ಕೆ.ಆರ್.ಪೇಟೆ: ಕರ್ನಾಟಕ ರಾಜಕೀಯದಲ್ಲಿ ಮಂಡ್ಯ ಜಿಲ್ಲೆ ಎಂದರೆ ಅದು ಒಂದು ವಿಶೇಷ ಅಧ್ಯಾಯ. ಹಣ, ಜಾತಿ, ತ್ಯಾಗ, ಪ್ರತಿಷ್ಠೆ ಎಲ್ಲವೂ ಬೆರೆತ ರಾಜಕೀಯ ನೆಲಗಟ್ಟು. ದೆಹಲಿಯ ಹೈಕಮಾಂಡ್ ಕೂಡ ಮಂಡ್ಯದತ್ತ ತಿರುಗಿ ನೋಡುವಂತಹ ರಾಜಕೀಯ ಇಲ್ಲಿನದು. ಅಂತಹ ಮಂಡ್ಯ ಜಿಲ್ಲೆಯ ಅತ್ಯಂತ ಕುತೂಹಲಕಾರಿ ಕ್ಷೇತ್ರ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗ ಮತ್ತೊಂದು ಬಿಗ್ ಡ್ರಾಮಾ ಶುರುವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳು ಅಂದರೆ ಒಂದೂವರೆ ರಿಂದ ಎರಡು ವರ್ಷ ಬಾಕಿ ಇರುವಾಗಲೇ ಮೈತ್ರಿ ಟಿಕೆಟಿಗಾಗಿ ಭಾರಿ ಪೈಪೋಟಿ ತೆರೆಮರೆಯಲ್ಲಿ ಜೋರಾಗಿ ನಡೆದಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆ ಒಂದು ದೊಡ್ಡ ಸವಾಲಾಗಿದೆ. ಅದರಲ್ಲೂ ಕೆ.ಆರ್.ಪೇಟೆ ಕ್ಷೇತ್ರ ಮೈತ್ರಿಯ ಕಗ್ಗಂಟಿಗೆ ಸಿಲುಕಿರುವ ಪ್ರಮುಖ ಕ್ಷೇತ್ರ. ಇಲ್ಲಿ ಮೈತ್ರಿ ಮಿತ್ರರೇ ಈಗ ಶತ್ರುಗಳಂತೆ ಟಿಕೆಟಿಗಾಗಿ ಹೋರಾಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಏಕೈಕ ಶಾಸಕ ಅಸ್ತ್ರದೊಂದಿಗೆ ಹೆಚ್.ಟಿ.ಮಂಜು:
2023ರ ವಿಧಾನಸಭಾ ಚುನಾವಣೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ಗೆ ದೊಡ್ಡ ಆಘಾತ ನೀಡಿತ್ತು. ಜಿಲ್ಲೆಯ ಘಟಾನುಘಟಿ ನಾಯಕರು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವರು ಸೋಲು ಕಂಡಿದ್ದರು.ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಬಹುತೇಕ ನೆಲಕಚ್ಚಿತ್ತು. ಆದರೆ ಅಂತಹ ಕೆಟ್ಟ ಸಂದರ್ಭದಲ್ಲೂ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಶಾಸಕ ಹೆಚ್.ಟಿ.ಮಂಜು ಅವರು ಗೆಲುವು ಸಾಧಿಸಿ ಪಕ್ಷದ ಅಸ್ತಿತ್ವ ಉಳಿಸಿದ್ದರು. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಶಾಸಕ ಎಂಬ ಹೆಗ್ಗಳಿಕೆ ಅವರಿಗಿದೆ. ಈಗ ಅದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಜೆಡಿಎಸ್ ಬಣ ಹೆಚ್.ಟಿ.ಮಂಜು ಅವರಿಗೆ ಮತ್ತೆ ಮೈತ್ರಿ ಟಿಕೆಟ್ ನೀಡಬೇಕು ಎಂದು ವಾದಿಸುತ್ತಿದೆ. ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಿದವರಿಗೆ ಟಿಕೆಟ್ ನೀಡುವುದು ನ್ಯಾಯ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಕಸರತ್ತು ನಡೆಸುತ್ತಿದ್ದಾರೆ.
