ತಮ್ಮ ತಂಡ ರಾತ್ರಿ ಹತ್ತೂವರೆಗೆ ಬೆಂಗಳೂರು ಬಿಡುವುದೆಂದೂ, ಸಕಲೇಶಪುರಕ್ಕೆ ಬೆಳಗಿನ ನಾಲ್ಕರ ಜಾವಕ್ಕೆ ತಲುಪುವುದೆಂದೂ, ಬೆಳಗಿನ ಜಾವ ಐದೂವರೆಗೆ ರೈಲ್ವೇ ಟ್ರ್ಯಾಕ್ ನಲ್ಲಿ ಚಾರಣ ಪ್ರಾರಂಭಿಸುವುದೆಂದು ತಿಳಿಸಿದರು.
ಶಿರಾಡಿಘಾಟಿಯ ಅಭೇಧ್ಯವಾದ ಅರಣ್ಯದ ನಡುವೆ ಇಂಜಿನಿಯರಿಂಗ ಅದ್ಭುತವೇ ಎನ್ನುವಂತೆ ನಿರ್ಮಾಣವಾಗಿದ್ದ ರೈಲ್ವೇ ಹಾದಿಯನ್ನು ಬ್ರಾಡ್ಗೇಜ್ ಪರಿವರ್ತನೆಗಾಗಿ ಹಾಗೂ ಸಂಬಂಧಿತ ದುರಸ್ತಿಗಾಗಿ ಎಂದು ಮೂರು ವರ್ಷಗಳಿಂದ ಸಂಚಾರ ಸೌಲಭ್ಯಗಳನ್ನು ನಿಲ್ಲಿಸಲಾಗಿತ್ತು. ಮೇ ಯಿಂದ ನವೆಂಬರ್ನವರೆವಿಗೂ ನಿರಂತರವಾಗಿ ಸುರಿಯುವ ಮುಸಲವರ್ಷಧಾರೆ ಅಲ್ಲಿನ ವಾತಾವರಣವನ್ನು, ಅಲ್ಲಿ ರೈಲುದಾರಿಯಿತ್ತೆಂಬುದನ್ನು ಗುರುತಿಗೇ ಸಿಗಲಾರದಂತೆ ಪರಿವರ್ತಿಸಿತ್ತು. ಭೋರ್ಗರೆಯುತ್ತಾ ಧುಮ್ಮಿಕ್ಕುವ ಬೃಹತ್ ಜಲಧಾರೆಗಳು, ಅಖಂಡ ಪಶ್ಚಿಮ ಘಟ್ಟಗಳ ನಡುವಿನಲ್ಲಿರುವ ಈ ಪರ್ವತ ಶ್ರೇಣ ಯು ಎಂಥಾ ಅನ್ವೇಷಕನನ್ನೂ ಅಧೀರನನ್ನಾಗಿಸುತ್ತದೆ.
ಆ ರೈಲ್ವೇ ಹಾದಿಯೊಂದಿಲ್ಲದಿದ್ದಲ್ಲಿ ನಾನೆಲ್ಲಿದ್ದೇನೆ? ಎತ್ತ ಸರಿಯುತ್ತಿದ್ದೇನೆ? ಹಾಗೂ ಹೇಗಿದ್ದೇನೆ ಎಂಬ ಭಯಾನಕ ಆತಂಕಕ್ಕೆ ತಳ್ಳಿ ಎದೆಗುಂದಿಸುತ್ತದೆ ಆ ಆದಿ-ಅಂತ್ಯವಿಲ್ಲದ ಅರಣ್ಯ. ತಲೆಯೆತ್ತಿ ಎತ್ತ ನೋಡಿದರೂ ಅಗಾಧವಾದ ಪರ್ವತಗಳು, ಆಕಾಶಕ್ಕೆ ಆಧಾರವಾಗಿ ನಿಂತಂತ ಭಾಸವಾಗುವ ಹೆಮ್ಮರಗಳು, ಸಾಧ್ಯವಾದರೆ ಆ ಹೆಮ್ಮರಗಳನ್ನು ಬಂಧಿಸೋಣ ಎಂಬ ಹವಣ ಕೆಯಲ್ಲಿ ತಬ್ಬಿ ಸುತ್ತಿಕೊಂಡಿರುವ ಸುಮಾರಾಗಿ ಲಾರಿಟೈರಿನ ಗಾತ್ರದ ಹೆಬ್ಬೀಳುಗಳು. ಪಾತಾಳದ ಕಲ್ಪನೆಗೆ ಸಾದೃಶ್ಯವಾಗಬಹುದಾದ ತಳವಿಲ್ಲದ ಕಮರಿಗಳು. ಅಲ್ಲೆಲ್ಲೋ ತಳವಿರಬಹುದೆಂಬ ಆಸೆ ಹುಟ್ಟಿಸುವ ಹರಿಯುವ ನೀರಿನ ಜಳಜಳ-ಗೊಳಗೊಳ ಸದ್ದು. ಈ ವಿಸ್ಮಯಕಾರೀ ಸನ್ನಿವೇಶದಲ್ಲಿ ಎಲ್ಲೋ ಒಮ್ಮೊಮ್ಮೆ ಮಾತ್ರ ಕೇಳಿಸುವ ಹಕ್ಕಿಗಳ ಇಂಚರ-ಚೀತ್ಕಾರಗಳು, ನಮ್ಮ ಇರುವಿಕೆಯನ್ನು ಗ್ರಹಿಸಿ ಗಾಬರಿಗೊಂಡು ಸರಕ್ಕನೇ ಪೊದೆಯೊಳಗೆ ನುಸುಳುವ ಕಾಡುಮೃಗಗಳು; ಇವನ್ನು ಬಿಟ್ಟರೆ ಗಾಳಿಯೂ ಸಹ ಎಲ್ಲಿ ಸದ್ದಾಗುವುದೋ ಎಂದು ನಿಧಾನವಾಗಿ ನಿಡುಸುಯ್ಯುತ್ತದೆ. ಈ ಎಲ್ಲಾ ಚಟುವಟಿಕೆಗಳ ನಿಗೂಢ ನೀರವತೆಯ ನಡುವೆ ನಿರಾತಂಕವಾಗಿ ನಿರಂತರ ಸದ್ದು ಮಾಡುವ ಜೀವಿಗಳೆಂದರೆ ಜೀರುಂಡೆಗಳು. ದಿನದ ನಿಗದಿತ ಸಮಯದಲ್ಲಿ ಜೈವಿಕ ಗಡಿಯಾರಕ್ಕನುಗುಣವಾಗಿ ತಂಡತಂಡಗಳಲ್ಲಿ ಇಡೀ ಕಾಡೇ ನಿರಂತರವಾಗಿ ಅನುರಣ ಸುವಂತೆ ಇವು ನಗಾರಿ ಪ್ರಾರಂಭಿಸಿದರೆ ಬಡಿತ ನಿಲ್ಲಿಸಿದ ನಂತರವೂ ಕೆಲ ಸಮಯ ಕೇಳುಗರ ತಲೆ ಧಿಮ್ಮೆನ್ನುತ್ತಿರುತ್ತದೆ.
ಆ ದಿನ ಭಾನುವಾರವಾದ್ದರಿಂದ ನಿಧಾನವಾಗಿ ತಿಂಡಿ ಮಾಡಿದರಾಯ್ತೆಂದು ಟಿ. ವಿ. ನ್ಯೂಸ್ ನೋಡ್ತಾ ಇದ್ದೆ. ಅಷ್ಟರಲ್ಲೇ ಬಾಗಿಲು ತಟ್ಟಿದ ಶಬ್ದವಾಯ್ತು. ಯಾರಿರಬಹುದು ಅಂತ ಬಾಗಿಲು ತೆರೆದರೆ ಅದೇ ಮೋಹನ. ನಮ್ಮನೆಗೆ ಪೇಪರ್ ಹಾಕಲು ಬರ್ತಿದ್ದ ಜಹೀರನಿಂದ ದಾರಿಯಲ್ಲಿಯೇ ಪೇಪರ್ ಇಸ್ಕೊಂಡು ಹಾಗೇ ಓದ್ತಾ ತಾನೇ ತಂದಿದ್ದ. “ಬಾ ಮಾರಾಯ, ಅದೇನು ಇಷ್ಟು ಬೇಗ ಬಂದ್ಯಲ್ಲ” ಅಂತ ಒಳಕರೆದು, ಬಾಗಿಲು ಹಾಕಿದೆ.
