ಇಂದಿನ ಚೀನಾ ಸರ್ಕಾರ ಕಟ್ಟಾ ಕಮ್ಯುನಿಸ್ಟ ಸರ್ಕಾರ ಅಲ್ಲ. ಸಾಕಷ್ಟು ಸುಧಾರಣೆಯನ್ನು ಕಂಡು ಲಿಬರಲ್ ಕಮ್ಯುನಿಸ್ಟ ಸರ್ಕಾರ ಆಗಿದೆ. ಈ ಸುಧಾರಣೆಯ ನಂತರ ನೋಡು ನೋಡುತ್ತಿದ್ದಂತೆ ಅತಿ ವೇಗವಾಗಿ ಆ ದೇಶ ಬೆಳೆಯುತ್ತಿದೆ. ಇಲ್ಲಿಯ ಸರ್ಕಾರ ಲಿಬರಲ್ ಆಗಿದ್ದರೂ ಪ್ರಜಾಪ್ರಭುತ್ವ ಇಲ್ಲ. ಇನ್ನೂ ಇಲ್ಲಿಯ ಪ್ರಜೆಗಳು ಸರ್ಕಾರದ ಕಪಿ ಮುಷ್ಟಿಯಲ್ಲೇ ಇದ್ದಾರೆ. ಚೀನಾ ಅಹಂಕಾರವನ್ನು ತಗ್ಗಿಸಬೇಕಾದರೆ ಯಾವ ದೇಶವು ಸಹ ಅಲ್ಲಿಯ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು. ಇದು ಸಾಧ್ಯವಿಲ್ಲ, ಕಾರಣ ಅಲ್ಲಿಯ ವಸ್ತು ಉತ್ಪಾದನೆಯ ವೆಚ್ಚ ಬೇರೆ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ. ಅಲ್ಲಿಯ ಉದ್ಯಮ ನೀತಿ ಮತ್ತು ತಾಂತ್ರಿಕತೆ ಬೇರೆ ದೇಶಗಳನ್ನು ಮೀರಿಸಿವೆ. ಆದುದರಿಂದ ಅಲ್ಲಿಯ ಉತ್ಪನ್ನಗಳು ಕಡಿಮೆ ಬೆಲೆಗೆ ಸಿಗುತ್ತವೆ.



ವಿಚಿತ್ರ ಎಂದರೆ ಅಲ್ಲಿಯ ನಾಗರಿಕರು ಭೂಮಿಯನ್ನು ಕೊಂಡುಕೊಳ್ಳುವಂತೆ ಇಲ್ಲ. ಚೀನಾದ ಸಮಸ್ತ ಜಾಗವೂ ಸರ್ಕಾರದ್ದೆ. Independent ಮನೆಗಳನ್ನು 70 ವರ್ಷ ಮತ್ತು ಕಮರ್ಷಿಯಲ್ property ಯನ್ನು 50 ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆಯೇ ತೆಗೆದುಕೊಳ್ಳಬೇಕು. ಸಮಸ್ತ ಪಟ್ಟಣ ಮತ್ತು ನಗರಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳನ್ನು ಸರ್ಕಾರ ಮೊದಲೇ ನಿರ್ಮಾಣ ಮಾಡಿಬಿಟ್ಟಿದ್ದಾರೆ ಮತ್ತು ಅದಕ್ಕೆ ತಕ್ಕಂತೆ ಮೂಲ ಸೌಕರ್ಯ ಒದಗಿಸಿದ್ದಾರೆ. ನಾಗರಿಕರು ಆಸ್ತಿಯನ್ನು ಹೊಂದ ಬೇಕೆಂದರೆ ಅವರು ಕಟ್ಟಿಸಿದ apartments ಕೊಳ್ಳಬೇಕು. ಈ ಒಡೆತನದ ಆಸ್ತಿಯಲ್ಲಿ ಅಲ್ಲಿಯವರು ಜೀವಿಸಬಹುದು, ಬಾಡಿಗೆ ಕೊಡಬಹುದು ಮತ್ತು ಮಾರಟ ಮಾಡಬಹುದು. ಯಾರಾದರೂ ಭೂಮಿಯನ್ನು purchase ಮಾಡಬೇಕಾದರೆ 50 ಕಿಲೋಮೀಟರ್ಸ ಆಚೆ ಇರುವ ಭೂಮಿಯನ್ನು ವ್ಯವಸಾಯಕ್ಕೆ ಮಾತ್ರ ಕೊಳ್ಳಬಹುದು. ಈ ಭೂಮಿಯನ್ನು ಮಾರುವಹಾಗಿಲ್ಲ ಆದರೆ ಕೊಂಡಾತನ ಮಕ್ಕಳು ಆ ಆಸ್ತಿಯ ವಾರಸುದಾರರು ಆಗಬಹುದು. ಊರು ಬೆಳದಂತೆ ಸರ್ಕಾರ ಈ ಭೂಮಿಯನ್ನು ಸಹ ವಾಪಸ್ ಪಡೆಯಬಹುದು.


