ತುಮಕೂರು: ಅಲೈಡ್ ಹೆಲ್ತ್ ಸೈನ್ಸ್ ವೈದ್ಯಕೀಯ ಕ್ಷೇತ್ರದ ಬೆನ್ನಲುಬು ಎಂದು ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪಠ್ಯಕೋಶ ನಿರ್ದೇಶಕ ಡಾ.ಷಣ್ಮುಖಪ್ಪರವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಶಿರಾರಸ್ತೆಯ ಶ್ರೀದೇವಿ ಇನ್ಸ್ಟ್ಯೂಟ್ ಅಫ್ ಪ್ಯಾರಾಮೆಡಿಕಲ್ ಸೈನ್ಸ್ ಮತ್ತು ಶ್ರೀದೇವಿ ಇನ್ಸ್ಟ್ಯೂಟ್ ಅಫ್ ಅಲೈಡ್ ಹೆಲ್ತ್ ಸೈನ್ಸ್ ವತಿಯಿಂದ 5ನೇ ವರ್ಷದ ಪದವಿ ಪ್ರದಾನ ಸಮಾರಂಭವನ್ನು ಶ್ರೀದೇವಿ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಡಾ.ಷಣ್ಮುಖಪ್ಪರವರು ಮಾತನಾಡುತ್ತಾ ಭಾರತದಲ್ಲಿ 60 ಲಕ್ಷ ಉದ್ಯೋಗದ ಬೇಡಿಕೆ ಇದೆ. ಇನ್ನೂ ಜಗತ್ತಿನಲ್ಲಿ ಈ ವಲಯದ ತಜ್ಞರಿಗೆ, ಪದವೀಧರರಿಗೆ, ಎಷ್ಟು ಬೇಡಿಕೆ ಇರಬಹುದು ಎಂಬದನ್ನು ಯಾರು ಬೇಕಾದರೂ ಉಹಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯ ಸ್ಪರ್ಶ ಕರುಣೆ, ಅನುಕಂಪದ ನಡೆ ಮುಖ್ಯ ಇದನ್ನು ತಂತ್ರಜ್ಞರಿಂದ, ವೈದ್ಯಕೀಯ ಉಪಕರಣಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಮಲೇಷ್ಯಾದ ಮಾಸಾ ವಿಶ್ವವಿದ್ಯಾಲಯದ ಎಲಿವೇಟ್ನ ಪ್ರೀ-ಯೂನಿವರ್ಸಿಟಿ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನಾಗರಾಜ ಸೂರ್ಯದೇವರ ಮಾತನಾಡಿ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯಂತೆ ಮಾಸ ವಿಶ್ವವಿದ್ಯಾಲಯ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಉದ್ದೇಶ, ಗುರಿಯಿದೆ. ಮಲೇಷ್ಯಾದಲ್ಲಿ ಮೊಟ್ಟಮೊದಲ ಅಂತರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿದ ಗೌರವಕ್ಕೆ ಶ್ರೀದೇವಿ ಸಂಸ್ಥೆ ಭಾಜನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸುರೇಶ್ಗೌಡರವರು ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟಿದೆ. ಯುವಕರ ಬದುಕು ಹಸನಾಗಬೇಕು ಎಂಬ ಕಾರಣದಿಂದ ಈ ವಲಯದಲ್ಲಿ ಅಗಾಧ ಹೂಡಿಕೆ ಮಾಡಿ. ದೇಶಾದ್ಯಂತ ನೂತನ ಶಿಕ್ಷಣ ನೀತಿ ಜಾರಿಗೊಳಿಸಿದೆ. ವಿಕಸಿತ ಭಾರತದ ಕನಸು ನನಸು ಮಾಡುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ. ಶಿಕ್ಷಣ ಎಂದರೆ ಕೇವಲ ಪುಸ್ತಕ, ಅಂಕ, ಸಂಬಳ, ಅಷ್ಟೇ ಅಲ್ಲ. ಶಿಕ್ಷಣ ಎಂದರೆ ವ್ಯಕ್ತಿತ್ವ ಸೃಜನಶೀಲತೆ ಚಿಂತನೆ, ಜ್ಞಾನ ಎಂದು ದಿವಂಗತ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮಾತನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಕ್ರಾಂತಿಕಾರಿ ಬದಲಾವಣೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲೈಡ್ ಹೆಲ್ತ್ ಸೈನ್ಸ್ಗೆ ಬಹಳ ಪ್ರಾಮುಖ್ಯತೆ ನೀಡಿರುವುದರಿಂದ ಹೇರಳ ಉದ್ಯೋಗ ಅವಕಾಶ ದೊರೆಯಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಹಾಗೂ ಟ್ರಸ್ಟಿಯಾದ ಡಾ.ರಮಣ್ ಎಂ ಹುಲಿನಾಯ್ಕರ್,ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಹಾಗೂ ನೇತ್ರತಜ್ಞ ಡಾ.ಲಾವಣ್ಯ, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲ ಡಾ.ಸಿ.ಪಿ.ಚಂದ್ರಪ್ಪ, ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ.ಎನ್.ಚಂದ್ರಶೇಖರ್, ಶ್ರೀದೇವಿ ಆಸ್ಪತ್ರೆಯ ಸಿ.ಇ.ಓ ಡಾ.ಪ್ರದೀಪ್ಕುಮಾರ್ ವೆಗ್ಗಿ, ಡಾ.ಸತೀಶ್ ಟಿ.ಜಿ., ಡಾ.ವಿ.ಪವಿತ್ರ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
