1947ನೇ ಇಸವಿ ಆಗಸ್ಟ್ 15ನೇ ತಾರೀಖು ಭಾರತವನ್ನು ಒಂದು ಸ್ವತಂತ್ರ ದೇಶವೆಂದು ಘೋಷಿಸಲಾಯಿತು. ಅಂದು ಭಾರತವು ಪಾಶ್ಚಾತ್ಯರ ದಬ್ಬಾಳಿಕೆಯಿಂದ ಮುಕ್ತವಾಯಿತು. ಮಹಾತ್ಮ ಗಾಂಧಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಪ್ರಭಾವಿತರಾಗಿ ದೇಶದಾದ್ಯಂತ ಲಕ್ಷಾಂತರ ದೇಶಪ್ರೇಮಿಗಳು ಆ ದಿನಕ್ಕಾಗಿ ದುಡಿದಿದ್ದರು, ಸೆರೆವಾಸ ಅನುಭವಿಸಿದ್ದರು, ಅಪಾರ ತ್ಯಾಗಗಳನ್ನು ಮಾಡಿದ್ದರು. 1947ರ ಆಗಸ್ಟ್ 15ರಂದು ಅವರ ಎಲ್ಲ ತ್ಯಾಗ ಮತ್ತು ಸಹಿಸಿದ ಕಷ್ಟಗಳಿಗೆ ಫಲ ಲಭಿಸಿತು.
1947ರ ಆಗಸ್ಟ್ 14ರಂದು ಸರಿಯಾಗಿ ಮಧ್ಯರಾತ್ರಿ 12 ಗಂಟೆಗೆ ಭಾರತ ಸ್ವತಂತ್ರ ದೇಶ (Sovereign Nation) ಎಂದು ಘೋಷಿಸಲಾಯಿತು. ಮಧ್ಯರಾತ್ರಿಯಲ್ಲಿ ಆಲ್ ಇಂಡಿಯಾ ರೇಡಿಯೋ, ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳ ಮೂಲಕ ಈ ಸುದ್ದಿ ದೇಶದಾದ್ಯಂತ ಕೆಲವೇ ನಿಮಿಷಗಳಲ್ಲಿ ಹರಡಿತು. ಜನರು ಖುಷಿಯಿಂದ ಹುಚ್ಚೆದ್ದು ಬೀದಿ ಬೀದಿಗಳಲ್ಲಿ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾ, ಕುಣಿಯುತ್ತಾ ಮೆರವಣಿಗೆ ಹೊರಟು ತಮ್ಮ ಆತ್ಮಸಂತೋಷವನ್ನು ತೋರಿಸಿದರು ಮತ್ತು ಹಂಚಿಕೊಂಡರು.
“ಭಾರತ ಮಾತಾಕಿ ಜೈ”, “ಮಹಾತ್ಮ ಗಾಂಧೀಕೀ ಜೈ”, “ಜವಾಹರಲಾಲ್ ನೆಹರೂಕೀ ಜೈ”, “ಸರ್ದಾರ್ ವಲ್ಲಭಭಾಯಿ ಪಟೇಲ್ಕೀ ಜೈ” ಇತ್ಯಾದಿ ಜಯಘೋಷಗಳ ಕೂಗು ಮುಗಿಲನ್ನೇ ಮುಟ್ಟುತ್ತಿತ್ತು. ಹಳ್ಳಿ ಹಳ್ಳಿಗಳಲ್ಲಿಯೂ, ದೊಡ್ಡ ಮೈಸೂರು, ಬೆಂಗಳೂರು, ದೆಹಲಿ, ಕಲ್ಕತ್ತಾ ಮುಂತಾದ ನಗರಗಳಲ್ಲಿಯೂ ಈ ಜಯಘೋಷದ ಪ್ರತಿಧ್ವನಿ ವಾತಾವರಣವನ್ನು ಸಂಪೂರ್ಣವಾಗಿ ಮುಳುಗಿಸಿತು.
ಇಂತಹ ಪವಿತ್ರ ಘಳಿಗೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಸಮಸ್ತವನ್ನೂ ಮುಡುಪಿಟ್ಟುಕೊಂಡು ಹೋರಾಡಿದ ಮಹಾತ್ಮ ಗಾಂಧಿ ಮತ್ತು ಇತರ ಮುಖಂಡರು ಎಲ್ಲಿದ್ದರು?
