ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅಂದ್ಕೊಂಡು ಮೋಹನ ನನ್ನೊಡನೆ ಮೂಡಿಗೆರೆಗೆ ಬಸ್ ಹತ್ತಿದ.
ಬೆಂಗಳೂರಿನ ರಾಜಾಜಿನಗರದ ಎನ್.ವೈ.ಎ.ಸಿ.ಯವರು ರಾಜ್ಯಮಟ್ಟದ ಚಾರಣವನ್ನು ಶಿರಾಡಿಘಾಟಿಯ ರೈಲ್ವೆ ಟ್ರ್ಯಾಕ್ನಲ್ಲಿ ಹಮ್ಮಿಕೊಂಡಿರುವುದಾಗಿಯೂ, ಆಸಕ್ತರು ಸಂಪರ್ಕಿಸಬೇಕಾಗಿಯೂ ಪ್ರಜಾವಾಣಿಯಲ್ಲಿ ಜಾಹೀರಾತು ನೀಡಿದ್ದರು. ಉದ್ಯೋಗದ ಏಕತಾನತೆಯಿಂದ ಬೇಸತ್ತಿದ್ದ ನಾನು ಅವರನ್ನು ಸಂಪರ್ಕಿಸಿ ವಿವರಗಳನ್ನು ತಿಳಿದುಕೊಂಡು ಅವರೊಡನೆ ಚಾರಣಕ್ಕೆ ಹೊರಟಿದ್ದೆ. ಸರಿ, ಈ ಮೋಹನನ ಚರ್ಬಿ ಕರಗಿಸೋಣ ಎಂದುಕೊಂಡು ಅವನನ್ನೂ ನನ್ನೊಡನೆ ಕರೆದುಕೊಂಡು ಬಂದಿದ್ದೆ.
ಸೋಮವಾರ ಸಂಜೆ ಮೂಡಿಗೆರೆ ತಲುಪಿದೆವು. ಗುರುವಾರ ಬೆಳಗ್ಗಿನ ಜಾವವೇ ಸಕಲೇಶಪುರದಲ್ಲಿ ಎನ್.ವೈ.ಎ.ಸಿ.ಯವರ ತಂಡವನ್ನು ನಾವು ಸೇರಿಕೊಳ್ಳಬೇಕಿತ್ತು. ಮಂಗಳವಾರ ಬೆಳಗ್ಗಿನಿಂದಲೇ ಈ ಮೋಹನನಿಗೆ ಶೀತ-ಜ್ವರ ಆರಂಭವಾಗಬೇಕೇ? ನಿಮಿಷಕ್ಕೆ ಸರಾಸರಿ ಹದಿನೈದು ಸೀನುಗಳನ್ನು ನಿರಂತರವಾಗಿ ಹೊರಹಾಕತೊಡಗಿದ. ನೀರು ಬದಲಾದ್ದರಿಂದಲೋ, ಮನೆಯಿಂದ ಹೊರಬಂದ ಟೆನ್ಷನ್ನಿಂದಲೋ, ವಾತಾವರಣ ಬದಲಾದ್ದರಿಂದಲೋ ಶೀತ-ಜ್ವರ ನಿಯಂತ್ರಣಕ್ಕೆ ಬಾರದಾಯಿತು.
ಬುಧವಾರ ಈತನ ಶೀತ-ಜ್ವರ ಸಾಕಷ್ಟು ಕಡಿಮೆಯಾಗಿತ್ತು. ಆದರೆ ಸುಸ್ತು ಹಾಗೆಯೇ ಇದ್ದದ್ದರಿಂದ ಅವನನ್ನು ಚಾರಣಕ್ಕೆ ಕರೆದೊಯ್ಯುವಂತಿರಲಿಲ್ಲ.
