ಶ್ಲೋಕ – 18
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ ।
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ ॥೧೮॥
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ ।
ಕರಣಂ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮಸಂಗ್ರಹಃ –ಕರ್ಮ ವಿಧಿಯ ಉದ್ದೇಶ ಮೂರು: ಮಾಡಬೇಕೆಂಬ ಅರಿವು, ಅದಕ್ಕಾಗಿ ಅರಿಯಬೇಕಾದ ಕರ್ಮ,ಕರ್ಮಫಲ ಮತ್ತು ಅರಿತು ಮಾಡುವವನು. [ಕರ್ಮಕ್ಕೆ ಕಾರಣವಾದ ಭಗವಂತನ ಪ್ರೇರಣೆ ಅವನ ಸ್ವರೂಪವೇ. ಆದ್ದರಿಂದ ಮುಮ್ಮುಖವಾದ ಅದು ಅರಿವಿನ ರೂಪ, ಎಲ್ಲರೂ ಅರಿಯಬೇಕಾದಂಥದು ಮತ್ತು ಎಲ್ಲವನ್ನೂ ಬಲ್ಲುದು] ಕರ್ಮದ ಕಾರಣವೂ ಅಡಕವಾಗಿ ಮೂರು ತೆರ: ಉಪಕರಣ, ಮಾಡುವಿಕೆ ಮತ್ತು ಮಾಡುವವನು.
ವಿಧಿನಿಷೇಧ ಇರುವುದು ನಮ್ಮ ಜ್ಞಾನಕ್ಕಾಗಿ. “ಭಗವಂತನನ್ನು ‘ನಾನು’ ತಿಳಿದುಕೊಳ್ಳಬೇಕು” ಎನ್ನುವುದಕ್ಕಾಗಿ ಕರ್ಮದ ವಿಧಿನಿಷೇಧ. ಕರ್ಮ ಮಾಡುವುದು ಕರ್ಮಕ್ಕಾಗಿ ಅಲ್ಲ-ಜ್ಞಾನಕ್ಕಾಗಿ. ಕರ್ಮದ ವಿಧಾನದ ಹಿಂದಿರುವುದು ಕಾರುಣ್ಯ. ಜ್ಞಾನವಿಲ್ಲದ ಲೋಕಕ್ಕೆ ಭಗವಂತನ ಜ್ಞಾನ-ಆ ಜ್ಞಾನಕ್ಕೆ ಪೂರಕವಾಗಿ ಕರ್ಮ. ಕರ್ಮದ ಹಿಂದಿರುವ ಪ್ರೇರಣೆ ಮೂರು: ಜ್ಞಾನ, ಜ್ಞೇಯ ಮತ್ತು ಜ್ಞಾತಾ. ಒಂದು ಕ್ರಿಯೆಯನ್ನು ಮಾಡಬೇಕು ಅನ್ನುವ ಅರಿವು; ಆ ಕ್ರಿಯೆಯನ್ನು ಮಾಡಲು ಅರಿಯಬೇಕಾದ ಕರ್ಮ; ಮತ್ತು ಕರ್ಮವನ್ನು ಅರಿತು ಕರ್ಮವನ್ನು ಮಾಡುವವನು. ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವುದು ಕರ್ಮದ ಹಿಂದಿನ ಮೂಲಪ್ರೇರಣೆ. ಕರ್ಮ ಮಾಡುವುದು ನಮ್ಮ ತಿಳಿಗೇಡಿತನವನ್ನು ಕಳಚಿಕೊಂಡು ಜ್ಞಾನವನ್ನು ಪಡೆಯುವುದಕ್ಕೋಸ್ಕರ; ನಮ್ಮ ಅರಿವನ್ನು ಬೆಳೆಸುವುದಕ್ಕೊಸ್ಕರ; ಆ ಅರಿವು ಭಗವನ್ಮುಖವಾಗುವುದಕ್ಕೊಸ್ಕರ. ನಾವು ಅರಿವುಳ್ಳವರಾಗುವುದಕ್ಕೊಸ್ಕರವೇ ಕರ್ಮವಿಧಿನಿಷೇಧ ಶಾಸ್ತ್ರಕಾರರಿಂದ ಬಂತು.
