ಶ್ಲೋಕ – 04
ಡಂಭೋ ದರ್ಪೋ ಅತಿಮಾನಶ್ಚ ಕ್ರೋಧಃ ಪಾರುಷ್ಯಮೇವ ಚ ।
ಅಜ್ಞಾನಂ ಚಾಭಿಜಾತಸ್ಯ ಪಾರ್ಥ ಸಂಪದಮಾಸುರೀಮ್ ॥೪॥
ಡಂಭಃ ದರ್ಪಃ ಅಭಿಮಾನಃ ಚ ಕ್ರೋಧಃ ಪಾರುಷ್ಯಮ್ ಏವ ಚ ।
ಅಜ್ಞಾನಮ್ ಚ ಅಭಿಜಾತಸ್ಯ ಪಾರ್ಥ ಸಂಪದಮ್ ಆಸುರೀಮ್—ಪಾರ್ಥ, ಆಸುರೀ ಸಂಪತ್ತು [ಕೆಟ್ಟ ನಡತೆ] ಹೊತ್ತು ಬಂದವನ ಗುಣಗಳು ಇವು: ಬೂಟಾಟಿಕೆ, ಸೊಕ್ಕು, ಬಿಂಕ, ಸಿಡುಕು, ಒರಟುತನ ಮತ್ತು ತಿಳಿಗೇಡಿತನ.
ಮೇಲೆ ಹೇಳಿದ ಇಪ್ಪಾತ್ತಾರು ದೈವೀಗುಣಕ್ಕೆ ವಿರುದ್ಧವಾಗಿ ಆರು ಆಸುರೀ ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ಹೇಳಿದ್ದಾನೆ:
(೧) ಡಂಭ(ಇಲ್ಲದ್ದನ್ನು ಇದೆ ಎಂದು ತೋರಿಸಿಕೊಳ್ಳುವುದು): ಒಳಗಡೆ ಏನಿಲ್ಲವೋ ಅದು ಇದೆ ಎನ್ನುವಂತೆ ಸುಭಗತನದ ಪ್ರದರ್ಶನ; ಒಳಗಿರುವ ಕೆಟ್ಟತನವನ್ನು ಮುಚ್ಚಿಟ್ಟು ತುಂಬ ಒಳ್ಳೆಯವರ ಹಾಗೆ ಪ್ರದರ್ಶನ ಮಾಡುವುದು, ಇತ್ಯಾದಿ ಡಂಭ ಎನಿಸುತ್ತದೆ. ಇದು ಮೇಲೆ ಹೇಳಿದ ಆರ್ಜವಂ ಎನ್ನುವ ಸದ್ಗುಣದ ವಿರುದ್ಧ ಗುಣ.
(೨) ದರ್ಪ : ಏನು ತಪ್ಪು ಮಾಡಲೂ ಹೇಸದ ಮನೋವೃತ್ತಿ. ಇದು ಹ್ರೀ ಎನ್ನುವ ಸದ್ಗುಣದ ವಿರುದ್ಧ ಗುಣ.
(೩) ಅತಿಮಾನ (Over Estimation of Self): ತನ್ನ ಬಗ್ಗೆ ಅತಿರೇಕದ ಕಲ್ಪನೆ; ನಾನೇ ದೊಡ್ಡ ಮನುಷ್ಯ ಎಂದು ಭ್ರಮಿಸಿಕೊಂಡು ಇನ್ನೊಬ್ಬರಿಗೆ ಅಗೌರವ ತೋರುವುದು; ಎಲ್ಲರೂ ತನ್ನ ಕಾಲನ್ನು ಹಿಡಿಯಬೇಕು ಎಂದು ಅಪೇಕ್ಷಿಸುವುದು-ಇವು ಅತಿಮಾನವೆನಿಸುತ್ತವೆ.
(೪) ಕ್ರೋಧ : ಮನುಷ್ಯ ಬಿಡಬೇಕು ಎಂದರೂ ಬಿಡಲಾಗದ ಕೆಟ್ಟಗುಣ ಕ್ರೋಧ. ಇದು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ದಾರಿತಪ್ಪಿಸುವ ದುರ್ಗುಣ.
(೫) ಪಾರುಷ್ಯ : ಉಗ್ರವಾದ, ಅಸಹ್ಯವಾದ ಮಾತು; ಇನ್ನೊಬ್ಬರನ್ನು ತಾತ್ಸಾರದಿಂದ ಮಾತನಾಡಿಸುವುದು, ಇತ್ಯಾದಿ ಪಾರುಷ್ಯಕ್ಕೆ ಉದಾಹರಣೆ.
(೬) ಅಜ್ಞಾನ : ಮೇಲಿನ ಎಲ್ಲಾ ದುರ್ಗುಣಗಳ ಚಕ್ರವರ್ತಿ ಈ ಅಜ್ಞಾನ. ನಿಜವಾದ ಜ್ಞಾನಿ ಎಂದೂ ಈ ಕೆಟ್ಟ ಗುಣಗಳ ದಾಸನಾಗುವುದಿಲ್ಲ.
ಈ ಎಲ್ಲಾ ಆಸುರೀ ಗುಣಗಳು ನಮ್ಮಲ್ಲಿ ಮನೆ ಮಾಡಿ ನಮ್ಮನ್ನೇ ಹೊರ ಹಾಕುತ್ತವೆ. ಆದ್ದರಿಂದ ಈ ದುರ್ಗುಣಗಳನ್ನು ನಾವು ಮೊದಲು ಹೊರ ಹಾಕಬೇಕು. ಕುರಾನಿನಲ್ಲಿ ಇದನ್ನು- “Drive them out from where you have been driven out” ಎಂದು ಸುಂದರವಾಗಿ ಹೇಳಿದ್ದಾರೆ. ನಿನ್ನನ್ನು ಹೊರಹಾಕಿ, ನಿನ್ನೊಳಗೆ ಕೂತು ನಿನ್ನನ್ನು ಹಾಳು ಮಾಡುತ್ತಿರುವ ಈ ದುರ್ಗುಣಗಳನ್ನು ಮೊದಲು ಹೊರಹಾಕು ಎನ್ನುತ್ತಾರೆ. ಇದನ್ನೇ ವೇದದಲ್ಲಿ ಹೀಗೆ ಹೇಳಿದ್ದಾರೆ: “ಯೊ ಅಸ್ಮಾನ್ ದ್ವೇಷ್ಟಿ ಯಾಮ್ ವಯಮ್ ದ್ವಿಷ್ಟಿಃ” ..||ಅಥರ್ವ ೩-೨೭-೨||- ಅಂದರೆ-“ಯಾರು ನಮ್ಮನ್ನು ದ್ವೇಶಿಸುತ್ತಾರೋ, ಯಾರನ್ನು ನಾವು ದ್ವೇಷ ಮಾಡುತ್ತೇವೋ ಅಂತಹ ಶತ್ರುವನ್ನು ಓದ್ದೊಡಿಸು” ಎಂದರ್ಥ. ಇಲ್ಲಿ ಶತ್ರು ಎಂದರೆ ನಮ್ಮ ಅಂತಃಶತ್ರುಗಳಾದ ಈ ದುರ್ಗುಣಗಳು.
ಈ ಶ್ಲೋಕದಲ್ಲಿ ‘ಪಾರ್ಥ’ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ‘ನಾವು ಈ ದುರ್ಗುಣಗಳಿಂದ ದೂರ ಸರಿದು, ಜ್ಞಾನ ಮಾರ್ಗದಲ್ಲಿ ಸಾಗಿ, ಯಥಾರ್ಥ ಬದುಕನ್ನು ಬದುಕುವ ಪಾರ್ಥರಾಗಬೇಕು’ ಎನ್ನುವ ಸಂದೇಶ ಈ ವಿಶೇಷಣದ ಹಿಂದಿದೆ.
