ನವದೆಹಲಿ: ಸತತ ಐದು ತಿಂಗಳು ನಷ್ಟ ಕಂಡಿದ್ದ ಭಾರತದ stock market ಈಗ ರಬ್ಬರ್ ಬ್ಯಾಂಡ್ ರೀತಿ ಪುಟಿದೆದ್ದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿದಂತೆ ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳು ಇಂದು ಸೋಮವಾರ ಸಖತ್ ಏರಿಕೆ ಕಂಡಿವೆ.
ಬಿಎಸ್ಇ ಸೆನ್ಸೆಕ್ಸ್ ಸಾವಿರಕ್ಕೂ ಅಧಿಕ ಅಂಕಗಳನ್ನು ಗಳಿಸಿದೆ. ನಿಫ್ಟಿ50 ಸೂಚ್ಯಂಕ 300ಕ್ಕೂ ಅಧಿಕ ಅಂಕಗಳನ್ನು ಪಡೆಯಿತು. ಈ ವರ್ಷ (ಜನವರಿಯಿಂದ ಈಚೆ) ಕಂಡಿದ್ದ ನಷ್ಟವೆಲ್ಲವೂ ಈಗ ಭರ್ತಿಯಾಗಿದೆ. ಸತತ ಆರನೇ ಸೆಷನ್ ಮಾರುಕಟ್ಟೆ ಹಸಿರುಬಣ್ಣದಲ್ಲಿ ಅಂತ್ಯಗೊಂಡಿದೆ. ಈ ಗೂಳಿ ಓಟದಲ್ಲಿ ಮಾರುಕಟ್ಟೆ 30 ಲಕ್ಷ ಕೋಟಿ ರೂ ಗಳಿಸಿಬಿಟ್ಟಿದೆ.
ನಿಫ್ಟಿ50 ಇಂಡೆಕ್ಸ್ ಗಳಿಕೆ ಈ ವರ್ಷದಿಂದೀಚೆಗೆ ಮೊದಲ ಬಾರಿಗೆ ಕೆಂಪು ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗಿದೆ. ಅಂದರೆ, ನಷ್ಟದಿಂದ ಲಾಭದ ಹಳಿಗೆ ಬಂದಿದೆ. ಬಿಎಸ್ಇ ಸೆನ್ಸೆಕ್ಸ್ ಈಗಲೂ ಕೂಡ ಕೆಂಪು ಬಣ್ಣದಲ್ಲೇ ಇದೆಯಾದರೂ ಇವತ್ತಿನ ರೀತಿಯಲ್ಲೇ ನಾಳೆಯೂ ಬುಲ್ ರನ್ ಆಗಿಹೋದರೆ ಅದೂ ಕೂಡ ಪಾಸಿಟಿವ್ ಆಗಿ ತಿರುಗುತ್ತದೆ.
ಕುತೂಹಲ ಎಂದರೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಶೇ. 10ರಷ್ಟು ಮಾತ್ರವೇ ಕೆಳಗಿರುವುದು. ಈ ತಿಂಗಳೊಳಗೆ ಈ ಸೂಚ್ಯಂಕಗಳು ಹೊಸ ದಾಖಲೆ ಬರೆಯುವ ಸಂಭವ ಹೆಚ್ಚಿದೆ.
