ನವದೆಹಲಿ: ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ‘ಸಾರ್ಥಕ್-PDS’ (SARTHAK-PDS) ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಗೆ ₹25,530 ಕೋಟಿ ಕೇಂದ್ರ ಅನುದಾನ ಮೀಸಲಿಡಲಾಗಿದ್ದು, 2026ರ ಏಪ್ರಿಲ್ನಿಂದ 2031ರ ಮಾರ್ಚ್ವರೆಗೆ ಜಾರಿಯಲ್ಲಿರಲಿದೆ.
‘SARTHAK-PDS’ ಎಂದರೆ “Scheme for Assistance in Ration Transport and Handling–Income with Automation in PDS” ಎಂಬುದಾಗಿ ವಿಸ್ತರಿಸಲಾಗುತ್ತದೆ. ಈ ಯೋಜನೆಯು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳ ಸಾಗಣೆ, ನಿರ್ವಹಣೆ ಹಾಗೂ ತಂತ್ರಜ್ಞಾನ ಆಧಾರಿತ ಸುಧಾರಣೆಗಳನ್ನು ಒಟ್ಟುಗೂಡಿಸಿದ ಸಮಗ್ರ ಯೋಜನೆಯಾಗಿದೆ.
ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುದಾನಿತ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವ ಪ್ರಮುಖ ಆಹಾರ ಭದ್ರತಾ ವ್ಯವಸ್ಥೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 (NFSA) ಅಡಿಯಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ.
ಸಾರ್ಥಕ್-PDS ಯೋಜನೆಯಡಿ ಈಗಿರುವ ಎರಡು ಯೋಜನೆಗಳನ್ನು ವಿಲೀನಗೊಳಿಸಲಾಗಿದೆ. ರಾಜ್ಯಗಳ ಒಳರಾಜ್ಯ ಆಹಾರ ಧಾನ್ಯ ಸಾಗಣೆಗೆ ನೆರವು ಹಾಗೂ ಫೇರ್ ಪ್ರೈಸ್ ಶಾಪ್ (FPS) ಡೀಲರ್ಗಳ ಮಾರ್ಜಿನ್ ಯೋಜನೆ ಮತ್ತು SMART-PDS ತಂತ್ರಜ್ಞಾನ ಸುಧಾರಣಾ ಯೋಜನೆಗಳನ್ನು ಒಟ್ಟುಗೂಡಿಸಿ ಹೊಸ ರೂಪ ನೀಡಲಾಗಿದೆ.
ಯೋಜನೆಯಲ್ಲಿ ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಹಾಗೂ ಬ್ಲಾಕ್ಚೇನ್ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ. ‘ನಿರ್ಮಲ್’, ‘ಆಶಾ’ ಮತ್ತು ‘ಸಕ್ಷಮ್’ ಎಂಬ ಮೂರು ತಂತ್ರಜ್ಞಾನ ವೇದಿಕೆಗಳ ಮೂಲಕ ಪಿಡಿಎಸ್ ವ್ಯವಸ್ಥೆ ನಿರ್ವಹಿಸಲಾಗುತ್ತದೆ.
‘ನಿರ್ಮಲ್’ ಫಲಾನುಭವಿಗಳ ನೈಜ ಕಾಲದ AI ಆಧಾರಿತ ಡೇಟಾಬೇಸ್ ವ್ಯವಸ್ಥೆಯಾಗಿದ್ದು, ‘ಆಶಾ’ ಬಹುಭಾಷಾ ದೂರು ಪರಿಹಾರ ವೇದಿಕೆಯಾಗಿದೆ. ‘ಸಕ್ಷಮ್’ ಸರಕು ಸರಪಳಿ ನಿರ್ವಹಣೆಗೆ GPS ವಾಹನ ಟ್ರ್ಯಾಕಿಂಗ್ ಹಾಗೂ QR ಕೋಡ್ ಟ್ರೇಸಬಿಲಿಟಿ ಸೌಲಭ್ಯ ಹೊಂದಿದೆ.
ಈ ಯೋಜನೆ ಪಿಡಿಎಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ಆಹಾರ ಧಾನ್ಯಗಳ ಸರಿಯಾದ ವಿತರಣೆಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