ಜೀವನಿಗೆ ಕರ್ಮ ಮಾಡಬೇಕು ಎನ್ನುವ ಪ್ರೇರಣೆ ಮಾಡುವವ-ಭಗವಂತ. ಅದಕ್ಕನುಗುಣವಾಗಿಯೇ ಜೀವ ಕರ್ಮ ಮಾಡುತ್ತಾನೆ. ಯಾವ ಜೀವ ಏನು ಆಗಬೇಕು ಎನ್ನುವುದು ಆ ಜೀವದ ಸ್ವರೂಪಕ್ಕೆ ಸಂಬಂಧಪಟ್ಟ ವಿಚಾರ. ಆದರೆ ಸ್ವಯಂ ಜೀವನಿಗೆ ಅದನ್ನು ಅಭಿವ್ಯಕ್ತಗೊಳಿಸುವ ಶಕ್ತಿ ಇಲ್ಲ. ಭಗವಂತ ಆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಆತನಲ್ಲಿ ಪ್ರೇರಣೆ ಮಾಡುತ್ತಾನೆ. ಭಗವಂತನ ಪ್ರೇರಣೆಯಿಂದ ಜೀವಯೋಗ್ಯತೆ ವ್ಯಕ್ತವಾಗುತ್ತದೆ ಮತ್ತು ಅದಕ್ಕನುಗುಣವಾಗಿ ಜೀವ ಕರ್ಮದಲ್ಲಿ ತೊಡಗುತ್ತಾನೆ. ಇಲ್ಲಿ ಎಲ್ಲವೂ ಮೂಲತಃ ಭಗವದ್ ಸ್ವರೂಪ. ಭಗವಂತನ ಜ್ಞಾನ-ಭಗವದ್ ಸ್ವರೂಪ, ಭಗವಂತನ ಕ್ರಿಯೆ-ಭಗವದ್ ಸ್ವರೂಪ, ಭಗವಂತನ ಪ್ರೇರಣೆ-ಭಗವದ್ ಸ್ವರೂಪ. ಭಗವಂತನ ಸ್ವರೂಪ ನೇರ ನಮ್ಮ ಮೇಲೆ ಕೆಲಸ ಮಾಡುತ್ತಿರುತ್ತದೆ. ಅವನೇ ಜ್ಞಾನ, ಅವನೇ ಜ್ಞೇಯ, ಅವನೇ ಜ್ಞಾತೃ. ಆದ್ದರಿಂದ ಅವನ ಪ್ರೇರಣೆ-ಜ್ಞಾನಸ್ವರೂಪ; ಅವನ ಪ್ರೇರಣೆ- ಜ್ಞಾತೃಸ್ವರೂಪ; ಅವನ ಪ್ರೇರಣೆ-ಜ್ಞೇಯ. ಹೀಗೆ ಜ್ಞಾನಸ್ವರೂಪನಾದ ಭಗವಂತನ ಪ್ರೇರಣೆಯಿಂದ ಜೀವ ಕರ್ಮ ಮಾಡುತ್ತಾನೆ ಮತ್ತು ಎಲ್ಲವೂ ಅವನ ಅಧೀನವಾಗಿ ನಡೆಯುತ್ತದೆ.
ಒಟ್ಟಿನಲ್ಲಿ ಕರ್ಮದ ಕಾರಣಗಳನ್ನು ಅಡಕವಾಗಿ ಹೇಳಬೇಕೆಂದರೆ ಅವು ಮೂರು ವಿಧ: ದೇಹ ಇಂದ್ರಿಯಾದಿ ಉಪಕರಣಗಳು, ಮಾಡುವಿಕೆ(ಕರ್ಮ) ಮತ್ತು ಕರ್ತಾ(ಜೀವ,ಭಗವಂತ ಮತ್ತು ಅದೃಷ್ಟ).