*ಕಮಲ ಅರಳಿಸಿದ ಇತಿಹಾಸದೊಂದಿಗೆ ಕೆ.ಸಿ.ನಾರಾಯಣಗೌಡ:*
ಇತ್ತ ಬಿಜೆಪಿ ಬಣದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿ ಕಮಲ ಅರಳಿಸಿದ ಇತಿಹಾಸ ಅವರ ಹೆಸರಿನಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಬರಲು ಕಾರಣರಾದವರಲ್ಲಿ ಕೆ.ಸಿ.ನಾರಾಯಣಗೌಡ ಪ್ರಮುಖರು.ಪಕ್ಷಕ್ಕಾಗಿ ತಾವು ಮಾಡಿದ ತ್ಯಾಗ, ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದನ್ನು ಮುಂದಿಟ್ಟುಕೊಂಡು ಈ ಬಾರಿ ಮೈತ್ರಿ ಟಿಕೆಟ್ ತಮಗೆ ಸಿಗಬೇಕು ಎಂದು ಅವರು ಬಿಜೆಪಿ ರಾಷ್ಟ್ರ -ರಾಜ್ಯ ನಾಯಕರು ಹಾಗೂ ದೆಹಲಿ ವರಿಷ್ಠರನ್ನು ಭೇಟಿ ಮಾಡಿ ತೀವ್ರ ಲಾಬಿ ನಡೆಸುತ್ತಿದ್ದಾರೆ.
ಪೋಸ್ಟ್ ವಾರ್ ಮತ್ತು ಕಾರ್ಯಕರ್ತರಲ್ಲಿ ಗೊಂದಲ:
ಈ ಇಬ್ಬರು ನಾಯಕರ ನಡುವಿನ ಪೈಪೋಟಿ ಎಷ್ಟರ ಮಟ್ಟಿಗೆ ಹೋಗಿದೆ ಎಂದರೆ, ಕ್ಷೇತ್ರದಲ್ಲಿ ಈಗಾಗಲೇ ‘ನಮಗೆ ಫಿಕ್ಸ್ ಟಿಕೆಟ್, ನಮಗೆ ಟಿಕೆಟ್ ಫಿಕ್ಸ್’ ಎಂದು ಎರಡೂ ಬಣಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವಾರ್ ಶುರು ಮಾಡಿದ್ದಾರೆ. ಇದು ಮೈತ್ರಿ ಪಕ್ಷದ ಒಗ್ಗಟ್ಟಿಗೆ ಹಿನ್ನಡೆಯಾಗುವ ಆತಂಕವೂ ಇದೆ. ಒಂದೆಡೆ ಜೆಡಿಎಸ್ ಕಾರ್ಯಕರ್ತರು ನಮ್ಮ ಶಾಸಕರೇ ಮುಂದುವರೆಯಬೇಕು ಎಂದರೆ, ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಈ ಬಾರಿ ಕಮಲಕ್ಕೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹೈಕಮಾಂಡ್ಗೆ ತಲೆನೋವು, ಮೂರನೇ ಅಭ್ಯರ್ಥಿಗೆ ಚಾನ್ಸ್?
ಇಬ್ಬರ ನಡುವಿನ ಈ ತೀವ್ರ ಪೈಪೋಟಿ ಈಗ ಬಿಜೆಪಿ ಮತ್ತು ಜೆಡಿಎಸ್ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಮತ್ತೊಬ್ಬರು ಬಂಡಾಯ ಏಳುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರ ಜಟಾಪಟಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮೂರನೇ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ ಎಂಬ ಮಾತು ರಾಜಕೀಯ ಪಂಡಿತರ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ ಇನ್ನೂ ಎರಡು ವರ್ಷ ಚುನಾವಣೆ ಬಾಕಿ ಇರುವಾಗಲೇ ಕೆ.ಆರ್.ಪೇಟೆ ಮೈತ್ರಿ ಟಿಕೆಟಿಗಾಗಿ ದೋಸ್ತಿಗಳ ಫೈಟ್ ಜೋರಾಗಿ ನಡೆದಿದ್ದು, ಮಂಡ್ಯ ಜಿಲ್ಲೆಯ ರಾಜಕೀಯದಲ್ಲಿ ಮತ್ತೊಮ್ಮೆ ಬಿಸಿ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ, ದೋಸ್ತಿಗಳ ಈ ಜಟಾಪಟಿಗೆ ಬ್ರೇಕ್ ಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
