ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವದ ಕೊನೆಯ ದಿನವಾದ ಬುಧವಾರ, ಕೊಡವೂರು-ಉಡುಪಿಯ ಸುಮನಸಾ ಕಲಾವಿದರು ‘ಈದಿ’ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವಿದ್ದು ಉಚ್ಚಿಲ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ನಾಟಕವು ಮಾನವೀಯತೆ, ಸಹಬಾಳ್ವೆ ಹಾಗೂ ಸಾಮರಸ್ಯದ ಸಂದೇಶವನ್ನು ಸಾರಿತು.
24 ವರ್ಷಗಳ ಇತಿಹಾಸ ಹೊಂದಿರುವ ಸುಮನಸಾ ಸಾಂಸ್ಕೃತಿಕ ಸಂಘಟನೆ ತುಳು, ಕನ್ನಡ ನಾಟಕ, ಯಕ್ಷಗಾನ, ರೂಪಕ ಹಾಗೂ ಏಕವ್ಯಕ್ತಿ ನಾಟಕ ಸೇರಿದಂತೆ ವಿವಿಧ ರಂಗಪ್ರಕಾರಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ಹಾಸನದಲ್ಲಿ ಪ್ರದರ್ಶಿತವಾದ ‘ಈದಿ’ ಮೂಲತಃ ಹಿಂದಿ ನಾಟಕವಾಗಿದ್ದು, ಸಮೀರ್ ಸೂರ್ಯಕಾಂತ್ ಪೆಣ್ಣರ್ ಅವರ ಕೃತಿ. ಮುಂಬೈನವರಾದ ಅವರು ನಟ, ನಾಟಕ ನಿರ್ದೇಶಕ, ಬರಹಗಾರ, ಕವಿ ಹಾಗೂ ರಂಗ ವಿನ್ಯಾಸಕಾರರಾಗಿ ಗುರುತಿಸಿಕೊಂಡಿದ್ದಾರೆ. ಈ ಎಲ್ಲ ಪ್ರತಿಭೆಗಳ ಮಿಳಿತ ‘ಈದಿ’ ನಾಟಕದಲ್ಲೂ ಕಾಣಿಸಿಕೊಳ್ಳುತ್ತದೆ.

ನಾಟಕವನ್ನು ತುಳುವಿಗೆ ಅನುವಾದಿಸಿರುವ ಲತೇಶ್ ಪೂಜಾರಿ, ಮುಂಬೈ, ತಮ್ಮ ಎಂಟನೇ ವಯಸ್ಸಿನಲ್ಲೇ ‘ಅಜ್ಜೆರ್ ಇಜ್ಜೆರ್’ ತುಳು ನಾಟಕದ ಮೂಲಕ ರಂಗಭೂಮಿಗೆ ಪ್ರವೇಶಿಸಿದ್ದರು. ಇಂದು ಅವರು ನಟ, ನಿರ್ದೇಶಕ, ಗಾಯಕ, ಸಂಗೀತ ಸಂಯೋಜಕ ಹಾಗೂ ಕಂಠದಾನ ಕಲಾವಿದರಾಗಿ ಭಾರತೀಯ ರಂಗಭೂಮಿಯಲ್ಲಿ ಹೆಸರು ಮಾಡಿದ್ದಾರೆ. ಕನ್ನಡಕ್ಕೆ ಅನುವಾದಿಸಿರುವ ಸಾಹಿತ್ಯ ಜಯಶ್ರೀ ಇಡ್ಕಿದು ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ರಂಗಾಯಣದಲ್ಲಿ ಡಿಪ್ಲೊಮಾ ಇನ್ ಡ್ರಾಮಾ ಆರ್ಟ್ ಪದವಿಯನ್ನೂ ಪಡೆದಿದ್ದಾರೆ. ಉಡುಪಿಯ ರಂಗಭೂಮಿ ನಡೆಸಿದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಈ ತಂಡ ಪ್ರಥಮ ಬಹುಮಾನ ಪಡೆದಿದೆ.
