ಶ್ಲೋಕ – 15
ರಜಸಿ ಪ್ರಳಯಂ ಗತ್ವಾ ಕರ್ಮ ಸಂಗಿಷು ಜಾಯತೇ ।
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥೧೫॥
ರಜಸಿ ಪ್ರಳಯಮ್ ಗತ್ವಾ ಕರ್ಮ ಸಂಗಿಷು ಜಾಯತೇ ।
ತಥಾ ಪ್ರಲೀನಃ ತಮಸಿ ಮೂಢ ಯೋನಿಷು ಜಾಯತೇ –ರಜೋಗುಣದಲ್ಲಿ ಸಾವನ್ನಪ್ಪಿದರೆ ಕರ್ಮಕ್ಕೆ ಅಂಟಿಕೊಂಡವರಲ್ಲಿ ಹುಟ್ಟುತ್ತಾನೆ. ತಮೋಗುಣದಲ್ಲಿ ಸತ್ತವನು ತಿಳಿವಿರದ ಹೀನಯೋನಿಗಳಲ್ಲಿ ಹುಟ್ಟುತ್ತಾನೆ.
ಜ್ಞಾನಕ್ಕೆ ಪೂರಕವಲ್ಲದ ಕರ್ಮಾನುಷ್ಠಾನ ಮಾಡುತ್ತಾ ರಜೋಗುಣದ ಪ್ರಭಾವದಲ್ಲಿ ದುಡ್ಡು-ದುಡ್ಡು ಎಂದು ಬದುಕಿ, ಅದೇ ಪ್ರಭಾವದಲ್ಲಿ ಸತ್ತರೆ-ಆಗ ಮುಂದಿನ ಜನ್ಮದಲ್ಲಿ ಕರ್ಮಕ್ಕೆ ಅಂಟಿಕೊಂಡು ಹುಟ್ಟಬೇಕಾಗುತ್ತದೆ. ಇನ್ನು ತಮೋಗುಣದ ಪ್ರಭಾವದಲ್ಲಿ ಬದುಕಿ ಸತ್ತರೆ ಮುಂದಿನ ಜನ್ಮದಲ್ಲಿ ಹೀನಯೋನಿಯಲ್ಲಿ ಹುಟ್ಟಬೇಕಾಗುತ್ತದೆ. ಇಲ್ಲಿ ‘ಹೀನಯೋನಿ’ ಅಂದರೆ ಮನುಷ್ಯ ಕೂಡ ಆಗಬಹುದು. ಯಾವ ಸಂಸ್ಕಾರವಿಲ್ಲದ, ಸ್ವಚ್ಛತೆ ಇಲ್ಲದ, ಜ್ಞಾನವಿಲ್ಲದ, ಕೇವಲ ಮನುಷ್ಯ ಆಕಾರವನ್ನು ಪಡೆದು, ಮನುಷ್ಯತ್ವದ ಲವಲೇಷವಿಲ್ಲದೆ ಮನುಷ್ಯರಾಗಿ ಬದುಕುವುದೂ ಕೂಡ ಹೀನಯೋನಿ ಜನನ. ಇದಕ್ಕಿಂತ ಪ್ರಾಣಿ ಜನ್ಮ ಎಷ್ಟೋ ಮೇಲು. ಇದು ತಮೋಗುಣದಲ್ಲಿ ಸತ್ತಾಗ ಆಗುವ ಪರಿಣಾಮ. [ಸಾಯುವ ಕೊನೇ ಕ್ಷಣದಲ್ಲಿ ರಜಸ್ಸು ಮತ್ತು ತಮಸ್ಸಿನ ಪ್ರಭಾವದಿಂದ ಸತ್ತರೆ, ಅದು ನಮ್ಮ ಮುಂದಿನ ಜನ್ಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು-ಘಜೇಂದ್ರನಾಗಿ ಹುಟ್ಟಿದ ಇಂದ್ರದ್ಯುಮ್ನ ಮತ್ತು ಜಿಂಕೆಯಾಗಿ ಹುಟ್ಟಿದ ಭರತ ಚಕ್ರವರ್ತಿಯ ಕಥೆಯಿಂದ ನಾವು ತಿಳಿಯಬಹುದು. ಪುನರ್ಜನ್ಮದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ತಿಳಿಯಲು Edgar cayce(1877 to 1920) ಅವರ ಪುಸ್ತಕಗಳು ಹಾಗು ಅವರ ಮೇಲಿನ ಸಂಶೋಧನೆಯ ವಿವರವನ್ನು ನೋಡಿ ].
