Oplus_16908288
ಶ್ಲೋಕ – 04
ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ ಯೋನಿರಹಂ ಬೀಜಪ್ರದಃ ಪಿತಾ ॥೪॥
ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।
ತಾಸಾಮ್ ಬ್ರಹ್ಮ ಮಹತ್ ಯೋನಿಃ ಅಹಮ್ ಬೀಜಪ್ರದಃ ಪಿತಾ –ಕೌಂತೇಯ, ಯಾವೆಲ್ಲ ಬಸಿರುಗಳಲ್ಲಿ ಏನೆಲ್ಲ ರೂಪಗಳು ರೂಪುಗೊಳ್ಳುತ್ತವೆ- ಅವುಗಳಿಗೆಲ್ಲ ಚೇತನ ಪ್ರಕೃತಿಯೆ ತಾಯಿ; ನಾನೆ ಬೀಜ ಬಿತ್ತುವ ತಂದೆ.
ಕೇವಲ ದೇವತೆಗಳು, ಮಾನವರಷ್ಟೇ ಅಲ್ಲ. ಸಮಸ್ತ ಜೀವಜಾತದ ಹುಟ್ಟಿನ ಹಿಂದೆ ತಂದೆ ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಎಲ್ಲವುದರ ತಾಯಿ ಚೇತನ ಪ್ರಕೃತಿ ಲಕ್ಷ್ಮಿ. ಬೀಜ ಬಿತ್ತುವ ತಂದೆ ನಾರಾಯಣ. ಮುಂಡಕ ಉಪನಿಷತ್ತಿನಲ್ಲಿ ಹೇಳುವಂತೆ:
ಪುಮಾನ್ ರೇತಃ ಸಿಂಚತಿ ಯೋಷಿತಾಯಾಂ ಬಹ್ವೀಃ ಪ್ರಜಾಃ ಪುರುಷಾತ್ ಸಂಪ್ರಸೂತಾಃ || ೨.೨.೫||
ಇಲ್ಲಿ ‘ಪುಮಾನ್’ ಎಂದರೆ ಗಂಡಿನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮತ್ತು ‘ಯೋಷಿತಾ’ ಎಂದರೆ ಹೆಣ್ಣಿನಲ್ಲಿ ವಿಶೇಷವಾಗಿ ಸನ್ನಿಹಿತಳಾಗಿರುವ ಲಕ್ಷ್ಮಿ. ಹೇಗೆ ಹೊಲದಲ್ಲಿ ಬೀಜ ಬಿತ್ತಿದರೆ ಅದು ಅಲ್ಲಿ ನಿಜವಾದ ರೂಪವನ್ನು ತಾಳುತ್ತದೋ, ಹಾಗೆ ಭಗವಂತ ಜಡಪ್ರಕೃತಿಯ ಅಭಿಮಾನಿನಿಯಾದ ಶ್ರೀಲಕ್ಷ್ಮಿಯಲ್ಲಿ ಬೀಜಪ್ರದ ಮಾಡುತ್ತಾನೆ. ತಾಯಿ ಲಕ್ಷ್ಮಿ ಆ ಬೀಜಕ್ಕೆ ಒಂದು ಆಕಾರ ಕೊಡುತ್ತಾಳೆ. ಈ ಅನುಸಂಧಾನ ಎಷ್ಟು ಭವ್ಯ. ಈ ಕಾರಣಕ್ಕಾಗಿ ಹಿಂದಿನ ಕಾಲದ ಶಾಸ್ತ್ರಕಾರರು ಗರ್ಭಿಣಿ ಹೆಣ್ಣಿನ ದೇಹವನ್ನು ದೇವಾಲಯ ಎಂದೂ, ಆ ಗರ್ಭಿಣಿಯ ಗರ್ಭವಿರುವ ಸ್ಥಳ ಗರ್ಭಗುಡಿ ಎಂತಲೂ, ಆ ಗರ್ಭದ ಒಳಗೆ ಸನ್ನಿಹಿತನಾಗಿ ಬೆಳೆಸುತ್ತಿರುವವ ಭಗವಂತ ಎಂತಲೂ ಗೌರವಿಸುತ್ತಿದ್ದರು. ಇದು ನಮ್ಮ ಪ್ರಾಚೀನರು ಪ್ರತಿಯೊಂದು ಕ್ರಿಯೆಯಲ್ಲೂ ಭಗವಂತನನ್ನು ಅನುಸಂಧಾನ ಮಾಡುವ ಭವ್ಯತೆ. ಹೆಣ್ಣು ದೇವಾಲಯವಾಗುವುದು ಆಕೆ ಗರ್ಭಿಣಿಯಾದಾಗ. ಹಾಗಾಗಿ ಹೆಣ್ಣಿನ ಸರ್ವ ಶ್ರೇಷ್ಠ ಭಯಕೆ ತಾನು ತಾಯಿಯಾಗಬೇಕು ಎನ್ನುವುದು. ಆಕೆಯ ಬಯಕೆಯ ಕೊನೆಯ ಗುರಿ ಮಾತೃತ್ವ. ಲಕ್ಷ್ಮಿ ಆಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸನ್ನಿಹಿತಳಾಗುವುದು ಆಕೆ ಗರ್ಭವತಿಯಾದಾಗ. ಈ ಕಾರಣದಿಂದ ದಾಂಪತ್ಯ ಅನ್ನುವುದು ಲಕ್ಷ್ಮೀನಾರಾಯಣರ ಆರಾಧನೆ. ದಾಂಪತ್ಯದಲ್ಲಿ ಗಂಡು ಹೆಣ್ಣಿನ ಸಮಾಗಮ ಎನ್ನುವುದು ಲಕ್ಷ್ಮೀ ನಾರಾಯಣರ ಸಮಾಗಮ. ಇಲ್ಲಿ ನಮ್ಮ ಭಾಗ್ಯ ಎಂದರೆ ನಮ್ಮನ್ನು ಮಾಧ್ಯಮವಾಗಿ ಬಳಸಿ ಭಗವಂತ ಸೃಷ್ಟಿ ಮಾಡುವುದು. ಈ ರೀತಿ ಸೃಷ್ಟಿಯಾಗುವಾಗ ಇಲ್ಲಿ ಬೇಕಾಗುವ ಮೂಲದ್ರವ್ಯದ ವಿಸ್ತಾರವಾದ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ನೀಡಿದ್ದಾನೆ.