‘ಈದಿ’ ಎಂದರೆ ಈದ್ ಹಬ್ಬದ ದಿನ ನೀಡುವ ಉಡುಗೊರೆ. ಆದರೆ ಇಲ್ಲಿ ಯಾರು ಯಾರಿಗೆ ಈದಿ ನೀಡಿದರು? ಅದು ಎಂತಹ ಘನವಾದ ಉಡುಗೊರೆಯಾಗಿತ್ತು? ಎಂಬ ಪ್ರಶ್ನೆಯೇ ನಾಟಕದ ಕೇಂದ್ರಬಿಂದುವಾಗಿದೆ. ನಾಟಕದಲ್ಲಿ ಧ್ವನಿಸುವ ಸಾಮರಸ್ಯದ ಬಂಧವು ಮನಸ್ಸು-ಮನಸ್ಸುಗಳಲ್ಲಿ ಮಾನವೀಯತೆಯ ಸೊಡರನ್ನು ಹಚ್ಚುವಂತೆ ಮಾಡುತ್ತದೆ.

ನಾಟಕದ ಪಂಡಿತ್ ನಾರಾಯಣ್ ಹಕ್ಸರ್ ಒಬ್ಬ ಚಿತ್ರಕಲಾವಿದ ಹಾಗೂ ಕಾಶ್ಮೀರದ ನಿವಾಸಿ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನಕ್ಕೆ ಅವರ ಚಿತ್ರಕಲೆ ಪೂರಕವಾಗಿ ಪ್ರಕಟವಾಗಿದ್ದು, ಅದು ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗುತ್ತದೆ. ಭಯೋತ್ಪಾದಕರು ಅವರ ಮನೆಗೆ ನುಗ್ಗಿ ಪತ್ನಿಯನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ಮಗಳು ರೋಶ್ನಿ ಮಾತ್ರ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. ಭಯೋತ್ಪಾದಕರ ಹಾವಳಿಗೆ ಹೆದರಿ ಊರು ಬಿಟ್ಟು ಲಾರಿಯೊಂದರಲ್ಲಿ ಗೌಪ್ಯವಾಗಿ ಬೇರೆಡೆಗೆ ತೆರಳುತ್ತಿದ್ದ ಹಿಂದೂ ಕುಟುಂಬಗಳ ಗುಂಪಿನಲ್ಲಿ ಸೇರಿ ಆಕೆ ಪಾರಾಗುತ್ತಾಳೆ.
ಆಕೆಯನ್ನು ಲಾರಿಯತ್ತ ಕರೆತಂದು ಬಿಡುವ ವ್ಯಕ್ತಿ ಮುಸ್ಲಿಂ ಎಂಬುದು ಮೂಲ ನಾಟಕದ ಮಾನವೀಯ ನೆಲೆಯ ಪ್ರಮುಖ ಅಂಶವಾಗಿದೆ. ಲಾರಿ ಹೊರಡುವ ದೃಶ್ಯದಿಂದಲೇ ಆರಂಭಗೊಳ್ಳುವ ನಾಟಕವು ಮನುಷ್ಯತ್ವ ಮತ್ತು ಮಾನವೀಯತೆಯ ಗುಣಗಳ ಹುಡುಕಾಟದಲ್ಲೇ ಇಡೀ ಕಥೆಯನ್ನು ಕಟ್ಟಿಕೊಡುತ್ತದೆ.
ರೋಶ್ನಿ ಬಂದು ಸೇರುವುದು ಒಂದು ಮುಸ್ಲಿಂ ಕುಟುಂಬದಲ್ಲಿ. ಅಲ್ಲಿ ಆಗಲೇ ಇದ್ದ ಯುವಕ ಮಹಮ್ಮದ್ ಕೂಡ ಒಬ್ಬ ಕಲಾವಿದ. ಆತ ಝರೀನಾಳ ಮಗನೆಂಬ ಪ್ರೇಕ್ಷಕರ ಊಹೆ ತಪ್ಪಾಗುತ್ತದೆ. ಮಹಮ್ಮದ್ ಕೂಡ ರೋಶ್ನಿಯಂತೆ ಆಕೆಗೆ ಸಿಕ್ಕವನು ಎಂಬುದು ನಂತರ ತಿಳಿಯುತ್ತದೆ. ಝರೀನಾಳ ಕುಟುಂಬವೂ ಭಯೋತ್ಪಾದಕರ ದಾಳಿಗೆ ಒಳಗಾಗಿರುತ್ತದೆ. ಕಾಶ್ಮೀರಿ ಪಂಡಿತರ ಕುಟುಂಬದ ಮಕ್ಕಳಿಗೆ ಆಶ್ರಯ ನೀಡಿದ್ದ ಕಾರಣಕ್ಕೆ ಭಯೋತ್ಪಾದಕರು ಝರೀನಾಳ ಮನೆಗೆ ನುಗ್ಗಿ ಅಮಾನವೀಯವಾಗಿ ಮಹಮ್ಮದ್ನನ್ನು ಕೊಲ್ಲುತ್ತಾರೆ.

