ಶ್ಲೋಕ – 02
ಭಗವಾನುವಾಚ ।
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।
ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥೨॥
ಭಗವಾನ್ ಉವಾಚ –ಭಗವಂತ ಹೇಳಿದನು :
ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।
ಸಾತ್ವಿಕೀ ರಾಜಸೀ ಚ ಏವ ತಾಮಸೀ ಚ ಇತಿ ತಾಂ ಶೃಣು – ಜೀವಿಗಳ ಹುಟ್ಟುಗುಣದಿಂದಲೆ ಹುಟ್ಟಿಬರುವ ಈ ನಂಬಿಕೆ ಮೂರು ತೆರನಾಗಿದೆ: ಸಾತ್ವಿಕ, ರಾಜಸ, ಮತ್ತು ತಾಮಸ. ಅದರ ಬಗೆಯನ್ನಾಲಿಸು.
ಸಾಧನಾ ಶರೀರದಲ್ಲಿರುವ ಜೀವಗಳು ಮೂಲಭೂತವಾಗಿ ಮೂರು ತೆರನಾಗಿರುತ್ತವೆ. ಅದು ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಮೇಲೆ ಪರಿಸರದ ಮತ್ತು ಮನೆತನದ ಪ್ರಭಾವದಿಂದ ಮಾನಸಿಕವಾಗಿ ನಾವು ಮತ್ತೆ ಮೂರು ತೆರನಾದ ಶ್ರದ್ಧೆಯನ್ನು ಬೆಳಸಿಕೊಳ್ಳುತ್ತೇವೆ. ಆದ್ದರಿಂದ ಸ್ವರೂಪತಃ ಸಾತ್ವಿಕನಾಗಿದ್ದರೂ ಕೂಡ ಆತ ಮಾನಸಿಕವಾಗಿ ರಾಜಸನಾಗಿರಬಹುದು ಅಥವಾ ತಾಮಸನಾಗಿರಬಹುದು. ಉದಾಹರಣೆಗೆ ಸ್ವರೂಪತಃ ಸಾತ್ವಿಕರಾಗಿದ್ದ ಗರ್ಗಾಚಾರ್ಯರು ತಾಮಸ ಪ್ರಭಾವಕ್ಕೊಳಗಾಗಿ ಕೃಷ್ಣನನ್ನು ಸೋಲಿಸುವ ಮಗ ಹುಟ್ಟಬೇಕು ಎಂದು ತಪಸ್ಸನ್ನಾಚರಿಸಿರುವ ಕಥೆಯನ್ನು ಹಿಂದೆ ನೋಡಿದ್ದೇವೆ. ಮಾನಸಿಕವಾಗಿ ಬರುವ ಈ ಬಾಹ್ಯ ಶ್ರದ್ಧೆ ಜನ್ಮ ಜನ್ಮಾಂತರದ್ದಲ್ಲ. ಆದರೆ ಸ್ವರೂಪ ಶ್ರದ್ಧೆ ಪ್ರತಿ ಜನ್ಮದಲ್ಲೂ ಸದಾ ಜೀವನೊಂದಿಗಿರುತ್ತದೆ. ಇದನ್ನು ಸ್ಪಷ್ಟಪಡಿಸುವುದಕ್ಕೋಸ್ಕರ ಈ ಶ್ಲೋಕದಲ್ಲಿ ‘ಏವ’ ಮತ್ತು ‘ಚ’ ಕಾರವನ್ನು ಒಟ್ಟಿಗೆ ಬಳಸಿದ್ದಾರೆ. ಜೀವಸ್ವರೂಪ- ಸಾತ್ವಿಕೇವ, ರಾಜಸ್ಯೇವ ಅಥವಾ ತಾಮಸ್ಯೇವ-ಅದು ಬದಲಾಗುವುದಿಲ್ಲ. ಈ ಸ್ವರೂಪದ ಮೇಲಿರುವ ಬಾಹ್ಯ ಶ್ರದ್ಧೆ- ಸಾತ್ವಿಕೇಚ, ರಾಜಸೇಚ, ತಾಮಸೇಚ-ಪ್ರಭಾವದಿಂದ ಬರುವಂಥದ್ದು, ಗರಿಷ್ಠ ಒಂದು ಜನ್ಮಕ್ಕೆ ಮೀಸಲಾಗಿರುವಂತದ್ದು. “ಈ ಮೂರು ವಿಧವಾದ ಶ್ರದ್ಧೆಯ ಬಗೆಯನ್ನಾಲಿಸು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.
