ಶ್ಲೋಕ – 17
ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ ತ್ರಿವಿಧಂ ನರೈಃ ।
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ವಿಕಂ ಪರಿಚಕ್ಷತೇ ॥೧೭॥
ಶ್ರದ್ಧಯಾ ಪರಯಾ ತಪ್ತಂ ತಪಃ ತತ್ ತ್ರಿವಿಧಂ ನರೈಃ ।
ಅಫಲ ಆಕಾಂಕ್ಷಿಭಿಃ ಯುಕ್ತೈಃ ಸಾತ್ವಿಕಂ ಪರಿಚಕ್ಷತೇ –ಈ ಮೂರೂ ಬಗೆಯ ತಪಸ್ಸನ್ನು ತುಂಬು ನಂಬಿಕೆಯಿಂದ, ಫಲದ ಬಯಕೆಯಿಲ್ಲದೆ, ಭಗವದರ್ಪಣಭಾವದಿಂದ ಆಚರಿಸಿದಾಗ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ.
ತಪಸ್ಸಿನ ಹಿಂದೆ ಶ್ರೇಷ್ಠವಾದ ಶ್ರದ್ಧೆ-ಪ್ರಾಮಾಣಿಕತೆ ಇದ್ದರೆ ಅದು ಸಾತ್ವಿಕ ತಪಸ್ಸಾಗುತ್ತದೆ. ಭಗವಂತನ ಪಾರಮ್ಯದ ಎಚ್ಚರದಿಂದ, ಭಗವಂತ ಪ್ರೀತನಾಗಲಿ ಎನ್ನುವ ಅನುಸಂಧಾನದಿಂದ ಮಾಡುವ ಪ್ರತಿಯೊಂದು ಕ್ರಿಯೆ-ಸಾತ್ವಿಕ ಕ್ರಿಯೆ ಎನಿಸುತ್ತದೆ. ಉದಾಹರಣೆಗೆ ಗುರುವಿಗೆ ನಮಸ್ಕರಿಸುವಾಗ ಆ ಗುರುವಿನ ಅಂತರ್ಗತನಾಗಿರುವ ಭಗವಂತನಿಗೆ ನಮಸ್ಕರಿಸುತ್ತಿದ್ದೇನೆ ಎನ್ನುವ ಅನುಸಂಧಾನ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದರ್ಪಣ ಬುದ್ಧಿ ಇರಬೇಕು. ಮಂತ್ರಗಳು ಹೇಳುವುದೂ ಇದನ್ನೆ . “ಅನೇನ ಭಗವಾನ್ ಗೋಪಾಲಕೃಷ್ಣ ಪ್ರಿಯತಃ-ಶ್ರೀ ಕೃಷ್ಣಾರ್ಪಣ ಮಸ್ತು” ಎಂದು ಹೇಳುವಾಗ ನಮ್ಮಲ್ಲಿ ಕೂಡ ಪೂರ್ಣ ಅರ್ಪಣಾ ಭಾವ ತುಂಬಿರಬೇಕು. ಇಂತಹ ತಪಸ್ಸು ಸಾತ್ವಿಕ ತಪಸ್ಸೆನಿಸುತ್ತದೆ.
