವರು ಭೇಟಿ ನೀಡಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಲು ಅವಕಾಶ ಮಾಡಿಕೊಡುವುದೇ ಬಕ್ರೀದ್ ಹಬ್ಬದ ವಿಶೇಷತೆ. ಎಲ್ಲರೂ ಕೂಡಿ ಸಹೋದರತೆ, ಸಮಾನತೆ ಹಾಗೂ ಸಹಬಾಳ್ವೆಯಿಂದ ಬದುಕು ನಡೆಸುವ, ಶಾಂತಿ ಸೌಹಾರ್ದತೆಯ ಪ್ರತೀಕವಾಗಿದೆ ಈ ಬಕ್ರೀದ್ ಹಬ್ಬ ಎಂದರು.
ಮನುಕುಲಕ್ಕೆ ಶಾಂತಿ ನೀಡಲಿ, ಮಳೆಯಾಗಲಿ, ಬೆಳೆಯಾಗಲಿ. ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಬೇರೆಯವರ ಬಗ್ಗೆ ಇರುವ ಕೆಡಕನ್ನು ನಾವೆಲ್ಲಾ ತ್ಯಾಗ ಮಾಡಬೇಕಾಗಿದೆ ಎಂದರು.
ಬಕ್ರೀದ್ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿ, ಎಲ್ಲರೂ ಕೂಡಿ ಬಾಳುವಂತಾಗಲಿ, ಉತ್ತಮ ಮಳೆ, ಬೆಳೆಯಾಗಿ ದೇಶ ಸಮೃದ್ಧಿಯಾಗಲಿ ಎಂದು ಆಶಿಸಿದರು. ನಮ್ಮಲ್ಲಿರುವ ಅಸೂಯೆ, ದ್ವೇಷವನ್ನು ತೆಗೆದು ಹಾಕಬೇಕು. ಬಕ್ರೀದ್ ತ್ಯಾಗ ಬಲಿದಾನದ ಸಂಕೇತ ಎಂದು ಹೇಳುವ ಮೂಲಕ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
– ಚಂದ್ರಚೂಡ ಕೆ.ಬಿ
