ತುಮಕೂರು- ನಗರದ ವಸಂತನರಸಾಪುರ, ಹಿರೇಹಳ್ಳಿ ಹಾಗೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗ ಪಡೆದು, ಉದ್ಯಮ ಪ್ರಾರಂಭಿಸಲು ಪರಿಶಿಷ್ಟ ಜಾತಿ ಮತ್ತು ವರ್ಗದ ಉದ್ದಿಮೆದಾರರಿಗೆ ವಿಫುಲ ಅವಕಾಶಗಳಿದ್ದು, ಈ ಕಾರ್ಯಕ್ರಮ ಕೇವಲ ಜಾಹಿರಾತಿಗೆ ಸೀಮಿತವಾಗದೆ, ನಿಜವಾಗಿಯೂ ಜಾರಿಗೆ ಬರಬೇಕು ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ನಗರದ ಕೈಗಾರಿಕಾ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯವು, ಕರ್ನಾಟಕ ಮಹಿಳಾ ಉದ್ದಿಮೆದಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಎಸ್.ಸಿ, ಎಸ್ಟಿ ಉದ್ದಿಮೆದಾರರ ಅಭಿವೃದ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಉದ್ದಿಮೆದಾರರು ಇಂದಿನ ಪೈಪೋಟಿ ಯುಗದಲ್ಲಿ ಉದ್ದಿಮೆದಾರರಾಗಿ ಬಹಳ ಕಾಲ ಉಳಿಯುವುದು ನಿಜಕ್ಕೂ ತ್ರಾಸದಾಯಕ. ಇಂತಹ ಕಾರ್ಯಗಾರಗಳು ನಿಮಗೆ ತಮ್ಮ ಉದ್ದಿಮೆಯನ್ನು ಯಶಸ್ಸಿನ ಕಡೆಗೆ ತೆಗೆದುಕೊಂಡು ಹೊಗಲು ಇರುವ ಮಾರ್ಗಗಳೇನು, ಹಣಕಾಸಿನ ಸಹಾಯ,ಕಚ್ಚಾವಸ್ತುಗಳ ಖರೀದಿ,ಮಾರುಕಟ್ಟೆ, ಅಮದು ಇನ್ನಿತರ ವಿಚಾರಗಳನ್ನು ನುರಿತ ಸಂಸ್ಥೆಗಳು ಮಾರ್ಗದರ್ಶನ ಮಾಡಲಿದ್ದಾರೆ. ಹಾಗಾಗಿ ಇಂತಹ ಕಾರ್ಯಗಾರಗಳಲ್ಲಿ ಹಾಲಿ ಉದ್ದಿಮೆದಾರರು ತಮ್ಮ ಉದ್ದಿಮೆಯನ್ನು ವಿಸ್ತರಿಸಲು, ಹೊಸ ಉದ್ದಿಮೆ ಸ್ಥಾಪಿಸಲು ಬೇಕಾದ ಅಗತ್ಯ ಮಾಹಿತಿ ದೊರೆಯಲಿದೆ ಎಂದರು.
ಕೈಗಾರಿಕೆಗಳಿಗೆ ಹಣಕಾಸಿನ ನೆರವು ಅತಿಮುಖ್ಯ. ಎಸ್.ಬಿ.ಐನ ಲೀಡ್ ಬ್ಯಾಂಕ್ ಮ್ಯಾನೇಜರ್ರವರು, ಸರ್ಕಾರ ಅಥವಾ ಸಂಘ ಸಂಸ್ಥೆಗಳು ಆಯೋಜಿಸುವ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ತಾವು ಬರುವುದಿಲ್ಲ. ತಮ್ಮ ಪರವಾಗಿ ಬೇರೆಯವರನ್ನು ಕಳುಹಿಸುವುದಿಲ್ಲ. ಉದ್ದಿಮೆದಾರರೆಂದರೆ ಅಲರ್ಜಿ ಎಂಬಂತೆ ನಡೆದುಕೊಳ್ಳುತಿದ್ದಾರೆ. ಇವರ ಬಗ್ಗೆ ಮೂರು ಜನ ಸಂಸದರಿಗೆ, ಎಸ್.ಬಿ.ಐನ ಹಿರಿಯ ಅಧಿಕಾರಿಗಳಿಗೆ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರಿಗೂ ದೂರು ನೀಡಲಾಗಿದೆ. ಆದರೂ ಇಂದಿನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಈ ರೀತಿಯ ಅಧಿಕಾರಿಯಿಂದ ನವ ಉದ್ದಿಮೆದಾರರು ಏನನ್ನು ನಿರೀಕ್ಷಿಸಲು ಸಾಧ್ಯ.ಉದ್ದಿಮೆದಾರರು ಹಣಕಾಸಿಗಾಗಿ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅವುಗಳನ್ನು ವಿಲೇವಾರಿ ಮಾಡಿಸುವು ಗುರುತರ ಜವಾಬ್ದಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಮೇಲಿದೆ.ಅವರೇ ಇಂತಹ ಸಭೆಗೆ ಗೈರು ಹಾಜರಾಗುವುದು ತರವಲ್ಲ ಎಂದು ಮುರುಳೀಧರ ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಸೇವಂತ್ ವಾಸುದೇವ್ ಮಾತನಾಡಿ,ತುಮಖೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರು ತಮ್ಮ ಉದ್ದಿಮೆಗಳನ್ನು ಸ್ಥಾಪಿಸಲು ಸರಕಾರದಿಂದ ಯಾವ ಯಾವ ನೆರವು ದೊರೆಯಲಿದೆ.ಕಚ್ಚಾವಸ್ತು ಖರೀದಿ, ಮಾರಾಟ, ಜಾಗ ಇತ್ಯಾದಿ ಮಾಹಿತಿಗಳನ್ನು ಈ ಕಾರ್ಯಗಾರದಲ್ಲಿ ಅಧಿಕಾರಿಗಳು ತಿಳಿಸಿಕೊಡಲಿದ್ದಾರೆ.ಹಾಗಾಗಿ ಆಗಮಿಸಿರುವ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ರಾಷ್ಟ್ರೀಯ ಎಸ್ಸಿ, ಎಸ್ಟಿ ಉದ್ದಿಮೆದಾರರ ಯೋಜನೆಯ ಅಧಿಕಾರಿ ಡಾ.ಕೆ.ಸುರೇಶ್ ಮಾತನಾಡಿದರು, ಕಾರ್ಯಕ್ರಮವನ್ನು ಕರ್ನಾಟಕ ಮಹಿಳಾ ಉದ್ದಿಮೆದಾರರ ಸಂಘದ ಅಧ್ಯಕ್ಷ ಭುವನೇಶ್ವರಿ ಉದ್ಘಾಟಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜು, ಮಹಿಳಾ ಉದ್ದಿಮೆದಾರರ ಸಂಘದ ಉಪಾಧ್ಯಕ್ಷ ಜಗದೀಶ್ವರಿ.ಡಿ. ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
