ನವದೆಹಲಿ: ಆದ್ಯತಾ ವಲಯಗಳಲ್ಲಿ ನೀಡಲಾಗುವ ಸಾಲಗಳಿಗೆ ಬ್ಯಾಂಕುಗಳು ವಿಪರೀತ ಶುಲ್ಕಗಳನ್ನು ಹೇರುವಂತಿಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ಅದರಲ್ಲೂ 50,000 ರೂವರೆಗಿನ ಸಣ್ಣ ಸಾಲಗಳಿಗೆ ಶುಲ್ಕಗಳ ಹೊರೆಯಾಗಬಾರದು ಎಂದು ರಿಸರ್ವ್ ಬ್ಯಾಂಕ್ ಬಹಳ ಸ್ಪಷ್ಟವಾಗಿ ಹೇಳಿದೆ.
ಬಡ್ಡಿ ಮತ್ತು ಪ್ರೋಸಸಿಂಗ್ ಶುಲ್ಕ ಅಲ್ಲದೇ ಬ್ಯಾಂಕುಗಳು ಅಡ್ಮಿನಿಸ್ಟ್ರೇಶನ್ ಫೀಸ್, ಸರ್ವಿಸ್ ಫೀಸ್, ಇನ್ಸ್ಫೆಕ್ಷನ್ ಫೀಸ್ ಇತ್ಯಾದಿ ಶುಲ್ಕಗಳನ್ನು ವಿಧಿಸಬಹುದು. ಈ ಹೆಚ್ಚುವರಿ ಶುಲ್ಕಗಳನ್ನು ಸಣ್ಣ ಸಾಲಗಳಿಗೆ ವಿಧಿಸಬೇಡಿ ಎಂಬುದು ಆರ್ಬಿಐ ಮಾಡಿರುವ ಅಪ್ಪಣೆ.
ಆದ್ಯತಾ ವಲಯಗಳಲ್ಲಿನ ಸಣ್ಣ ಸಾಲಗಳಿಗೆ ಸಂಬಂಧಿಸಿದಂತೆ ಆರ್ಬಿಐ ಈ ಆದೇಶ ನೀಡಿದೆ. ಇಲ್ಲಿ ಕೃಷಿ ಸಾಲ, ಎಂಎಸ್ಎಂಇ ಸಾಲ, ರಫ್ತು ಉದ್ದಿಮೆಗಳಿಗೆ ಸಾಲ, ಶಿಕ್ಷಣ ಸಾಲ, ಗೃಹಸಾಲ, ನವೀಕರಣ ಇಂಧನ ಯೋಜನೆಗಳಿಗೆ ಸಾಲ, ದಲಿತರಿಗೆ ಸಾಲ, ಸಣ್ಣ ರೈತರಿಗೆ ಸಾಲ, ಕುಶಲಕರ್ಮಿಗಳಿಗೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮುಂತಾದವು ಆದ್ಯತಾ ವಲಯಗಳ ಸಾಲಗಳ ಅಡಿ ಬರುತ್ತವೆ.
