ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಲೋಕಲ್ ನ್ಯೂಸ್ಗೆ ಸುದ್ದಿ ಪತ್ರಿಕೆಗಳೇ ಸರಿ ಕಣಯ್ಯಾ
ಒಂದು ದಿನ ಪೇಟೆ ಮಧ್ಯದ ಬೇಕರಿಯಲ್ಲಿ ಖರೀದಿ ಮಾಡುತ್ತಿದ್ದ ತೇಜಸ್ವಿಯವರು ನನ್ನನ್ನು ಕಂಡು ನಿಲ್ಲುವಂತೆ ಸನ್ನೆ ಮಾಡಿದರು. ಖರೀದಿ ಮುಗಿಸಿ ಚೀಲವನ್ನು ಸ್ಕೂಟರ್ ಕುತ್ತಿಗೆಗೆ ತೂಗು ಹಾಕಿದವರೇ, “ಬಾ ಇಲ್ಲಿ “ಎಂದರು. “ರಜಾ ಬಂದ ಕೂಡಲೇ ಲಾಟರಿ ಹೊಡೀತಿರ್ತಿಯಲ್ಲಾ. ತೋಟ ಕೊಂಡು ಮಾಡ್ತೀಯೇನಯ್ಯಾ?” ಎಂದರು.
ನನಗೆ ಗಲಿಬಿಲಿಯಾಯಿತು ಇರೋ ತೋಟವನ್ನೇ ಮಾಡಿಸೋಕಾಗದೇ ತಿರುಗಾಡುತ್ತಿದ್ದ ನನಗೆ ಇದೇನನ್ನೋ ಹೊಸದಾಗಿ ಗಂಟು ಹಾಕಲು ನೋಡುತ್ತಿದ್ದರಲ್ಲಾ ಎಂದು ಭಯವಾಯಿತು. “ನನ್ನ ತೋಟದ ಪಕ್ಕದ ತೋಟವನ್ನು ನೋಡಿದ್ದೀಯೇನಯ್ಯಾ? ಬಿದರಹಳ್ಳಿಯ ಸಾಹೇಬರೊಬ್ಬರು ತೆಗೆದುಕೊಂಡಿದ್ದರು. ಏಳೆಂಟು ಎಕರೆ ಇದೆ. ಅವರಿಗೆ ಉಸ್ತುವಾರಿ ನೋಡಲು ಕಷ್ಟವಾಗುತ್ತಿದೆಯಂತೆ ಮಾರಲು ಸಿದ್ಧವಾಗಿದ್ದಾರೆ. ನನ್ನನ್ನು ಕೇಳಿದರು. ನನಗೆ ಇರುವುದೇ ಸಾಕು. ಬೇರೆ ಯಾರೋ ತರಲೆ ತಕರಾರಿನ ಗಿರಾಕಿಗಳು ಬಂದು ಕೊಂಡುಕೊಂಡರೆ ಪಕ್ಕದಲ್ಲಿರೋ ನಮಗೆ ಕಷ್ಟ ಕಣಯ್ಯಾ. ನೀನೇ ತಗೊಳೋದಾದ್ರೆ ನೋಡಯ್ಯಾ” ಎಂದರು. ಮೊದಲನೆಯದಾಗಿ ನನ್ನಲ್ಲಿ ಅಷ್ಟು ಹಣವಿರಲಿಲ್ಲ. ಆ ದಿನಗಳ ಕೂಲಿ ಕಾರ್ಮಿಕರ ಅಲಭ್ಯತೆಯ ಸಮಸ್ಯೆ ಮತ್ತು ಕಾಫಿ ಕೃಷಿಯ ಅನಿಶ್ಚಿತತೆಯ ಸನ್ನಿವೇಶದ ನಡುವೆ ತೊಂದರೆಯನ್ನು ತಲೆಯ ಮೇಲೆ ಎಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಜೊತೆಗೆ ಕೈಲಾಗದ ಸೋಮಾರಿತನ ಬೇರೆ.

ಆಗ ತಾನೇ ಇಂಟರ್ನೆಟ್ ಸಂಪರ್ಕ ಪಡೆದಿದ್ದರು ತೇಜಸ್ವಿ. ನನಗಂತೂ ಆ ಅದ್ಭುತ ಲೋಕದ ಬಗ್ಗೆ ವಿಚಿತ್ರವಾದ ಕಲ್ಪನೆಗಳಿದ್ದವು. ಬ್ರಹ್ಮಾಂಡದ ಮೂಲೆ ಮೂಲೆಯಲ್ಲಿನ ಮಾಹಿತಿ ಕೇವಲ ಒಂದು ಕ್ಲಿಕ್ನಲ್ಲಿ ನಮ್ಮ ಕಣ್ಣೆದುರಿನ ಪರದೆಯಲ್ಲಿ ಮೂಡಿ ಬರುತ್ತಿದ್ದ ಮೋಡಿಗೆ ಭಳಾರೆ ವಿಚಿತ್ರಂ!! ಎಂಬ ವಿಸ್ಮಯವಿತ್ತು. “ನೋಡಯ್ಯಾ ಸುದ್ದಿ ಸಮಾಚಾರಗಳು ಘಟನೆ ನಡೆದ ಮರುಕ್ಷಣದಲ್ಲಿಯೇ ನಮಗೆ ತಲುಪುತ್ತ್ತವೆ. ಅದೂ ಆಡಿಯೋ ವಿಝ್ಯುವಲ್ ರೂಪದಲ್ಲಿ. ನಮಗೆ ದೇಶ ವಿದೇಶಗಳ ಸುದ್ದಿ ಸಮಾಚಾರಗಳು ಇಷ್ಟು ವೇಗವಾಗಿ ಸಿಕ್ಕಿದ ನಿದರ್ಶನಗಳೇ ಇಲ್ಲ. ಇಂಟರ್ನೆಟ್ ಪ್ರತಿಯೊಬ್ಬರನ್ನೂ ತಲುಪಿದ ಸನ್ನಿವೇಶದಲ್ಲಿ ಪತ್ರಿಕೋದ್ಯಮ ಹೇಗಿರಬಹುದೆಂದು ಕಲ್ಪಿಸಿಕೊಳ್ಳುತ್ತಿದ್ದೆ. ಆದ್ರೂ ಏನೇ ಹೇಳು ನಮ್ಮ ರಾಜ್ಯ, ಜಿಲ್ಲೆಗಳ ಮತ್ತು ನಮ್ಮ ಸುತ್ತಲಿನ ಲೋಕಲ್ ನ್ಯೂಸ್ಗೆ ಸುದ್ದಿ ಪತ್ರಿಕೆಗಳೇ ಸರಿ ಕಣಯ್ಯಾ.” ದಿನ ಪತ್ರಿಕೆಗಳ ಜಾಗವನ್ನು ಈ ಇಂಟರ್ನೆಟ್ ತುಂಬಲಾರದು ಎಂದು ಅಭಿಪ್ರಾಯಪಟ್ಟಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

