‘ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ನೀವು ನನ್ನನ್ನು ಹಿಂಸಿಸಬಹುದು, ನೀವು ಈ ದೇಹವನ್ನು ಸಹ ನಾಶಪಡಿಸಬಹುದು. ಆದರೆ ನೀವು ಎಂದಿಗೂ ನನ್ನ ಮನಸ್ಸನ್ನು ಬಂಧಿಸಲಾಗುವುದಿಲ್ಲ.
-ಮಹಾತ್ಮ ಎಂ.ಕೆ.ಗಾಂಧಿ.
ಮಾಳೇಟಿರ ಸೀತಮ್ಮ ವಿವೇಕ್ ಅವರ ಇತ್ತೀಚಿನ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕವೊಂದರ ನಂತರ ಮೂಡಿ ಬರುತ್ತಿರುವ ನನ್ನ ಚೊಚ್ಚಲ ಕನ್ನಡ ಕೃತಿಯಾಗಿದೆ ಎನ್ನುವ ಮೇಡಂ ಅವರ ತವರು ಮನೆ ಹೆಸರು ಕಂಬೀರಂಡ. ಮೂರ್ನಾಡು ಬಾಡಗ ಗ್ರಾಮ. ಕೊಡಗು ಜಿಲ್ಲೆ. ಚರಿತ್ರೆ ಅಧ್ಯಯನಗಾರ್ತಿಯಾದ ಇವರ ಮನಸ್ಸು ಕೃತಿ ಸಾಕಷ್ಟು ಅಧ್ಯಯನ ನಡೆಸಿ ವಿಶಿಷ್ಟ ಮಾಹಿತಿ ಅನುಭವಗಳನ್ನು ಕ್ರೋಢೀಕರಿಸಿ ಬರೆದ ಕೃತಿ.
ಮಾನವ ಜೀವನದ ಅತಿ ಮಹತ್ವದ ಆದರೆ ಅತೀ ಅಲಕ್ಷಿತ ಶಕ್ತಿ ಮನಸ್ಸು. ಇದು ಕಾಣುವುದಿಲ್ಲ. ಕಾಣಿಸಿಕೊಳ್ಳುವ ಎಲ್ಲರಿಗೂ ಇದು ಸ್ಫರ್ಶಿಸಬಹುದಾದ ಅಂಗವೂ ಅಲ್ಲ. ಅದರ ಪ್ರತಿಯೊಂದು ಅನುಭವದ ಸ್ಫಂದನ. ಅದರಿಂದಲೇ ಈ ಕೃತಿಯಲ್ಲಿ ಕಾಣುವ ಮನ ಏವಂ ಮನುಷ್ಯಾಣಾಂ ಕಾರಣಂ ಬಂಧಂ ಮೋಕ್ಷಯೋ: ಎಂಬ ಪುರಾತನ ತತ್ವ ವಾಕ್ಯವು ಮನಸ್ಸಿನ ಸ್ವಭಾವವನ್ನು ನೇರವಾಗಿ ಸ್ಫಷ್ಟಪಡಿಸುತ್ತದೆ. ಮನಸ್ಸೆ ಬಂಧನಕ್ಕೂ ಕಾರಣ. ಅದೇ ಮುಕ್ತಿಗೂ ದಾರಿ ಎಂದಿದ್ದಾರೆ ಇವರ ಪತಿ ಮಾಳೇಟಿರ ವಿವೇಕಾನಂದ ಪೊನ್ನಪ್ಪನವರು.