ನನಗೂ ಇವನನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದರೆ ರೈಲ್ವೆ ಟ್ರ್ಯಾಕ್ನಲ್ಲಿ ಟ್ರೆಕ್ಕಿಂಗ್ ಮಾಡಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಸಂಜೆಯ ವೇಳೆಗೆ ನನ್ನೊಡನೆ ಷಟಲ್ ಆಡುವ ಮಟ್ಟಿಗೆ ಚೇತರಿಸಿಕೊಂಡ ಮೋಹನ ತಾನೂ ಟ್ರೆಕ್ಕಿಂಗ್ಗೆ ಬರಲು ಸಿದ್ಧನಾದ. ಮೂರು ದಿನಗಳ ಟ್ರೆಕ್ಕಿಂಗ್ಗೆ ಹೀಗೆ ಚೇತರಿಸಿಕೊಳ್ಳುತ್ತಿರುವ ಅಭ್ಯರ್ಥಿಯನ್ನು ಕರೆದುಕೊಂಡು ಹೋಗುವುದು ಘಟ್ಟಕ್ಕೆ ಹೋಗುವವರಿಗೆ ಕೊಡಲಿ ಸಿಕ್ಕಿಸಿದಂತಾಗುತ್ತದೆ ಎಂದುಕೊಂಡು, ಅವನನ್ನು ವಿಶ್ರಾಂತಿ ಪಡೆಯುವಂತೆ ಹೇಳಿದೆ. ಹಿಂದಿನ ದಿನವೇ ಸಕಲೇಶಪುರಕ್ಕೆ ಹೋಗಿ ಉಳಿದುಕೊಳ್ಳಬೇಕಾಗಿದ್ದರಿಂದ, ಬೆಳಿಗ್ಗೆಯಿಂದಲೇ ಮಾಡಿಟ್ಟುಕೊಂಡಿದ್ದ ಸಿದ್ಧತೆಗಳೊಂದಿಗೆ ಗೆಳೆಯ ನಾಸೀರ್ಗೆ ಹೊರಡಲು ಹೇಳಿ ಕಳಿಸಿದೆ.
ಗೆಳೆಯ ನಾಸೀರ್ ಹಾಗೂ ನಾನು ಈ ಚಾರಣ ತಂಡವನ್ನು ಸಕಲೇಶಪುರದಲ್ಲಿ ಸೇರಿಕೊಂಡು ಮುಂದೆ ಹೋಗುವುದೆಂದು ನಿರ್ಧಾರವಾಯಿತು. ಬೆಳಿಗ್ಗೆ ಮೂಡಿಗೆರೆಯಿಂದ ಹೊರಟು ಬೆಂಗಳೂರಿನಿಂದ ಬರುವ ಎನ್.ವೈ.ಎ.ಸಿ. ತಂಡವನ್ನು ಸಮಯಕ್ಕೆ ಸರಿಯಾಗಿ ಸೇರುವುದು ಸಾಧ್ಯವಿಲ್ಲವೆಂದು ಅರಿತು, ಹಿಂದಿನ ದಿನವೇ ಸಕಲೇಶಪುರದ ಯಾವುದಾದರೂ ವಸತಿ ಗೃಹದಲ್ಲಿ ತಂಗಿ, ಬೆಳಿಗ್ಗೆ ಅವರೊಡನೆ ಸೇರುವುದೆಂದು ಯೋಜಿಸಿದೆವು.
ಮೂರು ದಿನಗಳ ಕಾರ್ಯಕ್ರಮವಾದ್ದರಿಂದ ಕನಿಷ್ಠ ಎರಡು ರಾತ್ರಿ ಕಾಡಿನಲ್ಲೇ ಕಳೆಯಬೇಕಾಗಬಹುದೆಂದು ಬೇಕಾದ ವಸ್ತುಗಳ ಜೋಡಣೆ ಆರಂಭವಾಯಿತು. ಕತ್ತಿ, ಟಾರ್ಚ್, ಎರಡು ಜೀನ್ಸ್ ಪ್ಯಾಂಟ್, ಎರಡು ಟಿ-ಶರ್ಟ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ನೀರಿನ ಬಾಟಲಿ ಇತ್ಯಾದಿಗಳನ್ನು ಬ್ಯಾಗಿಗೆ ತುಂಬಿಕೊಂಡೆ.
