ಬೆಂಗಳೂರು: ಮಕ್ಕಳ ಕಲ್ಪನೆ ಮತ್ತು ಸೃಜನಶೀಲತೆಗೆ ದೊಡ್ಡ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸತ್ತ್ವ ಸಮೂಹವು ‘ವರ್ಲ್ಡ್ ಆಫ್ ವಂಡರ್ಸ್’ ಎಂಬ ವಿಶೇಷ ಉಪಕ್ರಮಕ್ಕೆ ಚಾಲನೆ ನೀಡಿದೆ. ಈ ಅಭಿಯಾನದಡಿ ಆಯ್ಕೆಯಾದ ಮಕ್ಕಳ ಕಲಾಕೃತಿಗಳು ಬೆಂಗಳೂರಿನ ಉತ್ತರ ಭಾಗದಲ್ಲಿರುವ ಸತ್ತ್ವ ಸಿಟಿ ವಸತಿ ಸಮುಚ್ಚಯದ ಸುತ್ತಮುತ್ತಲಿನ ಬೃಹತ್ ಹೊರಾಂಗಣ ಜಾಹೀರಾತು ಫಲಕಗಳಲ್ಲಿ (ಹೋರ್ಡಿಂಗ್ಗಳು) ಪ್ರದರ್ಶನಗೊಳ್ಳಲಿವೆ.
ಐದರಿಂದ 13 ವರ್ಷದ ಮಕ್ಕಳಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ಈ ಉಪಕ್ರಮವು ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದೆ. ಮಕ್ಕಳ ಚಿತ್ರಕಲೆಗಳನ್ನು ಕೇವಲ ಡ್ರಾಯಿಂಗ್ ಪುಸ್ತಕಗಳಿಗೆ ಸೀಮಿತಗೊಳಿಸದೆ, ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಮೂಲಕ ಅವರ ಕಲ್ಪನೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ.
2026ರ ಅಕ್ಟೋಬರ್ 28ರಿಂದ ನವೆಂಬರ್ 9ರವರೆಗೆ ಸ್ಪರ್ಧೆಗೆ ಕಲಾಕೃತಿಗಳನ್ನು ಸಲ್ಲಿಸಬಹುದಾಗಿದೆ. ನೀಡಿರುವ ವಿಷಯದ ಆಧಾರದ ಮೇಲೆ ಮಕ್ಕಳು ತಮ್ಮದೇ ಆದ ಮೂಲ ಕಲಾಕೃತಿಯನ್ನು ರಚಿಸಬೇಕು. ಪೋಷಕರು ಅಥವಾ ಪಾಲಕರು #SattvaCityWorldOfWonders ಹ್ಯಾಶ್ಟ್ಯಾಗ್ ಬಳಸಿ, @Sattvagroupindia ಖಾತೆಯನ್ನು ಟ್ಯಾಗ್ ಮಾಡುವ ಮೂಲಕ ಇನ್ಸ್ಟಾಗ್ರಾಮ್ ಅಥವಾ ಫೇಸ್ಬುಕ್ನಲ್ಲಿ ಸಾರ್ವಜನಿಕವಾಗಿ ಕಲಾಕೃತಿಯನ್ನು ಹಂಚಿಕೊಳ್ಳಬಹುದು. ಇಲ್ಲವೇ marketing@sattvagroup.in ಇಮೇಲ್ ವಿಳಾಸಕ್ಕೂ ಕಳುಹಿಸಬಹುದು.
ಸೃಜನಶೀಲತೆ, ಸ್ವಂತಿಕೆ ಹಾಗೂ ನೀಡಲಾದ ವಿಷಯಕ್ಕೆ ಹೊಂದಾಣಿಕೆಯನ್ನು ಆಧರಿಸಿ ಅತ್ಯುತ್ತಮ ಕಲಾಕೃತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಚಿತ್ರಗಳ ಮೂಲ ಕಲಾತ್ಮಕತೆಯನ್ನು ಉಳಿಸಿಕೊಂಡೇ ಹೊರಾಂಗಣ ಪ್ರದರ್ಶನಕ್ಕೆ ಸೂಕ್ತವಾಗುವಂತೆ ಅಳವಡಿಸಲಾಗುತ್ತದೆ.
ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ಆಯ್ಕೆಯಾದ ಕಲಾಕೃತಿಗಳ ಅಂತಿಮ ಪ್ರದರ್ಶನವನ್ನು ಅನಾವರಣಗೊಳಿಸಲಾಗುತ್ತದೆ. ಈ ಮೂಲಕ ಮಕ್ಕಳ ಆಲೋಚನೆಗಳು ಮತ್ತು ಕಲ್ಪನೆಗಳು ಬೆಂಗಳೂರಿನ ನಗರ ಸೌಂದರ್ಯದ ಭಾಗವಾಗಲಿವೆ.