ನಾವು ಪ್ರವಾಸ ಕೈಗೊಂಡಾಗ ನಮಗೆ ನಮ್ಮ ಗೀಳು “Shoping”. ಪ್ರವಾಸಿಗರು ಬೇಟಿ ಕೊಟ್ಟ ಸ್ಥಳದ ಸ್ಮರಣಾರ್ಥ ವಸ್ತು ಮತ್ತು ಅಲ್ಲಿಯ ವಿಶೇಷ ವಸ್ತುಗಳನ್ನು ಖರೀದಿಸಿದರೆ OK. ಕೆಲವರಂತು ನೋಡಿದ್ದೆಲ್ಲಾ ಕೊಳ್ಳುವರು. ಅವರು ಕೊಂಡರೆಂದು ಇನ್ನೊಬ್ಬರು ಕೊಳ್ಳುವುದು ಒಂದು ಅಂಟು ಕಾಯಿಲೆ ಇದ್ದ ಹಾಗೆ. ಶಾಂಘೈ ನಗರದ A P Plaza (Xinyang) ಫೇಕ್ ಮಾರ್ಕೆಟ್ಗೆ ತುಂಬಾ ಫೇಮಸ್. ತುಂಬಾ attractive ಅಂದರೆ ಚೀಪ್ smart ವಾಚ್, ಸಣ್ಣ ಮಕ್ಕಳ ಕ್ಯಾಮರಾ, ಸಣ್ಣ handy ಫ್ಯಾನ್, power banks, ಕ್ಯಾಮರಾ cooling ಗ್ಲಾಸ್, ಹೀಗೆ ಹಲವಾರು. ಸಮಯ ಇದ್ದರೆ ಖರೀದಿಸಬಹುದು ಆದರೆ ನಮಗೆ ಸಮಯ ಕೊಡುವುದೇ ಎರಡು ಗಂಟೆ. ಅಲ್ಲಿಯ ಒಂದು ಯುವಾನ್ ( ಚೀನಾ currency) ನಮ್ಮ ಹದಿನಾಲ್ಕು ರುಪಾಯಿಗೆ ಸಮ. ನಾವು ಹಿಂದೂ (ಭಾರತದವರು) ಗಳು ಎಂದಾಕ್ಷಣ ಹತ್ತು ಯುವಾನ್ ಬೆಲೆ ಬಾಳುವ ಪದಾರ್ಥವನ್ನು ಐವತ್ತು ಯುವಾನ್ಗೆ ಏರಿಸುತ್ತಾರೆ. ಕೊನೆಗೆ ಹದಿನೈದು ಯವಾನ್ಗೆ ಕೊಡುತ್ತಾರೆ. ವ್ಯಾಪರಸ್ತ ಕಮ್ಮಿಗೆ ಕೊಟ್ಟಾ ಎನ್ನುವ ಖುಷಿ ಆದರೆ ನಮಗೆ ಐದು ಯುವಾನ್ ನಷ್ಟ (ಭಾರತದಲ್ಲೂ ಇದೇ ಗೋಳು). ಚೌಕಾಸಿ ಎಂಬುದು ನಮ್ಮ ರಕ್ತದಲ್ಲೇ ಬಂದಿದೆ ಏನೋ ತಿಳಿಯದು. ಇಲ್ಲಿಯ ವ್ಯಾಪಾರ ಬಲು ಮೋಸ. ತಿಳಿದಿದ್ದರೆ (ಮೊದಲೇ research ಮಾಡಿರಬೇಕು) ವ್ಯಾಪಾರ ಮಾಡಿ ಒಳ್ಳೆಯ ಪದಾರ್ಥಗಳನ್ನು ಕೊಳ್ಳಬಹುದು. ಕೊನೆಯದಾಗಿ ಪ್ರವಾಸ ಬಂದವರಲ್ಲೇ ಪೈಪೋಟಿ “ನಾ ಕಮ್ಮಿಗೆ ಕೊಂಡೆ, ನೀವು ಹೆಚ್ಚಿಗೆ ಕೊಟ್ಟರಿ”.


