ಬೆಂಗಳೂರು, ಜೂನ್ 5: ರಾಜ್ಯದಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Police Constable) ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಒಟ್ಟು 3,991 ಹುದ್ದೆಗಳು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 3,395 ಸಾಮಾನ್ಯ ಹುದ್ದೆಗಳು ಹಾಗೂ 596 ಹೈದರಾಬಾದ್-ಕರ್ನಾಟಕ (HK) ಪ್ರದೇಶದ ಹುದ್ದೆಗಳು ಸೇರಿವೆ.
ಅಭ್ಯರ್ಥಿಗಳು ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 8, 2026ರಿಂದ ಆರಂಭವಾಗಲಿದ್ದು, ಜುಲೈ 3, 2026ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯು ಆಗಸ್ಟ್ 2, 2026ರಂದು ನಡೆಯಲಿದ್ದು, ಅಭ್ಯರ್ಥಿಗಳು ಈಗಿನಿಂದಲೇ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ.
ಅರ್ಹತೆ, ವಯೋಮಿತಿ, ಮೀಸಲಾತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಮಾದರಿ, ಅರ್ಜಿ ಶುಲ್ಕ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ.
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಯುವಕರಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವ ನಿರೀಕ್ಷೆ ವ್ಯಕ್ತವಾಗಿದೆ.