ಮೋಹನನ ತಂದೆ ನನಗೆ ಬಹಳ ಆತ್ಮೀಯರಾಗಿದ್ದ ಆನಂದೂರು ಮೇಷ್ಟುç, ರಿಟರ್ಡ್ ಟೀಚರ್ ಆಗಿದ್ದ ಅವರು ಹದಿನೈದು ದಿನಕ್ಕೊಮ್ಮೆಯಾದ್ರೂ ನನ್ನನ್ನು ಅರ್ಮನೆಗೆ ರ್ಕೊಂಡುಹೋಗಿ ಹೊಟ್ಟೆ ಬಿರಿಯುವ ಹಾಗೆ ತಿನ್ನಿಸಿ ಕಳಿಸ್ತಾ ಇದ್ರು. ಮೋಹನನನ್ನು ಕುಶಾಲನಗರದಲ್ಲಿ ಹಾಸ್ಟೆಲಿನಲ್ಲಿ ಬಿಟ್ಟು ಆಟೋಮೊಬೈಲ್ ಡಿಪ್ಲೋಮೋ ಓದಿಸ್ತಾ ಇದ್ರು.
ನಿನ್ನೆ ತಾನೇ ಹಾಸ್ಟೆಲಿನಿಂದ ಹೊರಹಾಕಿಸಿಕೊಂಡು ಬಂದಿದ್ದಾನೆ. ವಾರ್ಡನ್ ಇವರ ಮನೆಗೆ ಫೋನ್ ಮಾಡಿ ಹೇಳಿದ್ದಾರೆ, “ನಮ್ಮ ಕೈಯಲ್ಲಿ ನಿಮ್ಮ ಮಗನ್ನ ಇಟ್ಟುಕೊಳ್ಳೋದಕ್ಕೆ ಆಗೋಲ್ಲ. ಬಹಳ ಗಲಾಟೆ ಮಾಡ್ತಾನೆ. ನಮ್ಮ ಹಾಸ್ಟೆಲಿನ ಹುಡುಗನೊಬ್ಬನಿಗೆ ಸೊಂಟ ಮುರಿಯುವಂತೆ ಬಾರಿಸಿದ್ದಾನೆ. ಗುಂಪು ಕಟ್ಟಿಕೊಂಡು ಹೋಗಿ ಹಾಸ್ಟೆಲಿನ ಪಕ್ಕದ ಚೌಲ್ಟ್ರಿಯ ಮ್ಯಾನೇಜರ್ಗೆ ಕೈ ಮುರಿದಿದ್ದಾನೆ. ಸೆಕೆಂಡ್ ಷೋ ಸಿನಿಮಾ ನೋಡಲು ರ್ಲೆಗಳನ್ನೆಲ್ಲಾ ಸೇರಿಸಿಕೊಂಡು ಹೋಗಿ ತಿರುಗಿ ಬಂದು ದಾಂಧಲೆ ಮಾಡ್ತಾನೆ. ರಾತ್ರೋರಾತ್ರಿ ಹಾಸ್ಟೆಲಿನಲ್ಲಿ ಹಿಂದಿನ ಬಾಗಿಲು ಮುರಿದು ಒಳಬಂದು ಏನೂ ತಿಳಿಯದಂತೆ ರೂಂ ಸೇರಿಕೊಳ್ತಾನೆ”.
ಇದನ್ನೆಲ್ಲಾ ಮೋಹನನ ತಂದೆ ನೆನ್ನೆ ಸಂಜೆಯೇ ದಾರಿಯಲ್ಲಿ ಸಿಕ್ಕಿ, “ನೀವಾದರೂ ಹೇಳಿ, ನಮಗೆ ವಯಸ್ಸಾಗಿದೆ, ನನ್ನ ಮೇಲೆ ಡಿಪೆಂಡ್ ಆಗಿದ್ದಾರೆ ಅಂತಾ ಪೊಗರು ತೋರುತ್ತಿದ್ದಾನೆ” ಎಂದಿದ್ದರು.
