ಬೇಲೂರು: ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ, ಇಷ್ಟಲಿಂಗ ಮಹಾಪೂಜೆ, ಧರ್ಮಜಾಗೃತಿ ಸಮಾವೇಶ, ಶಿವದೀಕ್ಷೆ, ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಹಾಗೂ ವಧು-ವರರ ನೋಂದಣಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸೆ.30 ಮತ್ತು ಅ.1ರಂದು ಬೇಲೂರಿನಲ್ಲಿ ಆಯೋಜಿಸಲಾಗಿದೆ.
ಬೇಲೂರು ತಾಲ್ಲೂಕು ವೀರಶೈವ ಪುರೋಹಿತರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ಉದ್ಘಾಟನಾ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಲಿದ್ದು, ಹರ-ಗುರು-ಚರಮೂರ್ತಿಗಳ ನೇತೃತ್ವದಲ್ಲಿ ಪುರೋಹಿತರು, ಸಕಲ ಸದ್ಭಕ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಸೆ.30ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ
ಸೆ.30ರಂದು ಬುಧವಾರ ಬೆಳಗ್ಗೆ 6 ಗಂಟೆಯಿಂದ ಗಂಗಾ ಪೂಜೆ, ಗೋಪೂಜೆ, ನಂದಾದೀಪಾರಾಧನೆ, ಮಹಾಸಂಕಲ್ಪ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ನಾಂದಿಸಮಾರಾಧನೆ, ಪಂಚಗವ್ಯ ಪ್ರಾಶನ ಹಾಗೂ ರಕ್ಷಾ ಬಂಧನ ನಡೆಯಲಿದೆ.
ಬೆಳಗ್ಗೆ 9.15ಕ್ಕೆ ಧರ್ಮಧ್ವಜಾರೋಹಣ ನೆರವೇರಲಿದ್ದು, 10.30ರಿಂದ ಅಂಕುರಾರೋಪಣ, ಮಂಟಪ ದೇವತಾ ಪ್ರತಿಷ್ಠೆ, ಪಂಚಕಲಶ, ಉಮಾಮಹೇಶ್ವರ ಕಲಶ ಆರಾಧನೆ ಹಾಗೂ ದೀಕ್ಷಾಂಗ ಹೋಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ದ್ವಿಚಕ್ರ ವಾಹನ ರ್ಯಾಲಿಯೊಂದಿಗೆ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ ಶುಭಾಗಮನ ಮತ್ತು ಪುರಪ್ರವೇಶ ನಡೆಯಲಿದೆ. ಬೇಲೂರಿನ ನೆಹರು ನಗರದಿಂದ ರಾಜಬೀದಿಯ ಮೂಲಕ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಸಮುದಾಯ ಭವನ (ವೀರಶೈವ ಕಲ್ಯಾಣ ಮಂಟಪ)ದವರೆಗೆ ಮೆರವಣಿಗೆ ಸಾಗಲಿದೆ.
ಜಾನಪದ ಕಲಾ ತಂಡಗಳು, ವಿವಿಧ ಮಂಗಳವಾದ್ಯಗಳು, ಸುಮಂಗಲಿಯರ ಮಂಗಳ ಕಲಶ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಗುವುದು. ಬಳಿಕ ಅಡ್ಡಪಲ್ಲಕ್ಕಿ ಮಹೋತ್ಸವವು ವೈಭವದಿಂದ ನಡೆಯಲಿದೆ.
ಸಂಜೆ 6 ಗಂಟೆಯಿಂದ ಧರ್ಮಜಾಗೃತಿ ಹಾಗೂ ಭಾವೈಕ್ಯ ಸಮಾವೇಶ ನಡೆಯಲಿದೆ.

ಅ.1ರಂದು ಶಿವದೀಕ್ಷೆ, ಇಷ್ಟಲಿಂಗ ಮಹಾಪೂಜೆ
ಅ.1ರಂದು ಗುರುವಾರ ಬೆಳಗ್ಗೆ 4.30ರಿಂದ ಶಿವದೀಕ್ಷಾ ವಟುಗಳಿಗೆ ಚಿಕ್ಕಮಗಳೂರಿನ ಶಂಕರದೇವರ ಮಠದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರಿಂದ ಅಂಗ-ಲಿಂಗ ಸಂಸ್ಕಾರ, ಮಂತ್ರೋಪದೇಶ, ಪಾದೋದಕ ಹಾಗೂ ಪ್ರಸಾದ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀ ಜಗದ್ಗುರು ಮಹಾಸನ್ನಿಧಿಯವರಿಂದ ಶುಭಾಶೀರ್ವಾದ ಇರಲಿದೆ.
ಬೆಳಗ್ಗೆ 8 ಗಂಟೆಯಿಂದ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ನಡೆಯಲಿದ್ದು, ಶ್ರೀ ಶಿವಾಚಾರ್ಯರಿಂದ ಧರ್ಮೋಪದೇಶ ಹಾಗೂ ಜಗದ್ಗುರು ಮಹಾಸನ್ನಿಧಿಯವರಿಂದ ಶುಭಾಶೀರ್ವಾದ ಸಂದೇಶ ಇರಲಿದೆ. ನಂತರ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧರ್ಮಾಭಿಮಾನಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಜಗದ್ಗುರು ಮಹಾಸನ್ನಿಧಿಯವರ ದರ್ಶನ ಪಡೆದು, ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಪೂಜಾ ಸಮಿತಿ ಹಾಗೂ ವೀರಶೈವ ಲಿಂಗಾಯತ ಪುರೋಹಿತ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಪೂಜಾ ಸಮಿತಿಯ ನೇತೃತ್ವವನ್ನು ದೊಡ್ಡಗದ್ದವಳ್ಳಿ, ಹಾಸನದ ಶ್ರೀ ವೇ.ಡಿ.ಎ. ದೇವರಾಜ ಶಾಸ್ತ್ರಿಗಳು ಹಾಗೂ ಕೊಡ್ಲಿಪೇಟೆಯ ಕುರುವಂಗಿ ಮಠದ ಶ್ರೀ ವೇ. ಸೋಮಶೇಖರ ಶಾಸ್ತ್ರಿಗಳು ವಹಿಸಿದ್ದಾರೆ. ಟ್ರಸ್ಟ್ನ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಕಲ ಸಮಾಜದ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
- ಶಿವಕುಮಾರ್ ಕಟ್ಟಾಯ
