ನವದೆಹಲಿ, ಜು. 3: ಹಾಲಿವುಡ್ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಬಹುನಿರೀಕ್ಷಿತ ‘ದಿ ಆಡೆಸ್ಸಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೇಲರ್ಗೆ ಲೈಕ್ಸ್ಗಿಂತ ಡಿಸ್ಲೈಕ್ಸ್ ಹೆಚ್ಚಾಗಿರುವುದು ಸಿನಿಮಾ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಪ್ರಾಚೀನ ಗ್ರೀಕ್ ಕವಿ ಹೋಮರ್ ಅವರ ಮಹಾಕಾವ್ಯವನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮ್ಯಾಟ್ ಡೇಮನ್, ಜೆಂಡಾಯಾ ಸೇರಿದಂತೆ ಹಲವು ಖ್ಯಾತ ಕಲಾವಿದರು ನಟಿಸಿದ್ದಾರೆ. ಜುಲೈ 17ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಟ್ರೇಲರ್ ಮಾತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರೇಕ್ಷಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿ ಟ್ರೇಲರ್ನಲ್ಲಿರುವ ಆಧುನಿಕ ಶೈಲಿಯ ಸಂಭಾಷಣೆಗಳು, ಐತಿಹಾಸಿಕ ಹಿನ್ನೆಲೆಗೆ ಹೊಂದಿಕೆಯಾಗದ ಪಾತ್ರಗಳ ನಿರೂಪಣೆ ಹಾಗೂ ಅಮೆರಿಕನ್ ಉಚ್ಚಾರಣೆಯನ್ನು ಉಲ್ಲೇಖಿಸಲಾಗುತ್ತಿದೆ. ಇದರಿಂದ ಕಥೆಯ ಗಂಭೀರತೆ ಮತ್ತು ಪ್ರಾಚೀನ ಕಾಲದ ವಾತಾವರಣಕ್ಕೆ ಧಕ್ಕೆ ಉಂಟಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಲೆನ್ ಆಫ್ ಟ್ರಾಯ್ ಪಾತ್ರಕ್ಕೆ ನಟಿ ಲೂಪಿಟಾ ಅವರ ಆಯ್ಕೆ ಸೇರಿದಂತೆ ಹಲವು ಪಾತ್ರಗಳ ಆಯ್ಕೆಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಟ್ರೇಲರ್ನ್ನು ವ್ಯಂಗ್ಯವಾಡುತ್ತಾ, “ಇದು ಮಹಾಕಾವ್ಯದ ಸಿನಿಮಾ ಅಲ್ಲ, ಕಾಫಿ ಶಾಪ್ನಲ್ಲಿ ನಡೆಯುವ ಸಂಭಾಷಣೆಯಂತಿದೆ” ಎಂದು ಟೀಕಿಸಿದ್ದಾರೆ.
ಇದೇ ವೇಳೆ, ‘ಆಪನ್ಹೈಮರ್’ ಚಿತ್ರದ ಮೂಲಕ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ನೋಲನ್ ನಿರ್ದೇಶಿಸುತ್ತಿರುವ ಈ ಸಿನಿಮಾ ಬಿಡುಗಡೆಯ ಮೊದಲುವೇ ವಿವಾದಕ್ಕೆ ಸಿಲುಕಿದೆ. ಆದಾಗ್ಯೂ, ಭಾರೀ ತಾಂತ್ರಿಕ ಗುಣಮಟ್ಟ ಮತ್ತು ನೋಲನ್ ಅವರ ನಿರ್ದೇಶನದ ಮೇಲೆ ವಿಶ್ವಾಸ ಹೊಂದಿರುವ ಅಭಿಮಾನಿಗಳು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಸಾಧಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಹೈಲೈಟ್ಸ್:
- ‘ದಿ ಆಡೆಸ್ಸಿ’ ಟ್ರೇಲರ್ಗೆ ಲೈಕ್ಸ್ಗಿಂತ ಡಿಸ್ಲೈಕ್ಸ್ ಹೆಚ್ಚಳ
- ಆಧುನಿಕ ಸಂಭಾಷಣೆ, ಅಮೆರಿಕನ್ ಉಚ್ಚಾರಣೆ ವಿರುದ್ಧ ನೆಟ್ಟಿಗರ ಆಕ್ರೋಶ
- ಪಾತ್ರಗಳ ಆಯ್ಕೆ ಕುರಿತೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
- ಜುಲೈ 17ರಂದು ಬಿಡುಗಡೆಯಾಗಲಿರುವ ಕ್ರಿಸ್ಟೋಫರ್ ನೋಲನ್ ಸಿನಿಮಾ
- ವಿವಾದದ ನಡುವೆಯೂ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಮುಂದುವರಿಕೆ
