ಶ್ಲೋಕ – 21
ಇಲ್ಲಿ ಕೃಷ್ಣ ತ್ರಿಗುಣವನ್ನು ದಾಟಿದಾಗ ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ. ಹೀಗೆ ಹೇಳಿದಾಗ ಸಹಜವಾಗಿ ನಮಗೊಂದು ಪ್ರಶ್ನೆ ಬರುತ್ತದೆ. ಅದೇ ಪ್ರಶ್ನೆಯನ್ನು ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನ ಮುಂದಿಡುತ್ತಾನೆ.
ಅರ್ಜುನ ಉವಾಚ ।
ಕೈರ್ಲಿಗೈಸ್ತ್ರೀನ್ ಗುಣಾನೇತಾನತೀತೋ ಭವತಿ ಪ್ರಭೋ ।
ಕಿಮಾಚಾರಃ ಕಥಂ ಚೈತಾಂಸ್ತ್ರೀನ್ ಗುಣಾನತಿವರ್ತತೇ ॥೨೧॥
ಅರ್ಜುನ ಉವಾಚ-ಅರ್ಜುನ ಕೇಳಿದನು :
ಕೈಃ ಲಿಂಗೈಃ ತ್ರೀನ್ ಗುಣಾನ್ ಏತಾನ್ ಅತೀತಃ ಭವತಿ ಪ್ರಭೋ ।
ಕಿಮ್ ಆಚಾರಃ ಕಥಮ್ ಚ ಏತಾನ್ ತ್ರೀನ್ ಗುಣಾನ್ ಅತಿವರ್ತತೇ—ಒಡೆಯನೆ, ಯಾವ ಕುರುಹುಗಳಿಂದ ಈ ಮೂರು ಗುಣಗಳನ್ನು ದಾಟಿದವನೆನ್ನಿಸುತ್ತಾನೆ ? ಅವನ ನಡೆವಳಿಕೆ ಎಂಥದು ? ಹೇಗೆ ಈ ಮೂರು ಗುಣಗಳನ್ನು ದಾಟುತ್ತಾನೆ?
ನಮ್ಮ ನಿಮ್ಮೆಲ್ಲರ ಪರವಾಗಿ ಅರ್ಜುನ ಕೃಷ್ಣನಲ್ಲಿ ಪ್ರಶ್ನೆ ಹಾಕುತ್ತಾನೆ. ಆತ ಕೇಳುತ್ತಾನೆ: “ಮೂರು ಗುಣಗಳನ್ನು ದಾಟಿದವನೊಬ್ಬನಿದ್ದರೆ ಅವನನ್ನು ಗುರುತಿಸುವುದು ಹೇಗೆ? ಆತನ ಕುರುಹು ಏನು? ಅವನ ನಡತೆ ಹೇಗಿರುತ್ತದೆ? ಈ ಮೂರು ಗುಣಗಳನ್ನು ಆತ ಹೇಗೆ ದಾಟುತ್ತಾನೆ?”
ಇಲ್ಲಿ ಅರ್ಜುನ ಕೃಷ್ಣನನ್ನು “ಪ್ರಭೋ” ಎಂದು ಸಂಬೋಧಿಸುತ್ತಾನೆ. “ನನ್ನ ಪ್ರಶ್ನೆಗಳಿಗೆ ಖಂಡಿತವಾಗಿ ಉತ್ತರ ಕೊಡಬಲ್ಲವ-ನೀನೊಬ್ಬನೆ” ಎನ್ನುವ ಧ್ವನಿ ಮತ್ತು ‘ಪೂರ್ಣ ಶರಣಾಗತಿ’ ಈ ಸಂಬೋಧನೆಯ ಹಿಂದಿದೆ. ಭಗವಂತ ಅರ್ಜುನನ ಈ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಉತ್ತರಿಸಿದ್ದಾನೆ.