ಮನಸ್ಸು ಒಂದು ಅಗೋಚರ ಅತೀಂದ್ರಿಯ ಶಕ್ತಿಯಾಗಿದೆ. ಹೆಣ್ಣು ಗಂಡೆನ್ನದೆ ಸರ್ವರೊಳಗೂ ಇರುವ ಮನಸ್ಸು ಪ್ರತಿಯೊಬ್ಬರಿಗಿರುವ ಅವರವರ ದೇಹದೊಂದಿಗೆ ಜೀವಮಾನವೆಲ್ಲ ಚಲಿಸುವ, ದೈಹಿಕ ಅರಿಹಂತಗಳಿಂದ ಸಮ್ಮಿಳಿತವಾಗಿರುವ ಅತೀಂದ್ರಿಯವಾಗಿದೆ. ಬುವಿಯಲ್ಲಿ ರೂಪ ತಾಳುವ ದೇಹದೊಂದಿಗೆ ಗಾಢವಾದ ನಂಟು ಬೆಸೆದುಕೊಂಡಿರುವ ಮನಸ್ಸಿಗೆ ಘಾಸಿಯಾದರೆ ಇಡೀ ಶರೀರವೇ ನಾಶವಾಗುತ್ತದೆ. ಅಂತಹ ಘನತ್ತರವಾದ ನಮ್ಮೊಳಗೆ ಇರುವ ಮನ: ಮಾತೃಕೆಯ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸದೆ ಇರುವುದರಿಂದಲೇ ನಾವು ಮಾತ್ರವಲ್ಲದೆ ಕುಟುಂಬ, ಸಮಾಜ, ದೇಶವೇ ಏರುಪೇರು ದೃಷ್ಟಿಕೊನವನ್ನು ಹೊಂದಿದೆ.

ಮಾನವ ಸಂಘ ಜೀವಿ. ಎಲ್ಲರ ಮನಸ್ಸಿಗು ಒಟ್ಟಿಗೆ ಬಾಳುವುದೇ ಪ್ರಧಾನ ಬಯಕೆ ಆಗಿರುತ್ತದೆ. ಹಾಗೆಂದು ಒಟ್ಟಿಗೆ ಬಾಳುವುದು ಸುಲಭದ ಮಾತಲ್ಲ. ನನಗೆ ಜಿ.ಎಸ್. ಶಿವರುದ್ರಪ್ಪನವರ ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಎಂಬ ಭಾವಗೀತೆ ನೆನಪಾಗುತ್ತದೆ. ಅದರಲ್ಲಿನ ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲ್ಲಿ. ಹೊಂದಿಕೆ ಎಂಬುದು ಎಷ್ಟು ಕಷ್ಟವೋ ನಾಲ್ಕು ದಿನದ ಈ ಬಾಳಿನಲಿ.. ಹೌದು ಮನಸ್ಸಿನ ಅರಿವಿಕೆ ಇಲ್ಲದೆ ಇರುವುದೇ ಆ ಹೊಂದಿಕೆ ಸಾಧ್ಯವಾಗದೆ ಇರಲು ಕಾರಣ.
ಮೇಡಂ ಅವರು ತಮ್ಮ ವೈಯಕ್ತಿಕ ಜೀವನಾನುಭವಗಳನ್ನು ಆತ್ಮ ಪರಿಶೀಲನೆಯ ಕಣ್ಣಿನಿಂದ ನೋಡುತ್ತಾ, ಸಂಕಟಗಳನ್ನು ಜ್ಞಾನವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ಕೊಡಗಿನ ಪ್ರಕೃತಿ ವಾತಾವರಣದಲ್ಲಿ ಬೆಳೆದ ಬಾಲ್ಯ, ವಿಭಿನ್ನ ಸಂಸ್ಕೃತಿಗಳ ಅನುಭವ, ಜೀವನದ ಕಠಿಣ ಘಟ್ಟಗಳು, ಆರೋಗ್ಯ ಸಂಕಟಗಳು, ಆತ್ಮ ಅನ್ವೇಷಣೆಯ ಕ್ಷಣಗಳು ಇವೆಲ್ಲವೂ ಈ ಕೃತಿಗೆ ಜೀವ ತುಂಬಿವೆ.
ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ ನಲ್ಲಿ ಸಂಭವಿಸಿದ ಮರಣಭಯದ ಅನುಭವ ದಾಖಲಿಸುತ್ತಾರೆ. ನಮ್ಮ ಕುಟುಂಬ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿ ಮನಾಲಿಯ ಹಿಡಿಂಬ ದೇವಸ್ಥಾನ ಸಮೀಪದಿಂದ ಸುಮಾರು ೫ ಸಾವಿರ ಮೀ.ಗಿಂತಲೂ ಎತ್ತರದ ರೋಹತಂಗ್ ಪಾಸ್ ನ ಪರ್ವತದೆಡೆ ಪ್ರಯಣ ಬೆಳಸಬೇಕಿತ್ತು. ಅದು ಹಿಮ ಪರ್ವತವಾಗಿ ಸ್ಥಳೀಯರು ಬೆಚ್ಚಗಿನ ಮೈಹೊದಿಕೆ ಹಾಕಿಕೊಳ್ಳುವಂತೆ ಹೇಳಿದ್ದರು. ನಾವು ಅದೇ ರೀತಿ ತಯಾರಾಗಿ ಹೊರಟೆವು. ಅನೇಕ ತಿರುವುಗಳ ರಸ್ತೆ. ಕ್ರಮಿಸಬೇಕಾಗಿದ್ದ ಎತ್ತರ ನಾವಿದ್ದ ಸ್ಥಳದಿಂದ ತುಂಬಾ ಮೇಲೆ ಮೋಡ ಹರಡಿಕೊಂಡಂತೆ ಇತ್ತು. ಹಾಗಾಗಿ ನಮ್ಮ ವಾಹನದ ಚಾಲಕ ನಮಗೆ ಶ್ವಾಸಕೋಶ ಸಂಬಂಧಿ ತೊಂದರೆ ಇರುವವರಿಗೆ ಆಮ್ಲಜನಕ ಕೊರತೆ ಬಾಧಿಸಬಹುದೆಂದು ಮುನ್ಸೂಚನೆ ನೀಡಿದ್ದರು. ನನ್ನ ತಾಯಿಗೆ ಉಬ್ಬಸದ ಸಮಸ್ಯೆ ಇತ್ತು. ನಾವು ಅವರ ಬಗ್ಗೆ ಯೋಚಿಸುತ್ತಾ ವಾಹನದಲ್ಲಿ ಕುಳಿತು ಎಲ್ಲವನ್ನು ಅಹ್ಲಾದಿಸುತ್ತ ತುತ್ತ ತುದಿ ತಲುಪಿದೆವು. ಇನ್ನೇನು ಹಿಮ ಹರಡಿದ್ದ ಜಾಗ ಮುಟ್ಟಬೇಕು. ಅಷ್ಟು ಹತ್ತಿರದಲ್ಲಿ ಹಿಮಾವೃತ ಸುಂದರ ಪುಟ್ಟ ಗುಡ್ಡ! ಅದನ್ನು ನೋಡುತ್ತ ವಾಹನದಿಂದ ಎಲ್ಲರೂ ಖುಷಿಯಿಂದ ಇಳಿದರು. ಸುತ್ತಮುತ್ತಲ ದೃಶ್ಯಗಳು ವರ್ಣಿಸಲು ಅಸಾಧ್ಯ! ಸೌಂದರ್ಯ ಅಮೋಘ! ದೂರದಲ್ಲಿ ಹಿಮಚ್ಛಾದಿತ ಬೆಟ್ಟದ ತುದಿಯಲ್ಲಷ್ಟೇ ಸೂರ್ಯನ ಕಿರಣಗಳು ಹಾಯ್ದು ಬೆಟ್ಟ ಬೆಳ್ಳಿಯಂತೆ ಹೊಳೆಯುತ್ತಿತ್ತು. ಆ ಸೊಂಪನ್ನು ನೋಡ ನೋಡುತ್ತಿದ್ದಂತೆಯೇ ಆರೋಗ್ಯವಾಗಿದ್ದ ನಾನು ದೊಪ್ಪೆಂದು ಕುಸಿದ್ದು ಬಿದ್ದೆ! ಬಿದ್ದದ್ದು ನನಗೆ ತಿಳಿಯಲಿಲ್ಲ. ಎಷ್ಟು ಸಮಯದ ನಂತರ ಎಚ್ಚರವಾಯಿತು ತಿಳಿಯಲಿಲ್ಲ.

