ರಾಮನಾಥಪುರ : ಪಟ್ಟಣ ಸಮೀಪದ ಕೆರೆಕೋಡಿಯ ಈದ್ಗಾ ಮೈದಾನದಲ್ಲಿ ಕೊಣನೂರಿನ ಸಮಸ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನಕ್ಕೆ ಆಗಮಿಸಿ ಇಮಾಮರ ನೇತೃತ್ವದಲ್ಲಿ ಸಾಲಾಗಿ ನಿಂತು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಗತ್ತಿಗೆ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಪರಸ್ಪರ ಅಪ್ಪಿಕೊಂಡು ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಪ್ರಾರ್ಥನೆಯ ನಂತರ ಖಬರಾಸ್ತಾನ್ಗೆ ತೆರಳಿದ ಮುಸ್ಲಿಮರು ತಮ್ಮ ಪೂರ್ವಜರು ಹಾಗೂ ಕುಟುಂಬದ ಮಡಿದವರ ಸಮಾಧಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆಗಳಿಗೆ ತೆರಳಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ ಹಾಗೂ ಬಂಧು-ಬಾಂಧವರೊಂದಿಗೆ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.

ಪ್ರವಾದಿ ಇಬ್ರಾಹಿಂ ಅವರ ಸತ್ಯನಿಷ್ಠೆ ಹಾಗೂ ತ್ಯಾಗದ ಸಂಕೇತವಾಗಿ ಆಚರಿಸಲಾಗುವ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಮರು ಸಂಪ್ರದಾಯದಂತೆ ಕುರ್ಬಾನಿ ನೆರವೇರಿಸಿ ಕುರಿ ಹಾಗೂ ಆಡುಗಳ ಮಾಂಸವನ್ನು ಹಂಚಿಕೊಂಡರು.
ತಾಲೂಕಿನ ಸಮಸ್ತ ಮುಸ್ಲಿಮರಿಗೆ ಶಾಸಕ ಎ. ಮಂಜು ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಹಬ್ಬದ ಶುಭಾಶಯ ಕೋರಿದರು.
– ಕುಮಾರಸ್ವಾಮಿ ಎಂ.ಎನ್.