ಹಿಂದಿನ ದಿನ ಸಂಜೆ ಐದು ಗಂಟೆಗೆ ನಾಸೀರ್ನನ್ನು ಕಾಯುತ್ತಾ ಕುಳಿತರೆ ಆಸಾಮಿ ಪತ್ತೆಯೇ ಇಲ್ಲ! ಅವನ ಮನೆಗೆ ಹೋದರೆ, ಅವನು ಬೆಳಗ್ಗೆಯೇ ಉಳ್ಳಾಲದಲ್ಲಿರುವ ಅವನ ಅಕ್ಕನ ಮನೆಗೆ ಹೋಗಿದ್ದಾನೆ ಎಂದರು. ಅಯೋಗ್ಯನ ಮೇಲೆ ಅಸಾಧ್ಯ ಸಿಟ್ಟು ಬಂತು. ನಾನಂತೂ ಹೊರಟಾಗಿದೆ; ಇನ್ನು ನಿಧಾನಿಸುವ ಮಾತೇ ಇಲ್ಲ. ಆತ ನನಗೊಂದು ಮಾತಾದರೂ ಹೇಳಿ ಹೋಗಬಹುದಿತ್ತಲ್ಲ!
ಸಂಜೆಯ ಕೊನೆಯ ಬಸ್ ಆರೂವರೆಗೆ. ಭಾರವಾಗಿದ್ದ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಒಂದೇ ಉಸಿರಿಗೆ ಬಸ್ಸ್ಟಾಪ್ಗೆ ಓಡಿದೆ. ಬಸ್ ಕಂಡಕ್ಟರ್ ಟಿ.ಸಿ. ಬಳಿ ಎಂಟ್ರಿ ಹಾಕಿಸಲು ಹೋಗಿದ್ದರೆ, ಡ್ರೈವರ್ ಟೈರ್ ಮೇಲೆ ನಿಂತುಕೊಂಡು ಕಿಟಕಿಯೊಳಗೆ ತಲೆ ತೂರಿಸಿ ಕಿಕ್ಕಿರಿದು ತುಂಬಿದ್ದ ಜನರನ್ನು ಗದರಿಸುತ್ತಾ, ಜಬರಿಸಿ ಹಿಂದೆ-ಮುಂದೆ ಒತ್ತಿಸಿ, ಕೂರಿಸಿ, ನಿಲ್ಲಿಸಿ ಹೈರಾಣಾಗುತ್ತಿದ್ದ.
ವಿಪರೀತ ರಷ್ ಆಗಿದ್ದ ಬಸ್ಗೆ ಹತ್ತುವುದು ಹೇಗಪ್ಪಾ ಎಂದು ಯೋಚಿಸುತ್ತಿದ್ದಾಗ, ಆ ದಿನ ಶುಕ್ರವಾರವೆಂಬುದು ನೆನಪಿಗೆ ಬಂತು. ಅವತ್ತು ಮೂಡಿಗೆರೆಯ ವಾರದ ಸಂತೆ. ಜನ್ನಾಪುರ, ಬೆಟ್ಟದಮನೆ, ಹುರುಡಿ, ಹಾನುಬಾಳು, ಸಕಲೇಶಪುರ ಕಡೆಯ ಸಾಕಷ್ಟು ಜನರು ಮೂಡಿಗೆರೆ ಸಂತೆಗೆ ಬಂದು ಈ ಕೊನೆಯ ಬಸ್ನ್ನೇ ಆಶ್ರಯಿಸುತ್ತಿದ್ದರು.
