ಕೊರಟಗೆರೆ:- ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದಲ್ಲಿ ರಾಯಲ್ ಚಾಲೆಂಜರ್ಸ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಬೃಹತ್ ಓಪನ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಅರಸಾಪುರದ ರಾಯಲ್ ಚಾಲೆಂಜರ್ಸ್ ತಂಡ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ
ಬೆಂಗಳೂರಿನ ಆರ್.ಆರ್. ನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ತುಮಕೂರು, ಕೊರಟಗೆರೆ, ಮಧುಗಿರಿ, ಗೌರಿಬಿದನೂರು ಸೇರಿದಂತೆ ವಿವಿಧ ಭಾಗಗಳಿಂದ 20ಕ್ಕೂ ಹೆಚ್ಚು ಪ್ರಮುಖ ತಂಡಗಳು ಈ ಸರಣಿಯಲ್ಲಿ ಪಾಲ್ಗೊಂಡಿದ್ದವು. ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅರಸಾಪುರದ ರಾಯಲ್ ಚಾಲೆಂಜರ್ಸ್ ಪ್ರಥಮ ಸ್ಥಾನ ಪಡೆದರೆ, ಗೌರಿಬಿದನೂರು ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದ ರವಿ ಸ್ಪಾರ್ಕ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪ್ರಥಮ ಸ್ಥಾನ ಪಡೆದ ಆತಿಥೇಯ ರಾಯಲ್ ಚಾಲೆಂಜರ್ಸ್ ತಂಡಕ್ಕೆ ₹22,222 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಗ್ರಾಮದ ಯುವ ಮುಖಂಡ ನಯಾಜ್ ಅಹಮದ್ ಮತ್ತು ಅವರ ಕುಟುಂಬದವರು ವಿತರಿಸಿದರು. ದ್ವಿತೀಯ ಸ್ಥಾನ ಪಡೆದ ಕೆ.ಟಿ.ಹಳ್ಳಿಯ ರವಿ ಸ್ಪಾರ್ಕ್ ತಂಡಕ್ಕೆ ₹11,111 ನಗದು ಹಾಗೂ ಟ್ರೋಫಿಯನ್ನು ಗ್ರಾಮದ ಮುಖಂಡ ಎ.ಎನ್. ಮಂಜುನಾಥ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡದವರು ಪ್ರದಾನ ಮಾಡಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಯುವ ಮುಖಂಡ ನಯಾಜ್ ಅಹಮದ್, “ಕ್ರೀಡೆಯಲ್ಲಿ ಗೆಲುವು-ಸೋಲಿಗಿಂತ ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಸ್ನೇಹಭಾವ ಮುಖ್ಯ. ಗ್ರಾಮೀಣ ಯುವಕರ ಪ್ರತಿಭೆಗೆ ಕ್ರೀಡೆಗಳು ಉತ್ತಮ ವೇದಿಕೆಯಾಗಿದ್ದು, ಗೆದ್ದಾಗ ವಿನಯದಿಂದಿರಬೇಕು, ಸೋತಾಗ ಧೈರ್ಯದಿಂದ ಪಾಠ ಕಲಿತು ಮುಂದಿನ ಯಶಸ್ಸಿಗೆ ಶ್ರಮಿಸಬೇಕು” ಎಂದು ಸಲಹೆ ನೀಡಿದರು.

*ನಾಸಿಕ್ ಡೋಲ್ಗೆ ಕುಣಿದು ವಿಜಯೋತ್ಸವ:*
ಸ್ವಂತ ಊರಿನ ರಾಯಲ್ ಚಾಲೆಂಜರ್ಸ್ ತಂಡ ಕಿರೀಟ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಅರಸಾಪುರ ಗ್ರಾಮದಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು. ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರು ಹಾಗೂ ಗ್ರಾಮಸ್ಥರು ನಾಸಿಕ್ ಡೋಲ್ ವಾದ್ಯದ ತಾಳಕ್ಕೆ ಹೆಜ್ಜೆ ಹಾಕುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ವಿಜಯೋತ್ಸವ ಆಚರಿಸಿದರು.
ಟೂರ್ನಿಯಲ್ಲಿ ಭಾಗವಹಿಸಿದ್ದ ಎಲ್ಲಾ ಆಟಗಾರರಿಗೆ ಹಾಗೂ ಸಾರ್ವಜನಿಕರಿಗೆ ರಾಯಲ್ ಚಾಲೆಂಜರ್ಸ್ ತಂಡ ಮತ್ತು ಗ್ರಾಮದ ಅಸ್ಲಾಂ ಪಾಷಾ ಅವರ ಸಹಕಾರದೊಂದಿಗೆ ಸುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ನೂರಾರು ಕ್ರೀಡಾಭಿಮಾನಿಗಳು, ಕ್ರೀಡಾ ಪ್ರೋತ್ಸಾಹಿಗಳು ಆಗಮಿಸಿ ಪಂದ್ಯಗಳನ್ನು ವೀಕ್ಷಿಸಿ ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದರು.
ವರದಿ – ಶ್ರೀನಿವಾಸ್ ಕೊರಟಗೆರೆ
