ಹಾಸನ, ಜೂ. 8: ಇತಿಹಾಸದ ಅಧ್ಯಯನವು ವಿದ್ಯಾರ್ಥಿಗಳನ್ನು ಅವಲೋಕನಕ್ಕೆ ಹಚ್ಚುವುದಲ್ಲದೆ, ಪ್ರೇರಣೆ ಮತ್ತು ಜವಾಬ್ದಾರಿಯುತ ಭವಿಷ್ಯ ನಿರ್ಮಾಣಕ್ಕೆ ಬುನಾದಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ರಾಜ್ಯಾಧ್ಯಕ್ಷೆ ಕಲಾವತಿ ಮಧುಸೂದನ ಹೇಳಿದರು.
ನಗರದ ಸಪ್ನ ಬುಕ್ ಹೌಸ್ನಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ (ಬೆಂಗಳೂರು), ಹಾಸನ ಜಿಲ್ಲಾ ಘಟಕ ಹಾಗೂ ಸಪ್ನ ಬುಕ್ ಹೌಸ್ ಸಹಯೋಗದಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಐತಿಹಾಸಿಕ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಮೇಟಿಕೆರೆ ಹಿರಿಯಣ್ಣ, “ಭಾರತದ ಮೇಲೆ ಎರಡನೇ ಮಹಾಯುದ್ಧದ ಪರಿಣಾಮ” ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿಚಾರಗೋಷ್ಠಿಯಲ್ಲಿ ಮಾತನಾಡಿದ ಬಿಂದು, ಪುಷ್ಪಲತಾ, ದೀಕ್ಷಿತ್ ಎಂ.ಎನ್. ಮತ್ತು ಮೋನಿಕ, ಯುದ್ಧದ ಪರಿಣಾಮವು ಕೇವಲ ಒಂದು ಅಥವಾ ಎರಡು ದೇಶಗಳಿಗೆ ಸೀಮಿತವಾಗದೇ, ಜಾಗತಿಕ ಆರ್ಥಿಕತೆ, ಶಿಕ್ಷಣ, ಕೈಗಾರಿಕೆ ಹಾಗೂ ಸಾಮಾಜಿಕ ವ್ಯವಸ್ಥೆಗಳ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ವಿವರಿಸಿದರು. ಬೆಲೆ ಏರಿಕೆ, ಸಾಮಾಜಿಕ ಅಶಾಂತಿ ಮತ್ತು ಅಭಿವೃದ್ಧಿಯ ಕುಂಠಿತತೆಗೆ ಯುದ್ಧಗಳು ಕಾರಣವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಸುಶೀಲ ಸೋಮಶೇಖರ್, ಮನೆಮನೆ ಕವಿಗೋಷ್ಠಿಯ ಸಂಚಾಲಕಿ ಸುಕನ್ಯ ಮುಕುಂದ, ಪ್ರಾಧ್ಯಾಪಕ ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬೊಮ್ಮೆಗೌಡ, ಸಪ್ನ ಬುಕ್ ಹೌಸ್ನ ಶಾಂತಲ, ಸಾಹಿತಿಗಳಾದ ಅಪ್ಪಾಜಿಗೌಡ, ಭಾರತಿ ಹಾದಿಗೆ, ಪತ್ರಕರ್ತ ವೆಂಕಟೇಶ್ ಸೇರಿದಂತೆ ಹಲವರು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಧದಕೋಟಿ ಹಾಗೂ ಹಾಸನ ಮಹಿಳಾ ವಸತಿ ಗೃಹದ ವಿದ್ಯಾರ್ಥಿಗಳು ವಿಚಾರ ಮಂಡನೆ ನಡೆಸಿದರು.
ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿ, ದೇಶಭಕ್ತಿ ಗೀತೆ, ಏಕಪಾತ್ರಾಭಿನಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಗೊರೂರು ಅನಂತರಾಜು, ಲಲಿತಾ ಎಸ್., ಗಿರಿಜಾಂಬ, ಚಂದ್ರಕಲಾ, ಪ್ರಜ್ವಲ್ ಕೌಡಹಳ್ಳಿ, ಗಿರಿಜಾ ನಿರ್ವಾಣಿ ಸೇರಿದಂತೆ ಹಲವರು ಕವನ ವಾಚಿಸಿದರು. ಸುಪ್ರಜ, ಪುನರ್ವಿಕ ಮತ್ತು ಪೂರ್ವಿ ಏಕಪಾತ್ರಾಭಿನಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪ್ರಾರ್ಥನೆ ಸಲ್ಲಿಸಿದರು. ಕು. ಪೂರ್ವಿಕಾ ಸ್ವಾಗತ ನೃತ್ಯ ಪ್ರದರ್ಶಿಸಿದರು. ಬಿಂದು ಮತ್ತು ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾಂಬ ಸ್ವಾಗತಿಸಿ, ಗಿರಿಜಾ ನಿರ್ವಾಣಿ ವಂದಿಸಿದರು.