ನಿನ್ನೆ ರಾತ್ರಿ ಹತ್ತೂವರೆಗೆ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ. ಅವರಮ್ಮ ಇವನಿಗೋಸ್ಕರ ಕಾಯ್ದೂ ಕಾಯ್ದೂ ರಾತ್ರಿಯ ಊಟ ಮಾಡಿ, ಲೈಟಾರಿಸಿ ಮಲಗಿದ್ದರಂತೆ. ಮಗನ ದನಿ ಕೇಳಿಸಿಕೊಂಡ ತಾಯಿ ಮಲಗಿದ್ದಲಿಂದಲೇ “ಯಾರೂ?” ಅಂದರಂತೆ. ಅಪ್ಪ ಮಲಗಿ ನಿದ್ರೆ ಮಾಡಿರಬಹುದು, ಅಮ್ಮನ ಬಳಿ ಕಾಮಿಡಿ ಮಾಡಿ ಮನೆಯೊಳಕ್ಕೆ ಸೇರಿಕೊಂಡುಬಿಡೋಣ ಎಂದುಕೊಂಡು ಈತ ಭೂತದ ಸಿನೆಮಾ ಸ್ಟೈಲ್ ನಲ್ಲಿ “ನಾನೂ!! ಹ್ಹಹಹ್ಹಹಹ್ಹಹಹಾ! ಮೋಹಿನಿ ಗಂಡಾ, ಮೋಹನಾ!!!
ಊಹೂಹ್ಹೂಹೂಹೂ”ಎಂದನಂತೆ. ಅದೆಲ್ಲಿತ್ತೋ ಸಿಟ್ಟು, ಲೈಟೂ ಹಾಕದೇ ದಿಂಬಿನ ಬದಿ ಇಟ್ಟಿದ್ದ ಟಾರ್ಚ್ನಿಂದಲೇ ಕಿಟಕಿಯಾಚೆಗೆ ಬೆಳಕು ಹರಿಸಿದ ಆನಂದೂರು ಮೇಷ್ಟ್ರ, “ದಾಟಾಚೆ, ಮನೆಯೊಳಕ್ಕೆ ಕಾಲಿಟ್ರೆ, ಕಾಲ್ಮುರೀತೀನಿ. ಅಲ್ಲೇ ಮೋಹಿನಿ ಜೊತೇನೇ ಇರು. ಈಡಿಯಟ್!” ಎಂದು ಗದರಿಸಿ ಮನೆಯೊಳಕ್ಕೆ ಸೇರಿಸಿರಲಿಲ್ಲವಂತೆ ಹಾಗಾಗಿ ನಮ್ಮನೆಗೂ ಬರಲು ಹಿಂಜರಿದು ಅವನ ಸ್ನೇಹಿತ ಸುರೇಶನ ಮನೆಯಲ್ಲಿ ಬೇಡದ ಅತಿಥಿಯಾಗಿ ಇದ್ದು, ಬೆಳಿಗ್ಗೆಯೇ ಇಲ್ಲಿಗೆ ಬಂದಿದ್ದ.
