ಅಧ್ಯಾಯ-1
ಶ್ಲೋಕ – 35
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ॥೩೫॥
ಏತಾನ್ ನ ಹಂತುಮ್ ಇಚ್ಛಾಮಿ ಘ್ನತಃ ಅಪಿ ಮಧುಸೂದನ ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋಃ ಕಿಮ್ ನು ಮಹೀ ಕೃತೇ-
ಓ ಮಧುಸೂದನ, ನನ್ನನ್ನು ಕೊಲ್ಲಬಂದರೂ ನಾನಿವರನ್ನು ಕೊಲ್ಲಬಯಸೆ. ಮೂರು ಲೋಕದ ದೊರೆತನಕ್ಕಾಗಿ ಕೂಡಾ. ಇನ್ನು ಭೂಮಿಯ ಮಾತೇನು? ನನಗೆ ಇವರನ್ನು ಕೊಲ್ಲುವ ಬಯಕೆ ಇಲ್ಲ. ಒಂದು ವೇಳೆ ಅವರು ನನ್ನನ್ನು ಕೊಲ್ಲ ಬಂದರೂ ಕೂಡಾ ನಾನವರನ್ನು ಕೊಲ್ಲಲಾರೆ. ಇಡೀ ಬ್ರಹ್ಮಾಂಡದ ಒಡೆತನ ಸಿಗುತ್ತದೆ ಎಂದರೂ ಕೂಡಾ ನಾನು ಯುದ್ಧ ಮಾಡಲಾರೆ. ಅಂಥದ್ದರಲ್ಲಿ ಈ ತುಂಡು ಭೂಮಿಗಾಗಿ ಏಕೆ ಯುದ್ಧ?
ಇಲ್ಲಿ ಅರ್ಜುನ ಶ್ರೀಕೃಷ್ಣನನ್ನು ‘ಮಧುಸೂದನ‘ ಎಂದು ಸಂಬೋಧಿಸಿದ್ದಾನೆ. ಮಧು ಎಂದರೆ ಆನಂದ. ಮಧುಸೂದನ ಎಂದರೆ ಆನಂದ ನಾಶಕ. ಧರ್ಮ ಮಾರ್ಗವನ್ನು ಬಿಟ್ಟು, ಅಧರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ಧಾರ ಮಾಡುವ ಆನಂದರೂಪಿ ಭಗವಂತ ಮಧುಸೂದನ. “ಸಾತ್ವಿಕರಿಗೆ ಆನಂದವನ್ನು ಕೊಟ್ಟು ತಾಮಸಿಗಳ ಆನಂದ ಹರಣ ಮಾಡುವ ನೀನು ಏನು ಮಾಡಲು ಬಂದವ?” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. “ಯುದ್ಧ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ” ಎಂದು ಅರ್ಜುನ ತನ್ನ ತುಮುಲವನ್ನು ಕೃಷ್ಣನಲ್ಲಿ ವ್ಯಕ್ತಪಡಿಸುತ್ತಾನೆ.

[…] ಭಗವದ್ಗೀತೆ – ದಿನಕ್ಕೊಂದು ಶ್ಲೋಕ – 35 https://vicharavisthara.com/bhagavad-gita-shloka-35-2/ […]