ಶ್ಲೋಕ – 06
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ॥೬॥
ನ ತತ್ ಭಾಸಯತೇ ಸೂರ್ಯಃ ನ ಶಶಾಂಕಃ ನ ಪಾವಕಃ ।
ಯತ್ ಗತ್ವಾ ನ ನಿವರ್ತಂತೇ ತತ್ ಧಾಮ ಪರಮಮ್ ಮಮ—ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ.
ಇದೇ ರೀತಿಯ ವಿವರಣೆ ಕಠೋಪನಿಷತ್ತಿನಲ್ಲಿ ಬಂದಿದೆ. ಅದರ ಸಾರವನ್ನು ಕೃಷ್ಣ ಇಲ್ಲಿ ಹೇಳಿದ್ದಾನೆ. ಕಠೋಪನಿಷತ್ತಿನಲ್ಲಿ ಹೇಳುವಂತೆ:
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾಂತಿ ಕುತೋಽಯಮಗ್ನಿಃ .
ತಮೇವ ಭಾಂತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ ||೧೫||
“ಭಗವಂತನನ್ನು ಸೂರ್ಯ ಬೆಳಗಿಸುವುದಿಲ್ಲ, ಬೆಳದಿಂಗಳಾಗಲಿ, ಅಗ್ನಿಯ ಬೆಳಕಾಗಲಿ ಆತನನ್ನು ಬೆಳಗಿಸಲಾರದು” ಎನ್ನುತ್ತಾನೆ ಕೃಷ್ಣ. ಇಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಪ್ರತೀಕವನ್ನು ಕೃಷ್ಣ ಉದಾಹರಣೆಯಾಗಿ ತೆಗೆದುಕೊಂಡಿದ್ದಾನೆ. ನಾವು ಸೂರ್ಯನಲ್ಲಿ ಗಾಯತ್ರಿಯನ್ನು ಉಪಾಸನೆ ಮಾಡುತ್ತೇವೆ; ಚಂದ್ರಮಂಡಲ ಮಧ್ಯಸ್ಥನಾಗಿ ಭಗವಂತನನ್ನು ಧನ್ವಂತರಿಯಲ್ಲಿ ಪೂಜಿಸುತ್ತೇವೆ; ಭೂಲೋಕದಲ್ಲಿ ಭಗವಂತನ ಆರಾಧನೆ ಅಗ್ನಿ ಮುಖದಲ್ಲಿ. ಇಲ್ಲಿ ಕೃಷ್ಣ ಕೊಡುತ್ತಿರುವ ಎಚ್ಚರ ಏನೆಂದರೆ –ಇವೆಲ್ಲವೂ ಬೆಳಕಿನ ಪ್ರತೀಕ ಮಾತ್ರ. ಇವು ನೇರವಾಗಿ ನಮಗೆ ಭಗವಂತನನ್ನು ತೋರಿಸಲಾರವು. ಭಗವಂತನನ್ನು ಕಾಣಲು ನಾವು ನಮ್ಮೊಳಗಿನ ಸ್ವರೂಪಭೂತವಾದ ಅಂತಃಜ್ಯೋತಿಯನ್ನು ಬಳಸಬೇಕು. ಬೃಹದಾರಣ್ಯಕ ಉಪನಿಷತ್ತಿನಲ್ಲಿ(ಅ-೦೪) ಜನಕ ಮತ್ತು ಯಾಜ್ಞವಲ್ಕ್ಯರ ನಡುವಿನ ಸಂಭಾಷಣೆಯಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ತೆರೆದಿಡಲಾಗಿದೆ:
ಯಾಜ್ಞವಲ್ಕ್ಯ, ಕಿಮ್ ಜ್ಯೋತಿರಯಂಪುರುಷಃ ಇತಿ | ಆದಿತ್ಯ ಜ್ಯೋತಿಃ, ಸಮ್ರಾಡ್, ಇತಿ ಹೋವಾಚಾದಿತ್ಯೇ ನೈವಾSಯಂ ಜ್ಯೋತಿಷಾಸ್ತೇ, ಪಲ್ಯಯತೇ, ಕರ್ಮ ಕುರುತೇ, ವಿಪಲ್ಯಯೇತ್ ಇತಿ | ಏವಮೇವೈ ತದ್ ಯಾಜ್ಞವಲ್ಕ್ಯ ||೪-೨|| -ಇಲ್ಲಿ ಜನಕ ಯಾಜ್ಞವಲ್ಕ್ಯನಲ್ಲಿ ಕೇಳುತ್ತಾನೆ: “ಈ ಪ್ರಪಂಚದಲ್ಲಿ ಜೀವರು ತಮ್ಮ ಕಾರ್ಯ ನಿರ್ವಹಣೆ ಮಾಡಲು ಸಹಾಯಕವಾದ ಬೆಳಕು ಯಾವುದು” ಎಂದು. ಇದಕ್ಕೆ ನೇರವಾಗಿ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ “ ಸೂರ್ಯನ ಪ್ರಕಾಶ” ಎಂದು.
