ಶ್ಲೋಕ – 16
ಕರ್ಮಣಃ ಸುಕೃತಸ್ಯಾSಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ ।
ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಮ್ ॥೧೬॥
ಕರ್ಮಣಃ ಸುಕೃತಸ್ಯ ಆಹುಃ ಸಾತ್ತ್ವಿಕಮ್ ನಿರ್ಮಲಮ್ ಫಲಮ್ ।
ರಜಸಃ ತು ಫಲಮ್ ದುಃಖಮ್ ಅಜ್ಞಾನಮ್ ತಮಸಃ ಫಲಮ್ – ಒಳ್ಳೆಯ ಕಜ್ಜದಿಂದ ದುಗುಡವಿರದ ಸಾತ್ವಿಕ ಫಲ ಎನ್ನುತ್ತಾರೆ ತಿಳಿದವರು. ರಾಜಸವಾದ ಕಜ್ಜದಿಂದ ದುಃಖ ಬೆರೆತ ಸುಖ. ತಿಳಿಗೇಡಿತನವೇ ತಮೋಗುಣದ ಕಜ್ಜದ ಫಲ.
ಜೀವನದುದ್ದಕ್ಕೂ ಇನ್ನೊಬ್ಬರಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದು ಸುಕೃತ. ನಮ್ಮಲ್ಲಿ ಸಂಪತ್ತಿದ್ದಾಗ ಅದು ನನ್ನದು-ನನ್ನದು ಎಂದು ಜಿಪುಣನಾಗಿ ಬದುಕಿದರೆ ಅದರಿಂದ ದುಃಖಭರಿತ ಜೀವನ ನಮ್ಮದಾಗುತ್ತದೆ. ನಾವು ಗಳಿಸಿದ್ದನ್ನು ಇನ್ನೊಬ್ಬರ ಕಷ್ಟದಲ್ಲಿ ವಿನಿಯೋಗಿಸಿದಾಗ ಅದು ನಮ್ಮನ್ನು ಸಾತ್ವಿಕ ಫಲದತ್ತ ಕೊಂಡೊಯ್ಯುತ್ತದೆ. ಮಧ್ವಾಚಾರ್ಯರು ಈ ವಿಚಾರಕ್ಕೆ ಒತ್ತು ಕೊಟ್ಟು ತಮ್ಮ ‘ಗೀತಾತಾತ್ಪರ್ಯ’ದಲ್ಲಿ ಹೀಗೆ ಹೇಳಿದ್ದಾರೆ:
ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ
ಕಷ್ಟದಲ್ಲಿರುವವರ ಸೇವೆ ಮಾಡುವುದು ಮೋಕ್ಷ ಸಾಧನೆಯ ಒಂದು ಮುಖ. ನಮ್ಮಲ್ಲಿ ಕೆಲವರು ಕಷ್ಟದಲ್ಲಿರುವವರನ್ನು ಕಂಡು ಹೀಗೆ ಹೇಳುವುದಿದೆ: “ಅದು ಅವನ ಪ್ರಾರಾಬ್ಧಕರ್ಮ, ಅದನ್ನು ಅವನು ಅನುಭವಿಸಲಿ. ಅದಕ್ಕೆ ನಾನ್ಯಾಕೆ ಚಿಂತಿಸಬೇಕು” ಎಂದು. ಈ ರೀತಿ ಹೇಳಿದಾಗ ನಾವು ಆ ಕಷ್ಟದಲ್ಲಿರುವ ವ್ಯಕ್ತಿಯ ಒಳಗಿರುವ ಭಗವಂತನನ್ನು ತಿರಸ್ಕಾರ ಮಾಡಿದಂತಾಗುತ್ತದೆ. ಇಂಥವರಿಗೆ ಎಂದೆಂದೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ನಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಜಪ-ತಪವಷ್ಟೇ ಸಾಲದು; ಇಲ್ಲಿ ಕಷ್ಟದಲ್ಲಿರುವ ಜನರ ಸೇವೆಯೂ ಒಂದು ಪ್ರಧಾನವಾದ ಅಂಶ. ಸಾಧಕನು ತನ್ನ ನಿತ್ಯಾನುಷ್ಠಾನಗಳ ಜತೆಗೆ ಈ ಸೇವಾಕಾರ್ಯವನ್ನು ಆಚರಿಸಬೇಕೆನ್ನುವುದು ಗೀತೆಯ ಆದೇಶವೆಂದು ಮಧ್ವಾಚಾರ್ಯರು ಪ್ರತಿಪಾದಿಸಿದ್ದಾರೆ. ನಿನ್ನ ಮನೆಯಲ್ಲಿ ಬೆಂದ ಅನ್ನ ಎಷ್ಟು ಹಸಿದ ಜನರ ಹಸಿವನ್ನು ತಣಿಸುತ್ತದೆ-ಅಷ್ಟು ಸುಕೃತ. ಇದಕ್ಕಾಗಿ ಹಿಂದಿನ ಕಾಲದಲ್ಲಿ ಒಂದು ಸಂಪ್ರದಾಯವಿತ್ತು. ಅಡುಗೆ ಮಾಡಿ, ದೇವರಿಗೆ ಅದನ್ನು ಅರ್ಪಿಸಿ, ಸುಮಾರು ಹತ್ತು ನಿಮಿಷ ಹೆಬ್ಬಾಗಿಲಿನಲ್ಲಿ ಕಾದು, ನಂತರ ಊಟ ಮಾಡುವುದು. ಏಕೆಂದರೆ ಈ ಸಮಯದಲ್ಲಿ ಯಾರಾದರೂ ಹಸಿದವರು ಮನೆಯ ಬೀದಿಯಲ್ಲಿ ಬಂದರೆ ಅವರಿಗೆ ಮೊದಲು ಊಟ ಬಡಿಸಿ, ಆನಂತರ ಯಜಮಾನ ಊಟಮಾಡುವುದು ಆಗಿನ ಪದ್ಧತಿಯಾಗಿತ್ತು. ಇಷ್ಟೇ ಅಲ್ಲದೆ ಇದಕ್ಕೂ ಮೊದಲು ‘ಬಲಿಹರಣ’ ಮಾಡುತ್ತಿದ್ದರು. ಮನೆಯ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವುದು ‘ಬಲಿಹರಣ’. ಹೀಗೆ ಜೀವಮಾನದುದ್ದಕ್ಕೂ ಒಳ್ಳೆಯ ಕೆಲಸ ಮಾಡಿದರೆ ಅದರ ಫಲ ಸಾತ್ವಿಕವಾಗುತ್ತದೆ. ಇದರಿಂದ ಈ ಜನ್ಮದಲ್ಲಿ ಜ್ಞಾನ ಗಳಿಸಲು ಆಗದಿದ್ದರೂ ಕೂಡ, ಮುಂದಿನ ಜನ್ಮದಲ್ಲಿ ಆ ಅವಕಾಶ ಒದಗಿ ಬರುತ್ತದೆ. ಜ್ಞಾನವಿದ್ದೂ ದುಷ್ಕೃತಿಯಾಗಿ ಬದುಕಿದರೆ ಮತ್ತೆ ಹೀನಯೋನಿಯಲ್ಲಿ ಹುಟ್ಟಬೇಕಾಗುತ್ತದೆ.
ಹೋಮ-ಹವನ, ದಾನ-ದಕ್ಷಿಣೆ, ಬ್ರಾಹ್ಮಣಾರಾಧನೆ- ಎಲ್ಲವನ್ನು ಮಾಡಿ, ‘ತಾನು ಎಲ್ಲರಿಗಿಂತ ಮಹಾನ್’ ಎನ್ನುವ ಅಹಂಕಾರ ಬಂದರೆ ಅದು ರಜಸ್ಸಿನ ಕರ್ಮವಾಗುತ್ತದೆ. ಅದರ ಫಲ ಲೋಭ; ದುಃಖ ಬೆರೆತ ಜೀವನ. ಇದರಿಂದ ಪುಣ್ಯ ಕರ್ಮ ಮಾಡಿಯೂ ದುಃಖ ಅನುಭವಿಸಬೇಕಾಗುತ್ತದೆ. ಅಜ್ಞಾನದಿಂದ, ಯಾರದ್ದೋ ಒತ್ತಡಕ್ಕೆ ಮಾಡುವ ಕರ್ಮದಿಂದ ಎಂದೂ ಜ್ಞಾನ ಬೆಳೆಯುವುದಿಲ್ಲ. ತಿಳಿಗೇಡಿತನವೇ ತಮೋಗುಣದ ಕರ್ಮಫಲ.