ಅವರು ಖುಷಿಯಿಂದ ಬೀದಿಯಲ್ಲಿ ಮೆರವಣಿಗೆ ಹೊರಟಿರಲಿಲ್ಲ. ಮಿಠಾಯಿ ಹಂಚಿ ತಾವೂ ತಿನ್ನುತ್ತಿರಲಿಲ್ಲ. ಗಾಂಧೀಜಿ ಮತ್ತು ಅವರ ಕೆಲವು ನಿಕಟ ಅನುಯಾಯಿಗಳಾದ ಜವಾಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್ ಮುಂತಾದವರು ಕಲ್ಕತ್ತಾದಲ್ಲಿದ್ದರು. ಗಾಂಧೀಜಿ ಅವರು ದೇಶದಲ್ಲಿ ಶಾಂತಿ, ಅಹಿಂಸೆ ಮತ್ತು ಹಿಂದೂ-ಮುಸ್ಲಿಂ ಸೌಹಾರ್ದಕ್ಕಾಗಿ ಉಪವಾಸದಲ್ಲಿ ತೊಡಗಿದ್ದರು. ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದರು!!
ಭಾರತ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ಕೋಟ್ಯಂತರ ಪ್ರಜೆಗಳು, ಯುವಕರು, ಮಧ್ಯವಯಸ್ಕರು, ಮುದುಕರು, ಸ್ತ್ರೀ-ಪುರುಷರಾದಿಯಾಗಿ ಎಲ್ಲರೂ ಕಿಚ್ಚಿನಿಂದ ತಮ್ಮ ದೇಹವನ್ನು ಬ್ರಿಟಿಷರ ಲಾಠಿ, ಬಂದೂಕುಗಳಿಗೆ ಸ್ವಇಚ್ಛೆಯಿಂದ ಒಡ್ಡಿದರು. ಗಾಂಧೀಜಿಯವರ ತತ್ವದ ಪ್ರಕಾರ, ವಾಪಸ್ ಹೊರಡುವ ಪ್ರಶ್ನೆಯೇ ಇಲ್ಲ ಎಂದು ತಿಳಿದಿದ್ದ ಭಾರತದ ಸ್ವಾತಂತ್ರ್ಯದ ಭವ್ಯ ಕನಸಿನಲ್ಲಿ ಪ್ರಜೆಗಳು ತಮ್ಮ ಸಮಸ್ತವನ್ನೂ ತ್ಯಾಗ ಮಾಡಲು ಮುಂದಾದರು.
ಈ ದೇಶಭಕ್ತರು ಕಾರಾಗೃಹವಾಸಕ್ಕೆ ಹೆದರಲಿಲ್ಲ; ಬ್ರಿಟಿಷರ ಗುಂಡಿಗೂ ಹೆದರಲಿಲ್ಲ. ಇದು ಗಾಂಧೀಜಿಯವರ ತಪಸ್ಸಿನ ಆತ್ಮಶಕ್ತಿ.ಗಾಂಧೀಜಿಯವರನ್ನು ಹಿಂಬಾಲಿಸಿ ಸತ್ಯಾಗ್ರಹಕ್ಕೆ ಧುಮುಕಿದರೆ ವಾಪಸ್ ಜೀವಂತವಾಗಿ ಬರುವುದು ಸಂದೇಹ ಎಂದು ತಿಳಿದಿದ್ದರೂ ಕೋಟ್ಯಂತರ ಜನರು ಸತ್ಯಾಗ್ರಹದಲ್ಲಿ ಭಾಗವಹಿಸಲು ಮುಂದಾದರು. ಜಗತ್ತಿನ ಚರಿತ್ರೆಯಲ್ಲಿಯೇ ಇಂತಹ ಅದ್ಭುತ ಘಟನೆ ಎಲ್ಲಿಯೂ ನಡೆದಿಲ್ಲ.