ಅಸ್ತಮಿತ ಆದಿತ್ಯೇ ಯಾಜ್ಞವಲ್ಕ್ಯ, ಕಿಮ್ ಜ್ಯೋತಿರೇವಾಯಂ ಪುರುಷಃ ಇತಿ | ಚಂದ್ರಮೇವಾಸ್ಯ ಜ್ಯೋತಿರ್ ಭವತಿ, ಚಂದ್ರಮಾಸೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ಏವಮೇವೈ ತದ್ ಯಾಜ್ಞವಲ್ಕ್ಯ||೪-೩|| –ಸೂರ್ಯ ಪ್ರಕಾಶ ಇಲ್ಲದೆ ಇದ್ದಾಗ ಜೀವರು ಯಾವ ಬೆಳಕಿನಿಂದ ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದಾಗ-ಯಾಜ್ಞವಲ್ಕ್ಯ ಹೇಳುತ್ತಾನೆ: “ಚಂದ್ರನ ಬೆಳಕಿನಿಂದ” ಎಂದು.
ಅಸ್ತಮಿತ ಆದಿತ್ಯೇ, ಯಾಜ್ಞವಲ್ಕ್ಯ,ಚಂದ್ರಮಸ್ಯSಸ್ತಮಿತೇ, ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ಅಗ್ನಿರ್ ಎವಾಸ್ಯ ಜ್ಯೋತಿರ್ ಭವತಿ, ಅಗ್ನಿನೈವಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ಏವಮೇವೈ ತದ್ ಯಾಜ್ಞವಲ್ಕ್ಯ||೪-೪||. ಸೂರ್ಯ ಚಂದ್ರ ಇಲ್ಲದಾಗ ಯಾವ ಬೆಳಕು ಎನ್ನುವ ಪ್ರಶ್ನೆಗೆ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ: “ಬೆಂಕಿಯ ಪ್ರಕಾಶದಿಂದ” ಎಂದು.
ಅಸ್ತಮಿತ ಆದಿತ್ಯೇ, ಯಾಜ್ಞವಲ್ಕ್ಯ,ಚಂದ್ರಮಸಿ ಅಸ್ತಮಿತೇ,ಶಾಂತೇSಗ್ನೌ ,ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ವಾಗ್ ಎವಾಸ್ಯ ಜ್ಯೋತಿರ್ ಭವತಿ ವಾಚೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತಿ ತಸ್ಮಾದ್ವೈ ,ಸಮ್ರಾಡ್, ಅಪಿ ಯತ್ರ ಪಾಣಿರ್ನ ವಿನಿರ್ಜ್ಞಾಯತೇ ,ಅಥ ಯತ್ರ ವಾಗುಚ್ಛಾರತಿ ಉಪೈವ ತತ್ರ ನ್ಯೇತೀತಿ | ಏವಮೇವೈತದ್ ಯಾಜ್ಞವಲ್ಕ್ಯ||೪-೫|| -ಒಂದು ವೇಳೆ ಸೂರ್ಯ, ಚಂದ್ರ, ಬೆಂಕಿ, ನಕ್ಷತ್ರ- ಯಾವುದೇ ಬೆಳಕು ಇಲ್ಲದಾಗ ಜನರು ಹೇಗೆ ವ್ಯವಹರಿಸುತ್ತಾರೆ ಎಂದಾಗ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ :“ಒಬ್ಬರಿಗೊಬ್ಬರು ಮಾತನಾಡುವ ಮೂಲಕ” ಎಂದು.