ಅಲ್ಲಿ ನಾನು ಎದ್ದು ಕುಳಿತಾಗ ಕಿವಿಗೆ ಬಿದ್ದದ್ದು ನನ್ನ ತಾಯಿಯ ಪ್ರಶ್ನೆ. ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..ಎಂದು! ಆಗ ನಾನು ಅಲ್ಲಿದ್ದೆ. ಇಲ್ಲಿಗೆ ಹೇಗೆ ಬಂದೆ? ಎಷ್ಟು ಇಂಪಾದ ನಾದಗಳು ಅಹ್ಲಾದಕರ ಪರಿಮಳ ಅಲ್ಲಿ ಇದ್ದವಲ್ಲ ಎಂದಿದ್ದೆ. ಅಲ್ಲಿ ಆಗ ಬಿದ್ದಿದ್ದ ನನ್ನ ದೇಹದ ಸುತ್ತಲೂ ಜನ ಸೇರಿ ಮುಟ್ಟಿ ಉಪಚರಿಸುತ್ತಿದ್ದರೂ ಶರೀರಕ್ಕೆ ಯಾವುದೇ ಸ್ಫರ್ಶಾನುಭವ ಆಗುತ್ತಿಲ್ಲ! ಆದರೆ ನಾನು ಸಂಪೂರ್ಣ ಎಚ್ಚರವಾಗಿಯೇ ಇದ್ದೆ! ಮೊದಲೇ ನಾನು ಪ್ರಕೃತಿ ಸೌಂದರ್ಯ ತಲ್ಲೀನ ಅಪ್ಪಟ ಆರಾಧಕಿ. ಆ ಕಾರಣಕ್ಕೋ ಏನೋ ಯಾವ ಬೆಳ್ಳಿಬೆಟ್ಟ ನೋಡುತ್ತಿದ್ದೆನೋ ಅದರೆಡೆಗೆ ನಾನು ಆರಾಮಾಗಿ ಹೊಗುತ್ತಿದ್ದುದು ಚೆನ್ನಾಗಿಯೇ ತಿಳಿಯುತ್ತಿತ್ತು.
ಹತ್ತಿರ ತಲುಪಿದಾಗ ಅದರ ಆಸುಪಾಸು ಇಂಪಾದ ನಾದ ಕೇಳಿಸುತ್ತಿತ್ತು. ಸುಂದರ ಹೂವಿನ ಪರಿಮಳ ಹರಡಿತ್ತು. ಎಂದೂ ನೋಡಿರದ ಸುಂದರ ಪಕ್ಷಿಗಳು ಹಾರಾಡುತ್ತಾ ಇದ್ದಿದ್ದು ಗ್ರಹಿಸಿದ್ದೆ. ನೀರು ಹರಿಯುವ ನಾದ ಬರುತ್ತಿದ್ದ ಕಡೆ ಹೋಗಲು ಅಣಿಯಾದಾಗ ದೂರದಲ್ಲಿ ಹೃದಯಕ್ಕೆ ಹತ್ತಿರವಾಗಿ ನನ್ನನ್ನು ಕರೆಯುತ್ತಿರುವುದು ಕೇಳಿಸಿ ಆ ಕೂಗು ಬಂದ ಕಡೆಗೆ ಆ ಸುಂದರ ತಾಣ ಬಿಟ್ಟು ಹೊರಡಲು ಮನಸ್ಸಿಲ್ಲದಿದ್ದರೂ ಗುಡ್ಡದಿಂದ ಇಳಿಯುತ್ತ ಹತ್ತಿರ ತಲುಪಿದಾಗ..
ಮುಖಕ್ಕೆ ನೀರು ಚಿಮುಕಿಸಿ ಮೂಗಿಗೆ ಕರ್ಪೂರವನ್ನು ಮೂಸಿಸುತ್ತಿರುವ ಕಾಲ್ಚೀಲ ಕಳಚಿ ಕಾಲು ತಿಕ್ಕುತ್ತಿರುವ ದೈಹಿಕ ಅನುಭವಗಳಾದವು. ಅಲ್ಲಿ ಕಣ್ಣು ತುಂಬಿಕೊಂಡು ಕರೆಯುತ್ತಿದ್ದವರು ನನ್ನ ತಾಯಿ! ನನ್ನ ಪತಿ ತಂಗಿ ಮಗ ಎಲ್ಲರು ಕರೆಯುತ್ತಿದ್ದರೂ ಅಮ್ಮನ ಕೂಗು ಮಾತ್ರ ಕೇಳಿಸುತ್ತಿದ್ದದ್ದು ಮಾತ್ರ ವಿಚಿತ್ರ ಎನಿಸಿತು. ಅದೇ ಹೃದಯದ ಕೂಗು, ಎದೆಯಾಳದ ಕೂಗು ಎಂಬುದು ಅರಿವಾಯಿತು.
