ಬನ್ನಿ ಸ್ವಾಮಿ ನಮ್ಮ ಕೊಳೆಗೇರಿಗೆ
ಓಟು ಕೊಡುತ್ತೇವೆ ಜನಸೇವೆಗೆ
ಗುಂಡಿ ಬಿದ್ದು ರಸ್ತೆಗೆ ಮಳೆ ಚರಂಡಿ ನೀರು ಹರಿದು
ಹಂದಿಗಳು ಹೊರಳಾಡಿ ಬಂದಿದೆ ಕೊಳೆಗೇರಿ ಬಿರುದು
ಸಾಧುಸಂತರು ಬರಬೇಕಾಗಿತ್ತು ಸ್ನಾನಕ್ಕೆ ಇಲ್ಲಿಗೆ
ಒತ್ತುವರಿಯಿಂದ ಸಾಯುತ್ತಿರುವ ಕೊಳಕು ನೀರಿನ ಹುಣಸಿನಕೆರೆಗೆ
ಬನ್ನಿ ಸ್ವಾಮಿ ನಮ್ಮ ಕೊಳೆಗೇರಿಗೆ
ಓಟು ಕೊಡುತ್ತೇವೆ ಜನಸೇವೆಗೆ
ಮೊದಲೆಲ್ಲಾ ಇಲ್ಲಿ ಬೀಳುತ್ತಿದ್ದವು ನಾಯಿ ನರರ ಹೆಣಗಳು
ಈಗಿಲ್ಲಿ ರಿಂಗ್ ರೋಡ್ ತಲೆಎತ್ತಿವೆ ಬಾರುಗಳು ಮಾಂಸದ ಹೋಟೆಲ್ ಗಳು
ಎಸೆದ ಮೂಳೆಗಾಗಿ ಕಚ್ಚಾಡುವ ಬೀದಿ ನಾಯಿಗಳು
ಕುಡುಕರ ಬಾಯಿಂದ ಪೋಲಿ ಪದಪುಂಜಗಳು
ಬನ್ನಿ ಸ್ವಾಮಿ ನಮ್ಮ ಕೊಳೆಗೇರಿಗೆ
ಓಟು ಕೊಡುತ್ತೇವೆ ಜನಸೇವೆಗೆ
ಇಲ್ಲಿ ಕುಡಿವ ನೀರಿಗೆ ತತ್ವಾರ
ಕಸದ ರಾಶಿಯ ವಾಸನೆ ಅಪಾರ
ಇಲ್ಲಿವೆ ಮುರಿದ ಮನೆಗಳು ನೂರಾರು
ಅದರಲ್ಲಿ ಇರುವವರು ಕೂಲಿ ಕಾರ್ಮಿಕರು
ಬನ್ನಿ ಸ್ವಾಮಿ ನಮ್ಮ ಕೊಳೆಗೇರಿಗೆ
ಓಟು ಕೊಡುತ್ತೇವೆ ಜನಸೇವೆಗೆ
ಇಲ್ಲಿ ಇರುವವರು ಹಿಂದುಳಿದ ವರ್ಗದವರು
ನಗರಪಾಲಿಕೆ ಮತದಾರರು
ಇಲ್ಲಿ ಮಾರಾಟಕ್ಕಿವೆ ಕೋಳಿ ಕುರಿಗಳು
ಕೊಳ್ಳಲು ಬರುವವರು ಜನಪ್ರತಿನಿದಿನಗಳು
—ಗೊರೂರು ಅನಂತರಾಜು,
9449462879
ವಿಳಾಸ : ಹುಣಸಿನಕೆರೆ ಬಡಾವಣೆ
29ನೇ ವಾರ್ಡ್, 3ನೇ ಕ್ರಾಸ್,
ಹಾಸನ – 573201