ಅಸ್ತಮಿತ ಆದಿತ್ಯೇ ,ಯಾಜ್ಞವಲ್ಕ್ಯ,ಚಂದ್ರಮಸ್ಯಸ್ತಮಿತೇ, ಶಾಂತೇSಗ್ನೌ ,ಶಾಂತಾSಯಾಂ ವಾಚಿ, ಕಿಮ್ ಜ್ಯೋತಿರೇವಾಯಂ ಪುರುಷ ಇತಿ | ಆತ್ಮೈವಾಸ್ಯ ಜ್ಯೋತಿರ್ಭವತಿ, ಆತ್ಮನೈವಾಯಂ ಜ್ಯೋತಿಷಾಸ್ತೇ ಪಲ್ಯಯತೇ ಕರ್ಮ ಕುರುತೇ ವಿಪಲ್ಯಯೇತ್ ಇತಿ ||೪-೬|| ಎಲ್ಲ ಬೆಳಕೂ ಇಲ್ಲದಾಗ, ಯಾರೂ ಜೊತೆಯಲ್ಲಿ ಇಲ್ಲದಾಗ ಯಾವ ಬೆಳಕು ನಮಗೆ ಶಕ್ತಿ ಎನ್ನುವ ಪ್ರಶ್ನೆಗೆ ಯಾಜ್ಞವಲ್ಕ್ಯ ಉತ್ತರಿಸುತ್ತಾನೆ “ಆತ್ಮ ಜ್ಯೋತಿ” ಎಂದು.
ಮೇಲ್ನೋಟಕ್ಕೆ ಈ ಸಂಭಾಷಣೆಯನ್ನು ನೋಡಿದರೆ ನಮಗೆ ಏನೂ ತಿಳಿಯುವುದಿಲ್ಲ. ಆದರೆ ಇದರಲ್ಲಿ ಪ್ರಾಚೀನರು ಅದೆಷ್ಟು ವಿಚಾರವನ್ನು ತುಂಬಿದ್ದಾರೆ. ನಾವು ನಮ್ಮ ಅಂತರಂಗದಲ್ಲಿನ ಆತ್ಮಜ್ಯೋತಿಯ ಪರಿಚಯವಿಲ್ಲದೆ ಕೇವಲ ಹೊರ ಪ್ರಪಂಚದಲ್ಲಿ ಭೌತಿಕ ಬೆಳಕಿನಲ್ಲಿ ಭಗವಂತನನ್ನು ಹುಡುಕುವುದರಿಂದ ಆತ ನಮಗೆ ಸಿಗಲಾರ. ಆತನನ್ನು ಯಾವ ಭೌತಿಕ ಬೆಳಕೂ ಬೆಳಗಲಾರದು. ಆತ ಬೆಳಕುಗಳ ಬೆಳಕು. ಆತನನ್ನು ಕಾಣಲು ನಾವು ನಮ್ಮ ಸ್ವರೂಪದಲ್ಲಿನ ಆತ್ಮಜ್ಯೋತಿಯನ್ನು ಬಳಸಬೇಕು. ಸೂರ್ಯ, ಚಂದ್ರ, ಅಗ್ನಿಯನ್ನು ಭಗವಂತನ ಪ್ರತೀಕವಾಗಿ ಬಳಸಿ ನಮ್ಮ ಅಂತರಂಗದ ಜ್ಯೋತಿಯನ್ನು ನಾವು ಜಾಗೃತಗೊಳಿಸಿಕೊಳ್ಳಬೇಕು.
ಯಾವ ಸ್ಥಾನದಲ್ಲಿ ಭಗವಂತ ಸದಾ ಜ್ಞಾನಿಗಳಿಗೆ ಗೋಚರವಾಗುತ್ತಾನೋ ಅದು “ಪರಮಧಾಮ” ಅದೇ ಮೋಕ್ಷ. ಅಲ್ಲಿ ಸೂರ್ಯನಾಗಲಿ, ಚಂದ್ರನಾಗಲಿ, ಅಗ್ನಿಯಾಗಲಿ ಬೆಳಕಲ್ಲ. ಈ ಪರಮಧಾಮದಿಂದಲೇ ಸೂರ್ಯ, ಚಂದ್ರ, ಅಗ್ನಿ ಬೆಳಕು ಪಡೆಯುವುದು. ಆತ್ಮಜ್ಯೋತಿಯನ್ನು ಗುರುತಿಸಿ, ಆತ್ಮದಲ್ಲಿನ ಪರಮಾತ್ಮನನ್ನು ಕಂಡುಕೊಂಡವ ಎಂದೂ ಮರಳಿಬಾರದ ಈ ಪರಮಧಾಮವನ್ನು ಸೇರುತ್ತಾನೆ.