ಹಾಗಾದರೆ ಎಲ್ಲವೂ ಆರಾಮವಾಗಿ, ಸುಭಿಕ್ಷವಾಗಿ, ಶಾಂತಿ, ಸೌಹಾರ್ದ ಮತ್ತು ಪ್ರೀತಿಯಿಂದ ಮುಗಿಯಿತು ಎನ್ನುವ ಹಾಗಿಲ್ಲ. ದೇಶ ವಿಭಜನೆಯ ಪ್ರಶ್ನೆ ಎದುರಾಯಿತು. ಪಂಜಾಬ್, ಬಂಗಾಳಗಳಲ್ಲಿ ಹಿಂದೂ-ಮುಸ್ಲಿಂ ಕೋಮುವಾದ ಮತ್ತು ಜಾತೀಯ ಘರ್ಷಣೆಗಳಿಂದ ಹಿಂಸೆಯ ಕಿಡಿಗಳು ಹೊತ್ತಿಕೊಂಡು, ಗಾಂಧೀಜಿಯವರ ಮನಸ್ಸಿಗೆ ತೀವ್ರ ದುಃಖವುಂಟು ಮಾಡಿದವು. ಅವರು ಮತ್ತೆ ಉಪವಾಸ ಪ್ರಾರಂಭಿಸಿದರು.
ಈ ಬಾರಿ ಬ್ರಿಟಿಷರನ್ನು ಎದುರಿಸುವುದಕ್ಕಲ್ಲ; ತಮ್ಮ ಪ್ರೀತಿಯ ಭಾರತೀಯರ ಮನಸ್ಸಿನ ಆತ್ಮಸಂಧಾನಕ್ಕಾಗಿ. ಹೀಗೆ ದೇಶದಲ್ಲಿ ಅಶಾಂತಿ ಉಂಟಾದಾಗ ಪ್ರತಿ ಮನೆಯಲ್ಲೂ ಅವರವರದೇ ಆದ ಪರಿಸ್ಥಿತಿ, ಪ್ರಶ್ನೆಗಳು ಹುಟ್ಟಿಕೊಂಡವು.
ವಿದ್ಯಾರ್ಥಿಗಳಲ್ಲಿ ಅನೇಕರು ಶಾಲಾ-ಕಾಲೇಜುಗಳನ್ನು ಬಿಟ್ಟು ಚಳವಳಿಗೆ ಸೇರಿದ್ದರು. ಅವರ ವಿದ್ಯಾಭ್ಯಾಸ ಕಡೆಗಣಿಸಲ್ಪಟ್ಟಿದ್ದರಿಂದ ಅವರು ಯಾವ ತರಗತಿಗೆ ಸೇರಿ ಮುಂದುವರಿಯಬೇಕು ಎಂಬುದನ್ನು ತೀರ್ಮಾನಿಸಬೇಕಾಗಿತ್ತು. ಇನ್ನು ಕೆಲವರು ಚಳವಳಿಯಲ್ಲಿ ಭಾಗವಹಿಸಿ ತಮ್ಮ ಜೀವವನ್ನೇ ಕಳೆದುಕೊಂಡರು. ಅವರ ಹೆಂಡತಿಯರು ಮತ್ತು ಮಕ್ಕಳ ಗತಿಯೇನು ಎಂದು ತಿಳಿಯದೆ ಆತಂಕದಲ್ಲಿದ್ದರು.
ಮತ್ತೆ ಕೆಲವರು ತಾವು ಸತ್ಯಾಗ್ರಹದಲ್ಲಿ ಭಾಗವಹಿಸದಿದ್ದರೂ, ಕಾರಾಗೃಹಕ್ಕೂ ಹೋಗದಿದ್ದರೂ, ಮನೆಯಲ್ಲಿಯೇ ಕುಳಿತು, “ನಾನೂ ಸತ್ಯಾಗ್ರಹ ಮಾಡಿದ್ದೆ; ಲಾಠಿ ಏಟು ತಿಂದಿದ್ದೆ” ಎಂದು ಸುಳ್ಳು ಹೇಳತೊಡಗಿದರು. ಮನೆಗೊಂದು ಕಥೆಯಾಯಿತು. ನಮ್ಮ ಗೋರೂರು ಮನೆಯಲ್ಲೂ ಒಂದು ಕಥೆಯಾಯಿತು. ಸ್ವಾತಂತ್ರ್ಯ ಬಂದಾಗ ನಮ್ಮ ತಂದೆ ಡಾ. ಗೋರೂರು ಅವರು ಇನ್ನೂ ಸೆರೆಮನೆಯಲ್ಲಿಯೇ ಇದ್ದರು. “ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅವರಿಗೆ ಸ್ವಾತಂತ್ರ್ಯ ಬಂದಿರಲಿಲ್ಲ” ಎಂಬ ಮಾತು ಬಳಕೆಯಲ್ಲಿದೆ. 1947ರ ಆಗಸ್ಟ್ ತಿಂಗಳಲ್ಲಿ ನನ್ನ ದೊಡ್ಡ ಅಣ್ಣ ರಾಮಚಂದ್ರ ತುಮಕೂರಿನಲ್ಲಿ ಇಂಟರ್ಮೀಡಿಯಟ್ ಓದುತ್ತಿದ್ದ. ಅವನಿಗೆ ಆಗ 17 ವರ್ಷ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕಾಗಿತ್ತು. ಅದಕ್ಕಾಗಿ ಎಲ್ಲರೂ ಕಾತುರರಾಗಿದ್ದರು.