ಕಡಿದರೆ ಸರಿಸುಮಾರು ಎರಡಾಳು ಆಗಬಹುದಾದಂತೆ ಇದ್ದ ಈ ದಡಿಯನಿಗೆ ಡೌಟೇನಿತ್ತೆಂದರೆ ಹೆಂಗಸರ ಸೊಂಟದಲ್ಲಿ ಸೀರೆ ಹೇಗೆ ಗಟ್ಟಿಯಾಗಿ ನಿಲ್ಲುತ್ತೆ ಎಂಬುದು. ಇಂತಹ ದುರ್ಬುದ್ಧಿಯ ಕುತೂಹಲ ಯಾಕೆ ಬಂತೋ ಕಾಣೆ. “ಸರಿ, ಬಾ ಮಾರಾಯ ನಿಮ್ಮಪ್ಪ ನನಗೆಲ್ಲಾ ಹೇಳಿದ್ದಾರೆ, ತಿಂಗಳು ತಿಂಗಳಿಗೂ ಎರಡು ಸಾವರ್ರುಪಾಯಿ ಕಳಿಸ್ತಾರೆ. ಮುಚ್ಕೊಂಡು ಹಾಸ್ಟೇಲ್ನಲ್ಲಿದ್ದು, ಓದಲಿಕ್ಕೇನು ದಾಡಿ ನಿನಗೆ. ನಿನ್ನ ರೂಂಮೇಟನ್ನು ಯಾಕೆ ಹೊಡೆದೆ ಹೇಳು” ಎಂದೆ. “ಸರ್ ನಿಮಿಗ್ಗೊತ್ತಿಲ್ಲ, ಆ ನನ್ಮಗ ರಾತ್ರಿಯಿಡೀ ಗೊರಕೆ ಹೊಡೀತಾನೆ. ಅದೆಂಥಾ ಗೊರಕೆ ಗೊತ್ತಾ? ವಿಷಲ್ ಹೊಡಿತಾರಲ್ಲ, ಹಂಗೆ ಸಾರ್. ಬೇರೆ ರೂಂನವರಿಗೆ ಅವನ ಕಾಟ ತಡಿಯಲಿಕ್ಕಾಗದೆ ಅವನನ್ನು ನನ್ನ ರೂಮಿಗೆ ಹಾಕಿದ್ರು. ಒಂದು ವಾರದಿಂದ ಈ ನನ್ಮಗ ಗಡದ್ ನಿದ್ದೆ ಮಾಡ್ತಿದ್ರೆ, ನಾನು ಎದ್ಕೂತ್ಕೊಂಡು ಇವ್ನು ಹಾಕೋ ವಿಷಲ್ ಲೆಕ್ಕ ಹಾಕೋದು ನಡೀತಿತ್ತು. ಮೊನ್ನೆ ರಾತ್ರಿ ತಡಿಯಕ್ಕಾಗ್ಲಿಲ್ಲ. ಮಲಗಿದ್ದವನಿಗೆ ತಿಕದ ಮೇಲೆ ರ್ರಿಯಾಗಿ ಮೇಲೆ ಒದ್ದೆ ನೋಡಿ, ನನ್ಮಗಂದ್ ಸೊಂಟಾನೆ ಮರ್ದೋಗಿ ಬಿಟ್ಟಿದೆ ಸಾರ್. ಅವ್ನಿಗೆ ಈಗ ಎದ್ಕೂರೋಕೂ ಆಗಿಲ್ವಂತೆ ಸಾರ್”.
“ಸರೀ ಮಾರಾಯ, ಆ ಚೌಲ್ಟ್ರಿ ಮೇನೇಜರ್ಗೆ ಯಾಕೆ ಹೊಡದ್ರಿ. ಅವನ ಕೈ ಮುರಿದಿದ್ದೀರಂತೆ?” “ಅದ್ ಬಿಡೀ ಸರ್. ಆ ವಿಷ್ಯಾ ಮಾತ್ರ ಕೇಳ್ಬೇಡಿ. ಅದನ್ನ ಹೇಳೋಕೆ ನನಗೆ ಒಂಥರಾ ಆಗುತ್ತೆ”. “ಹೇಳು ಮಾರಾಯ, ನನಗೂ ಗೊತ್ತಾಗ್ಲಿ, ಯರ್ಯಾರು ಯಾವ್ಯಾವ ಕಾರಣಕ್ಕೆ ಕೈ ಮುರುಸ್ಕೋತಾರೆ ಅಂತ” ಅಂದೆ. ಮೋಹನ ಹಿಂಜರಿಯುತ್ತಲೇ ಶುರು ಮಾಡಿದ.
