ತುಮಕೂರು: ನಗರದ ಬಾರ್ ಲೈನ್ರಸ್ತೆಯಲ್ಲಿರುವ ಮೆಕ್ಕಾ ಮಸೀದಿಯಲ್ಲಿ ಹಜರತ್ ಮುಹಮ್ಮದ್ ಪೈಗಂಬರ್ಅವರ 1501 ಜನ್ಮ ಜಯಂತಿ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು.ಮೆಕ್ಕಾ ಮಸೀದಿಯ ಅಧ್ಯಕ್ಷರಾದ ಡಾ.ಎಸ್.ಷಫಿಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ಧ ಪ್ರಾರ್ಥನೆಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್.ಕೆ.ವಿ ಅವರುಗಳು ಪಾಲ್ಗೊಂಡು ಈದ್ ಮಿಲಾದ್ ಹಬ್ಬದ ಶುಭಕೋರಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಡಾ.ಎಸ್.ರಫೀಕ್ಅಹಮದ್,ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಸುಮಾರು 1,500ಕ್ಕೂ ಹೆಚ್ಚು ವರ್ಷಗಳ ಹಿಂದೆ, ನಮ್ಮ ಪ್ರವಾದಿಗಳ ಕಾಲದಲ್ಲಿ ಕೊಲ್ಲಿ,ಅರೇಬಿಯಾ ಪ್ರದೇಶಗಳಲ್ಲಿ ಅಜ್ಞಾನ ಹಾಗೂ ಅನ್ಯಾಯದ ಕತ್ತಲೆ ಇತ್ತು. ಆ ಕಾಲದಲ್ಲಿ ಬಡವರ ಮನೆಯಾಗಿರಲಿ, ಶ್ರೀಮಂತರ ಮನೆಯಾಗಿರಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರನ್ನು ಜೀವಂತವಾಗಿ ಹೂಳುವಂತಹ ಕ್ರೂರ ಪದ್ಧತಿ ಇತ್ತು, ಸಮಾನತೆ ಇರಲಿಲ್ಲ.ಇಂತಹ ಸಂದರ್ಭದಲ್ಲಿ ಪ್ರವಾದಿಗಳು ಜನಿಸಿ, 40 ವರ್ಷಗಳ ಕಾಲ ಸಾಮಾನ್ಯರಂತೆ ಧರ್ಮದ ಹಾದಿಯಲ್ಲಿ ನಡೆದು, ಧರ್ಮದ ಸರಿಯಾದ ಮಾರ್ಗವನ್ನು ಸಾರಿದರು. ಪ್ರವಾದಿಯವರ ನಡೆ-ನುಡಿ (ಸುನ್ನತ್ ಮತ್ತು ಹದೀಸ್) ಹಾಗೂ ಕುರಾನ್ ಶರೀಫ್ ನೀಡುವ ಸಂದೇಶಗಳು ಸದಾ ಮಾರ್ಗದರ್ಶಿಯಾಗಿವೆ.ಪ್ರವಾದಿಯವರ ಸಂದೇಶಗಳ ಮೂಲಕ ರಾಜ್ಯದಲ್ಲಿ ಮತ್ತು ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವ ನೆಲೆಸಲಿ ಎಂದು ಪ್ರಾರ್ಥಿಸಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ,ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ (ಈದ್-ಮಿಲಾದ್) ಪವಿತ್ರ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ನಾಡಿಗೆ ಈದ್ ಮೀಲಾದ್ ಶುಭಾಶಯ ಕೋರಿದರು.ಪ್ರವಾದಿ ಮೊಹಮ್ಮದ್ ಅವರು ಸುಮಾರು 1500 ವರ್ಷಗಳ ಹಿಂದೆ ಬೋಧಿಸಿದ ಶಾಂತಿ, ಸಹನೆ, ಕರುಣೆ ಹಾಗೂ ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ವಿವಿಧ ಧರ್ಮ ಮತ್ತು ಜಾತಿಗಳಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸೌಹಾರ್ದತೆ ಹಾಗೂ ಪ್ರೀತಿಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ದೇವರನ್ನು ಪ್ರಾರ್ಥಿಸುವ ಹಾಗೂ ಭಕ್ತಿಯನ್ನು ವ್ಯಕ್ತಪಡಿಸುವ ಒಂದು ಉತ್ತಮ ಹಾದಿಯಾಗಿದೆ.ಈ ಪವಿತ್ರ ಆಚರಣೆಯಲ್ಲಿ ಮತ್ತು ಸಾರ್ವಜನಿಕರೊಂದಿಗೆ ಭಾಗಿಯಾಗಲು ಸಂತೋಷವಾಗುತ್ತದೆ ಎಂದು ತಿಳಿಸಿದರು. ಮಕ್ಕಾ ಮಸೀದಿಯ ಅಧ್ಯಕ್ಷರು ಮಾಜಿ ಶಾಸಕರಾದ ಡಾ.ಎಸ್.ಷಫಿ ಅಹಮದ್ ಮಾತನಾಡಿ,ನಮ್ಮ ಕೊನೆಯ ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನವಾದ ಈದ್ ಹಬ್ಬದಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಮ್ಮೊಂದಿಗೆ ಆಗಮಿಸಿ ಹಬ್ಬದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ ಶಾಂತಿ ಮತ್ತು ಸೌಹಾರ್ಧದ ಸಂಕೇತವಾದ ಈದ್ ಹಬ್ಬ ನಾಡಿನ ಜನರಿಗೆ ಒಳ್ಳೆಯದನ್ನು ತರಲಿ ಎಂದರು.
ವರದಿ : ಕೆ ಬಿ ಚಂದ್ರಚೂಡ್
