ಹಾಸನ: ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿರುವ ಬಡ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದ ಮೂಲಸೌಕರ್ಯಗಳಿಲ್ಲದ, ದನದ ಶೆಡ್ನಂತಿರುವ ಅವ್ಯವಸ್ಥಿತ ಕಟ್ಟಡದಲ್ಲಿ ದಿನ ಕಳೆಯುತ್ತಿರುವ ಆರೋಪ ಕೇಳಿಬಂದಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆರರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 172 ವಿದ್ಯಾರ್ಥಿಗಳು ಇಲ್ಲಿ ವಾಸವಾಗಿದ್ದು, ಅವರಲ್ಲಿ 92 ಬಾಲಕರು ಹಾಗೂ 80 ಬಾಲಕಿಯರು ಇದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳೇ ಸಮರ್ಪಕವಾಗಿ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ ಊಟ, ನಿದ್ರೆ ಹಾಗೂ ಪಾಠ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ. ಆರನೇ ತರಗತಿ ವಿದ್ಯಾರ್ಥಿಗಳು ನೆಲದಲ್ಲೇ ಕುಳಿತು ಪಾಠ ಕೇಳುವ ಸ್ಥಿತಿಯೂ ಕಂಡುಬಂದಿದೆ. ಗಾಳಿ-ಬೆಳಕಿನ ಕೊರತೆಯಿರುವ ಕೊಟ್ಟಿಗೆಯಂತಿರುವ ಜಾಗದಲ್ಲಿ ಮಕ್ಕಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಶೌಚಾಲಯಕ್ಕೂ ತೀವ್ರ ಕೊರತೆ
ಶೌಚಾಲಯದ ವ್ಯವಸ್ಥೆಯೂ ಶೋಚನೀಯವಾಗಿದೆ ಎನ್ನಲಾಗಿದೆ. 92 ಬಾಲಕರಿಗೆ ಕೇವಲ ಐದು ಶೌಚಾಲಯಗಳಿದ್ದು, 80 ಬಾಲಕಿಯರಿಗೆ ಅಗತ್ಯ ಪ್ರಮಾಣದ ಶೌಚಾಲಯ ಸೌಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮಕ್ಕಳ ಆರೋಗ್ಯದ ಮೇಲೂ ಈ ಅವ್ಯವಸ್ಥೆ ಪರಿಣಾಮ ಬೀರುತ್ತಿದೆ ಎನ್ನಲಾಗಿದ್ದು, ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿನಿಯೊಬ್ಬರು ಶಾಲೆಯ ಕೊಠಡಿಯಲ್ಲೇ ಮಲಗಿರುವ ದೃಶ್ಯವೂ ಕಂಡುಬಂದಿದೆ.

ತಿಂಗಳಿಗೆ ₹1.08 ಲಕ್ಷ ಬಾಡಿಗೆ
ಇಷ್ಟೆಲ್ಲ ಅವ್ಯವಸ್ಥೆಯ ನಡುವೆಯೂ ಮಕ್ಕಳ ವಾಸ್ತವ್ಯಕ್ಕಾಗಿ ತಿಂಗಳಿಗೆ ₹1.08 ಲಕ್ಷ ಬಾಡಿಗೆ ಪಾವತಿಸಲಾಗುತ್ತಿದೆ ಎನ್ನಲಾಗಿದೆ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸೂಕ್ತ ಪರ್ಯಾಯ ಕಟ್ಟಡ ಸಿಗದ ಕಾರಣ ಸದ್ಯದ ವ್ಯವಸ್ಥೆಯಲ್ಲೇ ವಿದ್ಯಾರ್ಥಿಗಳನ್ನು ಇರಿಸಬೇಕಾಗಿದೆ ಎಂದು ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಸುರಕ್ಷಿತ ವಾತಾವರಣ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ವಿದ್ಯಾರ್ಥಿಗಳನ್ನು ಸೂಕ್ತ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಜೊತೆಗೆ ಶೌಚಾಲಯ, ಕುಡಿಯುವ ನೀರು, ಗಾಳಿ-ಬೆಳಕು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ ವಸತಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕಾದ ಸರ್ಕಾರಿ ವ್ಯವಸ್ಥೆಯಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿರುವುದು ವ್ಯವಸ್ಥೆಯ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