“ನಮ್ಮ ಹಾಸ್ಟೇಲಿನ ಪಕ್ಕದ ಚೌಲ್ಟ್ರಿಯಲ್ಲಿ ಹೆಚ್ಚಾಗಿ ಕೂರ್ಗಿಗಳ ಮದುವೇನೇ ಆಗೋದು, ಯಾವಾಗ್ಲೂ ನಾನ್ವೆಜ್ ಅಡಿಗೇನೆ ಮಾಡ್ತಾರೆ ಅಂತ ನಾವ್ ಒಂದ್ಹತ್ತು ಜನ ಐಡಿಯಾ ಮಾಡ್ಕೊಂಡು, ಮದುವೆ ಊಟನ ಅಟೆಂಡ್ ಮಾಡ್ತಿದ್ವಿ ಸಾರ್”. “ಎಲಾ ಬಡ್ಡಿ ಮಕ್ಳಾ ಊಟಾನ ಅಟೆಂಡ್ ಬೇರೆ ಮಾಡ್ತಿದ್ರಾ!!?”ಎಂದು ಮನಸ್ಸಿನಲ್ಲೇ ಅಂದ್ಕೊಂಡು “ಬಾ ಇಲ್ಲಿ ಚಪಾತಿಗೆ ಹಿಟ್ಟು ಕಲಸಿದ್ದೇನೆ, ಒಂದ್ಹತ್ತು ಚಪಾತಿ ಅರೆದುಕೊಡು, ನಾನು ಬೇಯಿಸ್ತೀನಿ, ಹಾಗೇ ಹೇಳ್ತಿರು ನಿನ್ನ ಅಡ್ವೆಂಚರ್ನ” ಅಂದೆ.
“ದಿನಾ ಬಿಟ್ಟು ದಿನ ಮದುವೆ ನಡೀತಿತ್ತಲ್ಲ ನಾವೆಲ್ಲಾ ಟ್ರಿಮ್ಮಾಗಿ ಡ್ರೆಸ್ ಮಾಡ್ಕೊಂಡು ರೆಡಿಯಾಗ್ತಿದ್ವಿ. ನಮ್ಮೊಲ್ಲೊಬ್ಬ ಎಲ್ಲರಿಗಿಂತ ಮುಂಚೆಯೇ ಹೋಗಿ ಚೌಲ್ಟಿಯ ಮುಂದೆ ನಿಂತುಕೊಂಡು ನಮ್ಮವರನ್ನೆಲ್ಲಾ ನೆಂಟರನ್ನ ಇನ್ ವೆಟ ಮಾಡುವಂತೆ `ಈಗ ಬಂದ್ರಾ? ಚೆನ್ನಾಗಿದ್ದೀರಾ? ಯಾಕೆ ಲೇಟಾಯ್ತಲ್ಲ? ಬನ್ನಿ ಬನ್ನಿ ಸೀದಾ ಊಟಕ್ಕೆ ನಡೀರಿ, ಮತ್ತೆ ರಷ್ ಆಗುತ್ತೆ’ ಅಂತ ಕರೆದುಕೊಂಡು ಹೋಗಿ ಊಟಕ್ಕೆ ಕೂರಿಸ್ತಿದ್ದ. ಗುಂಡು-ತುಂಡನ್ನು ರ್ರೀ ಜಡಿದು ಬರ್ತಿದ್ದೆವು. ಬೇರೆ ಬೇರೆಯವರ ಮದುವೆಯಾದ್ದರಿಂದ ಯಾರಿಗೂ ಗೊತ್ತಾಗ್ತಿರಲಿಲ್ಲ. ಈ ನನ್ಮಗ ಆ ಚೌಲ್ಟಿçà ಮೇನೇಜರ್ ಅಬ್ಸರ್ವ್ ಮಾಡಿಬಿಟ್ಟಿದ್ದಾನೆ. ಒಂದಿನ ಎಲ್ಲರೆದುರಿಗೇ ನಮ್ಮನ್ನೆಲ್ಲಾ ನಿಲ್ಲಿಸಿ ಕೇಳಿಬಿಟ್ಟಿದ್ದಾನೆ ನೋಡಿ. ಸರಿಯಪ್ಪಾ ಎಂದು ವಾಪಸ್ ಬಂದೆವು.