ಈ ಸಂದರ್ಭದಲ್ಲಿ ‘ಈದಿ’ ಅರ್ಥಾತ್ ಉಡುಗೊರೆ ಯಾರು ಯಾರಿಗೆ ನೀಡಿದರು ಎಂಬ ಪ್ರಶ್ನೆ ಪ್ರೇಕ್ಷಕರ ಮನಸ್ಸನ್ನು ಕಾಡುತ್ತದೆ. ಕಾಶ್ಮೀರಿ ಪಂಡಿತರ ಸಮಸ್ಯೆಯನ್ನು ತೆರೆದಿಡುವ ಜತೆಗೆ, ಧರ್ಮದ ಎಲ್ಲ ಗಡಿಗಳನ್ನು ಮೀರಿ ಮನುಷ್ಯರಾಗಿ ಬದುಕುವ ಅಗತ್ಯವನ್ನು ನಾಟಕ ಒತ್ತಿ ಹೇಳುತ್ತದೆ.
ನಾರಾಯಣ್ ಹಕ್ಸರ್ ಒಬ್ಬ ಕಲಾವಿದನಾಗಿ ತನ್ನ ಬಣ್ಣಗಳ ಮೂಲಕವೇ ಮಾನವೀಯತೆಯ ಕುರುಹಾಗುತ್ತಾನೆ. ಝರೀನಾ ತನ್ನ ವ್ಯಕ್ತಿತ್ವದ ಮೂಲಕ ಮಾನವೀಯತೆಯನ್ನು ಪ್ರಾಯೋಗಿಕವಾಗಿ ಹೊರಜಗತ್ತಿಗೆ ಸಾರುತ್ತಾಳೆ. ರೋಶ್ನಿ ಹಾಗೂ ಮಹಮ್ಮದ್ ಭವಿಷ್ಯದ ಕುಡಿಗಳಾಗಿ ಹೊಸ ಸಂದೇಶವನ್ನು ನೀಡುತ್ತಾರೆ.
ಬಣ್ಣಗಳ ಬಗೆಗಿನ ಚರ್ಚೆ, ಆದರ್ಶ ತಂದೆಯ ಚಹರೆಗಳು ಹಾಗೂ ಮುಂದಿನ ತಲೆಮಾರಿಗೆ ನಿಜವಾಗಿಯೂ ದಾಟಿಸಬೇಕಾದ್ದೇನು ಎಂಬ ಪ್ರಶ್ನೆಗಳು ನಿಜವಾದ ಕಲಾವಿದನೊಬ್ಬನ ಆಂತರ್ಯವನ್ನು ತೆರೆದಿಡುತ್ತವೆ. ಹೀಗೆ ವಿಭಿನ್ನ ನೆಲೆಗಟ್ಟುಗಳಲ್ಲಿ ಚರ್ಚಿಸುತ್ತಾ ಸಾಗುವ ನಾಟಕವು ಎಲ್ಲ ಕಬಂಧಬಾಹುಗಳ ಬೇಲಿಗಳನ್ನು ಕಿತ್ತೊಗೆದು ಮನುಷ್ಯರಾಗಿ ಬದುಕುವ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

ನಾಟಕದಲ್ಲಿ ಬಳಸಲಾದ ಸಾಕಷ್ಟು ರಂಗಪರಿಕರಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿದವು. ಮಾರುಕಟ್ಟೆಯ ದೃಶ್ಯ, ಹಿನ್ನೆಲೆ ಕಾವ್ಯಕ್ಕೆ ಕಲಾಕೃತಿಗಳ ಬಳಕೆ ಹಾಗೂ ಮನೆಗಳ ದೃಶ್ಯ ಬದಲಾವಣೆಗಳು ಎಲ್ಲಿಯೂ ಸಮಯದ ಅಂತರವಿಲ್ಲದೆ ಮೂಡಿಬಂದವು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ನಾಟಕವು ಪ್ರೇಕ್ಷಕರ ಮನ ಕಲಕುವಲ್ಲಿ ಯಶಸ್ವಿಯಾಯಿತು.