ಹೇಗೋ ಕೈ ಮತ್ತು ತಲೆ ತೂರಿಸಿದರೂ, ಬಾಗಿಲಲ್ಲೇ ನಿಂತಿದ್ದ ಜನ ಮೈಯನ್ನು ಒಳಗೆ ಬಿಡುತ್ತಿರಲಿಲ್ಲ. ಮುಡುಗಿಯಾಡಿ ತಲೆ-ಮೈ ತೂರಿಸಿದಾಗ ಕೈಯಲ್ಲಿದ್ದ ಮೂಟೆಯಷ್ಟು ದೊಡ್ಡ ಬ್ಯಾಗ್ ಮಾತ್ರ ಬಸ್ನ ಹೊರಗೇ ಉಳಿದಿತ್ತು! ಬ್ಯಾಗನ್ನು ಬಿಟ್ಟು ಕೈಯನ್ನು ಒಳಗೆಳೆದುಕೊಳ್ಳುವಂತೆಯೂ ಇರಲಿಲ್ಲ.
ಸ್ವಲ್ಪ ದೂರದ ಗಂಗನಮಕ್ಕಿ ತಲುಪುವಷ್ಟರಲ್ಲಿ ರಸ್ತೆಯ ಗುಂಡಿ-ಗೊಟರುಗಳಿಂದ ಆಗುವ ಕುಲುಕಾಟ, ತಿರುವುಗಳಲ್ಲಿ ಆಗುವ ಒತ್ತುವಿಕೆ, ಗುಂಡಿಯಿಳಿದಾಗ ಆಗುವ ಜಪ್ಪುವಿಕೆಯ ಪರಿಣಾಮವಾಗಿ, ಅಂತೂ ಇಂತೂ ನಾನು ಬ್ಯಾಗಿನ ಸಮೇತ ಇಡಿಯಾಗಿ ಬಸ್ನೊಳಗೆ ಸೇರಿದೆ.
ಹಳೇಮೂಡಿಗೆರೆ ರೈಸ್ಮಿಲ್ ಬಳಿ ಬರುವಷ್ಟರಲ್ಲಿ ಬಣಕಲ್ ಕಡೆಗೆ ಹೋಗುತ್ತಿದ್ದ ಮೆಟಾಡೋರ್ ಒಂದು ಆ ಏರನ್ನು ಏರಲಾಗದೆ ಮುಕ್ಕರಿಸುತ್ತಾ ನಿಂತಿತ್ತು. ಎಂಟು-ಹತ್ತು ಜನ ಇಳಿದು ಅದನ್ನು ಹಿಂದಿನಿಂದ ನೂಕುತ್ತಿದ್ದರು.
ಆ ಮೆಟಾಡೋರ್ ಮೂಡಿಗೆರೆಯಲ್ಲೇ ಅತ್ಯಂತ ಹಳೆಯದು. ಅದರ ಡ್ರೈವರ್-ಕಂ-ಮಾಲೀಕ ನುಕ್ಕಣ್ಣ ಇಡೀ ಮೂಡಿಗೆರೆಗೆ ವರ್ಲ್ಡ್ ಫೇಮಸ್. ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಮೆಟಾಡೋರ್ ನಿಲ್ಲಿಸಿಕೊಂಡು, “ಯರ್ರಿ ಹೊರಟ್ಟಿ… ಸಬ್ಬೇನಹಳ್ಳಿ… ಚಕ್ಮಕ್ಕಿ… ಬಣಕಲ್… ಕೊಟ್ಟಿಗೆಹಾರ…” ಎಂದು ಕೂಗತೊಡಗಿದರೆ ಇಪ್ಪತ್ತು-ಮೂವತ್ತು ನಿಮಿಷಗಳಲ್ಲಿ ವಾಹನ ಭರ್ತಿಯಾಗುತ್ತಿತ್ತು.