ಎಲ್ಲಾ ಮೀಟಿಂಗ್ ಸೇರಿ ಅವನಿಗೆ ಬುಧ್ಧಿ ಕಲಿಸಲು ಸ್ಕೆಚ್ ಹಾಕಿದ್ವಿ. ಸಾಯಂಕಾಲ ಏಳು ಗಂಟೆಗೆಂದು ನಿಗದಿಯಾಗಿದ್ದ ಪ್ರೋಗ್ರಾಂ ಅನ್ನು ನನ್ನ ಇನ್ನೊಬ್ಬ ರೂಂಮೇಟ್ ಸದಾಶಿವ ಐದು ಗಂಟೆಗೇ ಜನರೇಟರ್ ರೂಂನಲ್ಲಿ ಎಕ್ಸ್ಕ್ಯೂಟ್ ಮಾಡಿಬಿಟ್ಟಿದ್ದಾನೆ. ಆದರೆ ನಾನೇ ಕೈಮುರಿದದ್ದೆಂದು ಎಲ್ಲಾ ಕಡೆ ಪ್ರಚಾರ ಆಗಿದೆ. ಹೇಳಿ ಸಾರ್ ಇದರಲ್ಲಿ ನನ್ನದೇನಾದ್ರೂ ತಪ್ಪಿದೆಯಾ?” ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡ ಬಡ್ಡೀಮಗ.
ಇವನೆಂಥಾ ಖದೀಮ ಅಂತ ನನಗೊತ್ತಿತ್ತು. ಹಾಸ್ಟೆಲಿನಲ್ಲಿ ಬ್ರೆಡ್ಸ್ಲೆöÊಸಿಗೆ ಅಯೋಡೆಕ್ಸ್ ಅನ್ನು ಜಾಮ್ನಂತೆ ಹಾಕಿಕೊಂಡು ತಿಂದವನಿವನು. ಆದರೀಗ ಮನೆಯಿಂದ ಬೇರೆ ಹೊರಹಾಕಿಸಿಕೊಂಡಿದ್ದಾನೆ, ಹಾಸ್ಟೆಲಿನವರೂ ಇವನನ್ನು ರೌಡಿ ಲಿಸ್ಟಿಗೆ ಸೇರಿಸಿದ್ದಾರೆ. ಇನ್ನು ಕಾಲೇಜಿಗೆ ಸೇರಿಸಿಕೊಳ್ಳುವ ಮಾತು ದೂರವೇ ಉಳಿಯಿತು. ಇವನ ಕಾಲೇಜಿನಲ್ಲಿ ಇವನಾಡಿರುವ ಸುಂದರಕಾಂಡವನ್ನು ಇನ್ನೆಂದಾದರೂ ಪ್ರಸ್ತಾಪಿಸೋಣ.
ಈಗ ನನ್ನ ಮನೆಗೆ ಸೇರಿಕೊಂಡಿದ್ದಾನೆ, ಸ್ನೇಹಿತ ಬೇರೆ, ಈ ಸಮಯದಲ್ಲಿ ಸಹಾಯ ಮಾಡಿ ಬುದ್ಧಿ ಹೇಳದಿದ್ದರೆ ಇವನೊಬ್ಬ ಕೇಡಿಯಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿವೆ ಎಂದುಕೊಂಡು “ಹೇಗಿದ್ದರೂ ನಾಡಿದ್ದಿನಿಂದ ದಸರಾ ರಜೆ ಅಲ್ವಾ, ನಡೀ ನಮ್ಮೂರಿಗೆ ಹೋಗೋಣ, ನನಗೊಂದು ಟ್ರಕ್ಕಿಂಗಿಗೆ ಹೋಗ್ಲಿಕ್ಕಿದೆ. ಬಾ ನಂಜೊತೆ, ಹದಿನೈದು ದಿನ ಬಿಟ್ಟು ಬರೋಣ, ಬಂದ ಮೇಲೆ ನಾನೂ ನಿಮ್ಮ ಕಾಲೇಜಿಗೆ ಬಂದು ಪ್ರಿನ್ಸಿಪಾಲ್ ಬಳಿ ಮಾತನಾಡಿ ಏನಾದ್ರೂ ವ್ಯವಸ್ಥೆ ಮಾಡ್ತಿನಿ” ಎಂದೆ.
ಮುಂದುವರೆಯುವುದು….