ಆ ದೇಶದ ನಾಗರಿಕರಿಗೆ ಸಂಖ್ಯೆ “9” ಅದೃಷ್ಟದ ನಂಬರ್. ಹಲವಾರು ಚೀನಾ ವಾಸ್ತುಶಿಲ್ಪ ವಿನ್ಯಾಸ ಇರುವ ರಾಜವಂಶಸ್ತರ ಅರಮನೆಗಳಲ್ಲಿ ಒಂಬತ್ತು ಡ್ರ್ಯಾಗನ್ಗಳನ್ನು ಸ್ಥಾಪಿಸಿರುತ್ತಾರೆ. ಹಾಗೆಯೇ ಅಲ್ಲಿಯ ವ್ಯಾಪಾರ ಅಂಗಡಿಗಳಲ್ಲಿ ಪದಾರ್ಥದ ಬೆಲೆಗಳನ್ನು “9, 109, 999” ಯುವಾನ್ ಇಟ್ಟಿರುತ್ತಾರೆ. ಈ ಹುಚ್ಚು ಭಾರತಕ್ಕೂ ಬಂದು ಬಿಟ್ಟಿದೆ. ಈಗಿನ ಯುವಕರು ಸೈಟ್ ಖರೀದಿಸಬೇಕೆಂದರೆ ಸಂಖ್ಯೆ “9” ರ ಸೈಟನ್ನು ಕೊಳ್ಳುತ್ತಾರೆ. ಹಲವು ಕಡೆ ನಮ್ಮನ್ನು ಶಾಂಪಿಗ್ ಕರೆದೊಯ್ದರೂ ಎಲ್ಲಾ ಬ್ರಾಂಡೆಡ್ ಮಳಿಗೆಗಳೇ. ಅಬ್ಬಬ್ಬಾ ಅಂದರೆ ಐದು ಅಥವಾ ಹತ್ತು percent ಟ್ಯಾಗ್ ಮೌಲ್ಯದಲ್ಲಿ ಕಮ್ಮಿ ಮಾಡುತ್ತಾರೆ. ಇಲ್ಲಿ ಹ್ಯಾಂಡ್ ಮೇಡ್ ಸಿಲ್ವರ್ ಸರಗಳ ವಿನ್ಯಾಸ ಅತಿ ಅದ್ಭುತವಾಗಿ ಇರುತ್ತವೆ. ಇದಕ್ಕೆ ತಕ್ಕಂತೆ ಅಲ್ಲಿ ಸಿಗುವ ಜೇಡ್, ಅಗಟೇ, ಅಕ್ವಮರೈನ್, ಹೀಗೆ ಹಲವಾರು ಅಮೂಲ್ಯವಾದ ಕಲ್ಲುಗಳ ಪೆಂಡೆಂಟ್ ಸಿಗುತ್ತವೆ.

ಚೀನಾದ ಕಾರ್ಯಾಂಗ ರಾಜಧಾನಿ ಬೀಜಿಂಗ್. ಅಚ್ಚುಕಟ್ಟಾದ ನಗರ. “Summer Palace” ಇಲ್ಲಿಯ ಪ್ರಸಿದ್ದ ಸಾಂಪ್ರದಾಯಿಕ ಸ್ಥಳ. ನಮ್ಮ ಮೈಸೂರಿನ ಅರಮನೆ ಇದ್ದಹಾಗೆ. ಹದಿನೋಳನೇ ಶತಮಾನದಲ್ಲಿ ಕ್ವಿಂಗ್ ರಾಜವಂಶದ ರಾಜ “ಕ್ವಿಯಾನ್ಲಾಂಗ್” ಸುಮಾರು ಹದಿನೈದು ವರ್ಷಗಳ ಕಾಲ ಕಟ್ಟಿಸಿದಂತಾ ಅರಮನೆ. ಈ ಸ್ಥಳದ ಸುತ್ತಳತೆ ಸುಮಾರು ಮೂರರಿಂದ ಐದು ಚದರ ಮೈಲಿಗಳ ವಿಸ್ತಾರ ಹೊಂದಿದೆ. ಇದರ ಮುಕ್ಕಾಲು ಭಾಗ ಕೃತಕ ಸರೋವರವಿದೆ. ಇನ್ನು ಕಾಲು ಭಾಗ ಕೃತಕವಾದ ಗುಡ್ಡವನ್ನು ಮಾಡಲಾಗಿದೆ. ಗುಡ್ಡದ ಮೇಲೆ ಬುದ್ಧನ ವಿಹಾರವಿದೆ. ಈ ಅರಮನೆಯನ್ನು feng shui ವಾಸ್ತುಶಿಲ್ಪ ಪ್ರಕಾರ ಕಟ್ಟಲಾಗಿದೆ. ಸರೋವರ “ಶಾಂತಿ” ಮತ್ತು ಗುಡ್ಡ “ಶಕ್ತಿ” ಸಂಕೇತಗಳು ಎಂದು ಅಲ್ಲಿಯವರು ನಂಬುತ್ತಾರೆ.