ಇಟ್ಟಿರುವುದು ಮೆಟಾಡೋರ್, ಆದರೆ ತುಂಬಿಸುವುದು ಮಾತ್ರ ಕೆ.ಎಸ್.ಆರ್.ಟಿ.ಸಿ. ಬಸ್ನಷ್ಟೇ! ಇಲ್ಲಿ ಸ್ಟಾರ್ಟ್ ಮಾಡುವ ಪ್ರಶ್ನೆಯೇ ಇಲ್ಲ. ಕಂಡಕ್ಟರ್ ಗಣೇಶನಿಗೆ “ಏಯ್, ಬಡಿಗೆ ತೆಗೆಯೋ” ಎಂದ ಕೂಡಲೇ, ಅದಕ್ಕಾಗಿಯೇ ಕಾಯುತ್ತಿದ್ದವನಂತೆ ಅವನು ಹಿಂದಿನ ಟೈರಿಗೆ ಅಡ್ಡಕೊಟ್ಟಿದ್ದ ಬಡಿಗೆಯನ್ನು ಕಾಲಿನಿಂದ ಒದ್ದು ಬಾಗಿಲಿನ ಪಕ್ಕದ ಸೀಟಿನ ಕೆಳಗೆ ತುರುಕುತ್ತಿದ್ದ. ಅಷ್ಟೇ, ಮೆಟಾಡೋರ್ ನಿಧಾನವಾಗಿ “ಜೀರ್… ಜಿಕ್… ಜೀರ್… ಜಿಕ್…” ಎಂದು ಮುಂದುವರೆಯುತ್ತಾ ವೇಗ ಪಡೆದುಕೊಳ್ಳುತ್ತಿತ್ತು.
ಗಂಗನಮಕ್ಕಿಯವರೆಗೆ ವೇಗವಾಗಿ ಓಡಿದ ಮೆಟಾಡೋರ್ ಅಷ್ಟರೊಳಗೆ ಜರ್ಕ್ನಲ್ಲಿ ಸ್ಟಾರ್ಟ್ ಆದರೆ ಆಯಿತು; ಇಲ್ಲದಿದ್ದರೆ ಪ್ರಯಾಣಿಕರನ್ನು ದೇವರೇ ಕಾಪಾಡಬೇಕು. ಹಳೇಮೂಡಿಗೆರೆ ಬಳಿ ಏರು ಆರಂಭವಾಗುತ್ತಿದ್ದಂತೆ ನುಕ್ಕಣ್ಣ, “ಬಡಿಗೆ ಕೊಡೋ… ಬಡಿಗೆ ಕೊಡೋ…” ಎಂದು ಬೊಬ್ಬೆ ಹೊಡೆಯಲು ಆರಂಭಿಸುತ್ತಿದ್ದ. ಗಣೇಶ ಬಡಿಗೆ ಕೊಟ್ಟ ಕೂಡಲೇ, ಯುದ್ಧಕಾಲದಲ್ಲಿ ಸರ್ಕಾರ ಹೇಳುವಂತೆ, “ಹೆಂಗಸರು, ಮಕ್ಕಳು, ವಯಸ್ಸಾದವರು ಬಿಟ್ಟು ಉಳಿದವರೆಲ್ಲ ಇಳಿಯಿರಿ. ಎಲ್ಲರೂ ಕೈ ಕೊಡಿ… ಐಸಾ… ತಳ್ಳು… ನೂಕು… ಐಸಾ…” ಎಂದು ಕೂಗುತ್ತಿದ್ದ.
ಎರಡು ಕಿಲೋಮೀಟರ್ ಇಳಿಜಾರಿನಲ್ಲಿ ಬಂದದ್ದನ್ನು ಈಗ ಅರ್ಧ ಕಿಲೋಮೀಟರ್ ಏರುದಲ್ಲಿ ತಳ್ಳಿಕೊಂಡು ಹತ್ತಿಸಬೇಕು! ಅವರ ಕರ್ಮ! ಶಪಿಸುತ್ತಲೇ ಎಲ್ಲರೂ ಮೆಟಾಡೋರ್ನ್ನು ನೂಕುತ್ತಿದ್ದರು.
ಮುಂದುವರೆಯುವುದು……