ಈ ದೇಹದಿಂದ ಪ್ರಜ್ಞೆ ಹೋಗುವಾಗ ಮತ್ತು ಬರುವಾಗ ಪೂರ್ಣ ಕತ್ತಲಲ್ಲಿ ಸಾಗಿದ್ದರೂ ಬರಿ ಕಣ್ಣಿಗೆ ಕಾಣದ ಪ್ರಕಾಶಮಾನವಾದ ಬೆಳಕಿನಲ್ಲಿ ಸಂಚರಿಸಿದ್ದೆ! ನನಗೆ ಕನಸುಗಳು ಸಾಕಷ್ಟು ಬಿದ್ದಿವೆ. ಆದರೆ ನನ್ನ ಮನಸ್ಸು ೫೦-೬೦ ಕಿ.ಮೀ. ದೂರದಷ್ಟಿದ್ದ ಬೆಟ್ಟದ ಸಮೀಪದವರೆಗೆ ದೇಹದೊಂದಿಗೆ ಪಯಣಿಸಿದಂತಹ ಅನುಭವ ಪಡೆದಿದ್ದು, ಅದೂ ಪೂರ್ಣ ಪ್ರಜ್ಞೆಯಲ್ಲಿ ಎಂದಿಗೂ ಮರೆಯಲಾಗದು.
ದೇಹಪ್ರಜ್ಞೆ ಕ್ಷೀಣಿಸಿದ ಕ್ಷಣ ಅನುಭವಿಸಿದ ಆಂತರಿಕ ಪ್ರಕಾಶ, ನಾದ, ಪರಿಮಳ, ಇವು ಮನಸ್ಸಿನ ಅತೀತ ಆಯಾಮಗಳ ಬಗ್ಗೆ ಆಳವಾದ ಚಿಂತನೆಗೆ ದಾರಿ ಮಾಡಿಕೊಟ್ಟಿವೆ.
ಇದಾದ ನಂತರ ತಾಯಿ ತಂದೆ ಇರುವವರೆಗೂ ನಾನಾಗಿಯೇ ನನ್ನ ಮರಣವನ್ನೆಂದೂ ಬಯಸಬಾರದೆಂಬ ಮನಸ್ಸು ಬೆಳೆದಿದೆ. ಅಷ್ಟೇ ಅಲ್ಲ ಯಾರ ಮರಣವನ್ನೂ ಬಯಸಬಾರದು. ತದ್ವಿರುದ್ದ ಗುಣದವರೊಂದಿಗೆ ಜೊತೆಯಲ್ಲೇ ವಾಸಿಸಬೇಕಾದಾಗಲೂ ಯಾರನ್ನೂ ದ್ವೇಷಿಸದೆ ನನ್ನ ಕರ್ತವ್ಯಗಳನ್ನು ಯಾವ ಕಾರಣಕ್ಕೂ ಕೈಬಿಡದೆ ಖುಷಿಯಿಂದ ಮಾಡುತ್ತಿರಬೇಕೆಂಬ ನಿಲುವು ತಾಳಿದೆ..
ಅದಾಗಿ ಮೇಡಂ ಧ್ಯಾನ ಯೋಗ ಸಾಧನೆ ಮೂಲಕ ಮಹರ್ಷಿ ಪ್ರಭಾಕರ್ ಗುರೂಜಿ, ಆಚಾರ್ಯ ಆದಿನಾಥ್, ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್ ಯೋಗ ಸಾಧಕರ ಮಾರ್ಗದರ್ಶನದಲ್ಲಿ ಮನಸ್ಸಿನ ಸ್ಕೈರ್ಯ ಮತ್ತು ಆತ್ಮಶಾಂತಿ ಕಂಡ ಅನುಭವಗಳು ಈ ಕೃತಿಯ ಆತ್ಮವಾಗಿದೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.