ಈ ಅರಮನೆಯನ್ನು ಆಂಗ್ಲೋ ಫ್ರೆಂಚ್ ಸಿಪಾಯಿಗಳು ಹದಿನೆಂಟನೇ ಶತಮಾನದಲ್ಲಿ ದ್ವಂಸ ಮಾಡಿದರು. ಆದರೇ ಹದಿನೆಂಟನೇ ಶತಮಾನ ಕೊನೆಯಲ್ಲಿ ಅಲ್ಲಿಯ ಸಾಮ್ರಾಜ್ಞಿ “ಡವುಜೇರ್ ಸಿಕ್ಸೀ” ತನ್ನ ವಾಸಕ್ಕೆಂದು ಪುನರ್ ನಿರ್ಮಾಣ ಮಾಡಿದಳು. ವಿಪರ್ಯಾಸ ಎಂದರೆ ಆ ಸಮಯದಲ್ಲಿ ನೌಕಾ ನೆಲೆಗೆ ಇಟ್ಟಂತಾ ಹಣದಲ್ಲಿ ಈ ಅರಮನೆಯನ್ನು ಕಟ್ಟಿಸಿದಳಂತೆ. ತರುವಾಯ ಸಾವಿರದ ಒಂಬಯ್ಯನೂರು (1900) ನೇ ಇಸವಿಯಲ್ಲಿ ಎಂಟು ದೇಶಗಳ ಸಮ್ಮಿಶ್ರ ಸೈನ್ಯದಿಂದ ಸೋತು ಈ ಅರಮನೆಯನ್ನು ಹಾಳು ಮಾಡಿ ಕೊಳ್ಳೆ ಹೊಡೆದರು. ಮತ್ತೆ ಎರಡು ವರ್ಷದ ನಂತರ ಇದೇ ಎಂಪ್ರೆಸ್ ಸಿಕ್ಸೀ ಮರು ನಿರ್ಮಾಣ ಮಾಡಿದಳಂತೆ.


ಈ ಸರೋವರ ಮೂರರಿಂದ ಆರು ಅಡಿ ನೀರಿದ್ದು “ಮಾರ್ಬಲ್ ಬೋಟ್ (ಸಾಂಪ್ರದಾಯಿಕ ಮೋಟಾರ್ರ್ಬೋಟ್)” ಮೂಲಕ ನಾವು ಕೃತಕ ಗುಡ್ಡದ ದಡವನ್ನು ಸೇರಿದೆವು. ಸಮ್ಮರ್ ಪ್ಯಾಲೇಸ್ಗೆ ಹೋಗುವ ಮುನ್ನ ಸುಮಾರು ಮುಕ್ಕಾಲು ಕಿಲೋಮೀಟರ್ಸ ಕಾರಿಡಾರ್ ದಾಟಿದೆವು. ನೂರು ವರ್ಷಗಳ ಹಳೆಯದಾದ ನೈಸರ್ಗಿಕ ಬಣ್ಣವನ್ನು ಉಪಯೋಗಿಸಿ ಅಲ್ಲಿಯ ಮರದ ಬೀಮ್ಗಳ ಮೇಲೆ ಚೀನಿಯರ ಪುರಾಣ, ಸಂಸ್ಕೃತಿ, ಪರಂಪರೆ ಹೀಗೆ ಸಾವಿರಾರು ಚಿತ್ರಗಳನ್ನು ಬಿಡಿಸಲಾಗಿದೆ. ಈ ಸ್ಥಳವನ್ನು ಯುನೆಸ್ಕೊ ಇಂದ ಸಂರಕ್ಷಿಸಲ್ಪಟ್ಟಿದೆ.
ಮುಂದುವರಿಯುವುದು…

– ಡಾ|| ನಾಗೇಶ್ ಎಂ.ಎನ್.