ಆದರೆ ಅದಕ್ಕೆ ಒಂದು ಅಡಚಣೆ ಬಂದಿತು. ಅದೇನೆಂದರೆ, ಅನೇಕ ಮಹಾರಾಜರುಗಳು ತಮ್ಮ ಆಳ್ವಿಕೆಯನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಸೇರಲು ಇಷ್ಟಪಡಲಿಲ್ಲ. ಆಗ ಮತ್ತೊಂದು ಚಳವಳಿ ಪ್ರಾರಂಭವಾಯಿತು. ಈ ಚಳವಳಿಗೆ “ಚಲೋ ಪ್ಯಾಲೆಸ್” ಎಂದು ಹೆಸರು. ಈ ಚಳವಳಿಯನ್ನು ರಾಜರುಗಳ ಮನಸ್ಸನ್ನು ಬದಲಾಯಿಸುವುದಕ್ಕಾಗಿ ನಡೆಸಲಾಯಿತು.ಇದರಲ್ಲಿ ಡಾ. ಗೋರೂರು ಅವರ ಮಗ ರಾಮಚಂದ್ರ ಭಾಗವಹಿಸುತ್ತಿದ್ದ.
1947ರ ಸೆಪ್ಟೆಂಬರ್ 14ರಂದು ಪೊಲೀಸರು ತುಮಕೂರಿನಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲಿಬಾರ್ ನಡೆಸಿದರು. ಆ ದಿನ ರಾಮಚಂದ್ರನೂ ಸೇರಿದಂತೆ ನಿರಾಯುಧರಾಗಿ ಅಹಿಂಸಾ ಚಳವಳಿಯಲ್ಲಿ ಶಾಂತವಾಗಿ ತೊಡಗಿದ್ದ ಮೂವರು ಕನ್ನಡಿಗರನ್ನು ಬ್ರಿಟಿಷ್ ಪೊಲೀಸರು ವಿನಾಕಾರಣ ಗುಂಡು ಹಾರಿಸಿ ಕೊಂದರು.ಇಂದಿಗೂ ಆ ಸ್ಥಳದಲ್ಲಿ ಈ ಮೂವರ ಹೆಸರುಗಳನ್ನು ಹೊತ್ತ ಒಂದು ಶಾಸನವಿದೆ. ಈ ಪುಣ್ಯಸ್ಥಳಕ್ಕೆ “ಸ್ವಾತಂತ್ರ್ಯ ಚೌಕ” ಅಥವಾ “Freedom Circle” ಎಂದು ಹೆಸರಿಸಲಾಗಿದೆ.
ಇದಾದ ಮೇಲೆ 1947ರ ಅಕ್ಟೋಬರ್ 14ರಂದು ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತಮ್ಮ ಒಪ್ಪಿಗೆಯನ್ನು ಘೋಷಿಸಿದರು. ಅದಾದ ಮೇಲೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಕರ್ನಾಟಕದ ಮೊಟ್ಟಮೊದಲ ಮುಖ್ಯಮಂತ್ರಿ ಎಂಬ ಗೌರವ ಶ್ರೀ ಕೆ.ಸಿ. ರೆಡ್ಡಿಯವರಿಗೆ ಸಲ್ಲುತ್ತದೆ.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಕಷ್ಟ-ನಷ್ಟಗಳನ್ನು ಅನುಭವಿಸಿದ ಮತ್ತು ಪ್ರಾಣವನ್ನೇ ಕೊಟ್ಟ ಅನೇಕ ದೇಶಭಕ್ತರಿಗೆ ಅವರ ನಿಸ್ವಾರ್ಥ ಸೇವೆಗಾಗಿ ಈ ದಿನ ನಮ್ಮ ನಮನಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಲೇಖಕಿ: ಗೋರೂರು ವಸಂತಿ ಮೂರ್ತಿ