ಪಂಡಿತ್ ನಾರಾಯಣ್ ಹಕ್ಸರ್, ರೋಶ್ನಿ, ಝರೀನಾ, ಮಹಮ್ಮದ್, ಇಸ್ಮಾಯಿಲ್, ರಶೀದ್ ಮಿಯಾ, ಮಾವುಜೀ, ಜುಬೇದಾ ಸೇರಿದಂತೆ ವಿವಿಧ ಪಾತ್ರಗಳು ಹಾಗೂ ಮೂವರು ಭಯೋತ್ಪಾದಕರ ಪಾತ್ರಗಳ ಮೂಲಕ ಗುಂಡಿನ ದಾಳಿಯ ಭಯದ ನೆರಳಿನಲ್ಲಿ ವಿಲವಿಲ ಒದ್ದಾಡುವ ಬದುಕನ್ನು ನಾಟಕ ಕಟ್ಟಿಕೊಡುತ್ತದೆ. ಆಶಾಭಾವನೆಯ ಕಾವ್ಯ ಪರಿಕಲ್ಪನೆಯೊಂದಿಗೆ ಹೊಸ ಬೆಳಕಿನ ಹುಡುಕಾಟವನ್ನು ಮುಂದಿಟ್ಟಿದೆ.

ರಂಗ ವಿನ್ಯಾಸ: ಹೆಚ್.ಕೆ. ದ್ವಾರಕನಾಥ್, ಮೈಸೂರು. ಸಂಗೀತ: ಶೋಧನ್ ಎರ್ಮಾಳ್. ಸಾಂಗತ್ಯ: ನವನೀತ್, ಚಿರಾಗ್, ವರ್ಷ. ಬೆಳಕು: ಪವೀಣ್ ಜಿ. ಕೊಡವೂರು, ನಿಖಿಲ್ ಮೈಂದನ್. ಪ್ರಸಾಧನ: ಜಗದೀಶ್ ಚೆನ್ನಂಗಡಿ. ವಸ್ತ್ರ ವಿನ್ಯಾಸ: ಪ್ರಜ್ಞಾಶ್ರೀ. ನಿರ್ವಹಣೆ: ಕಾರ್ತಿಕ್ ಪ್ರಭು.
ಪಾತ್ರಧಾರಿಗಳಾಗಿ ಅಕ್ಷತ್ ಅಮೀನ್, ಧೃತಿ ಸಂತೋಷ್, ಪ್ರಜ್ಞಾಶ್ರೀ, ರಾಧಿಕಾ ದಿವಾಕರ್, ನಾಗೇಶ್ ಪ್ರಸಾದ್, ಮುರುಗೇಶ್, ವಿನಯ್ ಕಲ್ಮಾಡಿ, ಕಾವ್ಯ, ಸೌಭಾಗ್ಯ ಲಕ್ಷ್ಮೀ, ಚಂದ್ರಕಾಂತ್ ಕಲ್ಮಾಡಿ, ಹರೀಶ್ ಅಂಬಲ್ಪಾಡಿ, ಕಾರ್ತಿಕ್ ಪ್ರಭು, ಬಾರ್ಗವ್, ಕೌಶಿಕ್ ಭಂಡಾರಿ, ಹರೀಶ್ ಕಲ್ಯಾಣಪುರ ಹಾಗೂ ಗಣೇಶ್ ಸಗ್ರಿ ಸೇರಿದಂತೆ ದೊಡ್ಡ ತಂಡ ‘ಈದಿ’ ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸಿತು.

ಗೊರೂರು ಅನಂತರಾಜು, ಹಾಸನ
ಮೊಬೈಲ್: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಹಾಸನ – 573201
